ADVERTISEMENT

ಜೀವನದ ಉನ್ನತಿಗೆ ದುಡಿಮೆ ಮುಖ್ಯ

ಶರನ್ನವರಾತ್ರಿ ದಸರಾ ದರ್ಬಾರ್‌ ಧರ್ಮ ಸಮಾರಂಭದಲ್ಲಿ ರಂಭಾಪುರಿಶ್ರೀ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 5:58 IST
Last Updated 14 ಅಕ್ಟೋಬರ್ 2021, 5:58 IST
ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿಯಲ್ಲಿ ನಡೆಯುತ್ತಿರುವ ರಂಭಾಪುರಿಶ್ರೀ ದಸರಾ ದರ್ಬಾರ್‌ ಕಾರ್ಯಕ್ರಮದಲ್ಲಿ ಹುಮನಾಬಾದ್ ತಾಲ್ಲೂಕಿನ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿಯಲ್ಲಿ ನಡೆಯುತ್ತಿರುವ ರಂಭಾಪುರಿಶ್ರೀ ದಸರಾ ದರ್ಬಾರ್‌ ಕಾರ್ಯಕ್ರಮದಲ್ಲಿ ಹುಮನಾಬಾದ್ ತಾಲ್ಲೂಕಿನ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕಡೇನಂದಿಹಳ್ಳಿ (ಶಿರಾಳಕೊಪ್ಪ):ಜೀವನ ಉನ್ನತಿಗೆ ದುಡಿಮೆ, ಶಾಂತಿಯ ಬದುಕಿಗೆ ಭಗವಂತನ ಕೃಪೆ ಇದ್ದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕಡೇನಂದಿಹಳ್ಳಿಯಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್‌ ಧರ್ಮ ಸಮಾರಂಭದ 7ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜೀವಾತ್ಮರಲ್ಲಿ ಪರಮಾತ್ಮ ನೆಲೆಸಿದ್ದಾನೆ. ತನ್ನನ್ನು ತಾನು ದೇವರಿಗಾಗಿ ಧರ್ಮಕ್ಕಾಗಿ ಅರ್ಪಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು. ಜಗತ್ತು ಬೆಳಗಲು ಸೂರ್ಯ ಬೇಕು. ಬದುಕು ಬೆಳೆಯಲು ಗುರು ಬೇಕು. ಪರಮಾತ್ಮನಿಗೂ ಜೀವಾತ್ಮನಿಗೂ ಇರುವ ಸಂಬಂಧವನ್ನು ಸಂಸ್ಕಾರದ ಮೂಲಕ ಗುರು ಕೊಡುತ್ತಾನೆ. ಅವ್ಯಕ್ತವಾಗಿರುವ ಭಗವಂತನನ್ನು ವ್ಯಕ್ತ ರೂಪದಲ್ಲಿ ತೋರಿಸುವಾತನೇ ಗುರು ಎಂಬುದನ್ನು ಮರೆಯಬಾರದು. ತನಗಾಗಿ ಬಯಸುವುದು ಜೀವ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೇವ ಗುಣ. ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದೇ ಇರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆ ಇದೆ ಎನ್ನುವುದನ್ನು ಸದಾ ನೆನಪಿಸಿಕೊಂಡು ಬಾಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ ವೀರಶೈವ ಗುರು ಪರಂಪರೆ ಬೆಳೆಸಿದ 92ನೇ ವಯಸ್ಸಿನ ಹುಮನಾಬಾದ್ ತಾಲ್ಲೂಕಿನ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಸ್ವಾಮೀಜಿ ಶುಭ ಹಾರೈಸಿದರು.

ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಲಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿದರು.

ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಚನ್ನಗಿರಿ ವಿರಕ್ತಮಠದ ಬಸವ ಜಯಚಂದ್ರ ಸ್ವಾಮೀಜಿ, ಕೊಡಿಯಾಲ ಹೊಸಪೇಟೆಯ ಜಗದೀಶ್ವರ ಸ್ವಾಮೀಜಿ, ಶಿವಮೊಗ್ಗ ಉಮೇಶಾರಾಧ್ಯ, ಗಂಗಿಭಾವಿ ಶಶಿಧರ ಯಲಿಗಾರ, ರೈತ ಧ್ವನಿಯ ಬಸವರಾಜ ಕುರುಗೋಡಿ ಅವರಿಗೆ ರಂಭಾಪುರಿಶ್ರೀ ‌ಗುರುರಕ್ಷೆ ನೀಡಿದರು.

ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಸಮ್ಮುಖ ವಹಿಸಿದ್ದರು. ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕುಮಾರಿ ಅನುಷಾ ಶಿವಾನಂದಪ್ಪ ಜಾಡರ ಭರತನಾಟ್ಯ ಪ್ರದರ್ಶಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಕೆ.ಎ. ಮಂಜಪ್ಪ ಸ್ವಾಗತಿಸಿದರು. ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಅರುಣಕುಮಾರ ಐನಳ್ಳಿಮಠ ಸಂಗೀತ ಸೇವೆ ಸಲ್ಲಿಸಿದರು. ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ನಂತರ ಆಕರ್ಷಕ ನಜರ್ ಸಮರ್ಪಣೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.