ADVERTISEMENT

ಅಂಧತ್ವ ಮೀರಿ ಚಂದದ ಸಾಧನೆಗೈದ ಕಾವ್ಯಾ

ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿದ ತಂಡದಲ್ಲಿದ್ದ ರಿಪ್ಪನ್‌ಪೇಟೆಯ ಯುವತಿ; ಸುಧಾರಿಸಬೇಕಿದೆ ಮನೆಯ ಸ್ಥಿತಿ – ನೆರವಿನ ನಿರೀಕ್ಷೆ

ರಿ.ರಾ.ರವಿಶಂಕರ್
Published 6 ಡಿಸೆಂಬರ್ 2025, 7:55 IST
Last Updated 6 ಡಿಸೆಂಬರ್ 2025, 7:55 IST
ರಿಪ್ಪನ್‌ಪೇಟೆ ಸಮೀಪದ ಬರುವೆ ಗ್ರಾಮದಲ್ಲಿರುವ ಕಾವ್ಯಾ ಅವರ ಗುಡಿಸಲು
ರಿಪ್ಪನ್‌ಪೇಟೆ ಸಮೀಪದ ಬರುವೆ ಗ್ರಾಮದಲ್ಲಿರುವ ಕಾವ್ಯಾ ಅವರ ಗುಡಿಸಲು   

ರಿಪ್ಪನ್‌ಪೇಟೆ: ಬಡತನ, ಅಂಧತ್ವದ ಜೊತೆಗೆ ಅನೇಕ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರ ಏರಿದ ದಿಟ್ಟ ಯುವತಿ ಕಾವ್ಯಾ ವಿ. ಆಚಾರ್.

ಶ್ರೀಲಂಕಾದ ಕೊಲಂಬೊದಲ್ಲಿ ಈಚೆಗೆ ನಡೆದ ಅಂಧರ ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಕಾವ್ಯಾ ಕೊಡುಗೆಯೂ ಅಪಾರ.

ಇವರು ಜನಿಸಿದ್ದು, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಬರುವೆ’ ಎಂಬ ಕುಗ್ರಾಮದಲ್ಲಿ. ವೆಂಕಟೇಶ್ ಹಾಗೂ ಜಯಮ್ಮ ದಂಪತಿಯ ಐವರು ಪುತ್ರಿಯರಲ್ಲಿ ಇವರು ನಾಲ್ಕನೇಯವರು.

ADVERTISEMENT

ಜನ್ಮತಃ ಅಂಧರಾಗಿರುವ ಕಾವ್ಯಾ ಸಾಧನೆಯನ್ನು ಈಗ ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ, ಅವರ ಕುಟುಂಬದ ಪರಿಸ್ಥಿತಿ ಈಗಲೂ ದಯನೀಯವಾಗಿದೆ. 15 ವರ್ಷಗಳ ಹಿಂದೆ ಕಟ್ಟಿಸಿದ್ದ ಆಶ್ರಯ ಮನೆ ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಪಕ್ಕದ ಜೋಪಡಿಯಲ್ಲಿ ಸುತ್ತಲೂ ಪ್ಲಾಸ್ಟಿಕ್ ಟಾರ್ಪಾಲ್‌ ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ. 

ಬರುವೆಯ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿವರೆಗೆ ಓದಿದ ಕಾವ್ಯಾ, ನಂತರ ಶಿಕ್ಷಕರ ಸಲಹೆ ಮೇರೆಗೆ ಶಿವಮೊಗ್ಗದ ಶಾರದಾ ಅಂಧರ ಶಾಲೆಗೆ ಸೇರಿದರು. ಅಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಅಲ್ಲಿ ದೊರೆತ ಉತ್ತೇಜನ, ಪ್ರೋತ್ಸಾಹ, ಸಹಕಾರ ಅವರಲ್ಲಿ ಸಾಧನೆಯ ಕನಸು ಚಿಗುರೊಡೆಯುವಂತೆ ಮಾಡಿತ್ತು.  

ಅಥ್ಲೆಟಿಕ್ಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಇವರು ನಂತರ ಹೊರಳಿದ್ದು ಕ್ರಿಕೆಟ್‌ನತ್ತ. ಚೆಂಡು ಹೊರಡಿಸುವ ಶಬ್ದದ ಆಧಾರದಲ್ಲಿ ಅದು ಎತ್ತ ಬರುತ್ತಿದೆ ಎಂದು ನಿಖರವಾಗಿ ಅಂದಾಜಿಸಿ ಅದನ್ನು ಬೌಂಡರಿ, ಸಿಕ್ಸರ್‌ಗೆ ಅಟ್ಟುವ ಕಲೆ ಕರಗತ ಮಾಡಿಕೊಂಡರು. ಕ್ರಮೇಣ ಒಂದೊಂದೇ ಪಟ್ಟುಗಳನ್ನು ಕಲಿತು ಆಟದಲ್ಲಿ ಪರಿಣತಿ ಸಾಧಿಸಿದರು. ನಂತರ ಜಿಲ್ಲೆ, ರಾಜ್ಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದರು.

ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿನ ಸಮರ್ಥನಂ ಸ್ವಯಂ ಸೇವಾ ಸಂಸ್ಥೆಗೆ ಸೇರಿದ ಮೇಲೆ, ಅವರ ಬದುಕಿನ ದಿಕ್ಕು ಬದಲಾಯಿತು. ಅಲ್ಲಿ ಕಠಿಣ ತರಬೇತಿ ಪಡೆದು ಆಲ್‌ರೌಂಡರ್‌ ಆಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಈಗ ಇತರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರ ಯಶಸ್ಸಿನ ಪಯಣ ಪ್ರೇರಣಾದಾಯಕ.

‘ನಾಲ್ಕು ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಿದರೂ ಮಗಳ ಬದುಕು ಬದಲಾಗಿರಲಿಲ್ಲ. ಆಕೆ ಊರಿಗೆ ಬಂದು ಕೆಲ ದಿನ ಮನೆಯಲ್ಲಿ ಇರುತ್ತಿದ್ದಳು. ಮರಳಿ ಬೆಂಗಳೂರಿಗೆ ಕಳುಹಿಸಲು ನಮ್ಮ ಬಳಿ ಹಣ ಇರಲಿಲ್ಲ. ಅವರಿವರ ಬಳಿ ಅಂಗಲಾಚಿದರೂ ಯಾರೂ ನಯಾಪೈಸೆ ನೀಡಲಿಲ್ಲ. ಆಗ ಮನಸ್ಸಿಗೆ ತುಂಬಾ ನೋವಾಗಿತ್ತು’ ಎಂದು ಕಾವ್ಯಾ ತಂದೆ ವೆಂಕಟೇಶ್‌ ನೊಂದು ನುಡಿದರು.

‘ನಮ್ಮ ಸ್ಥಿತಿ ಕಂಡ ಮಹಾನುಭಾವರೊಬ್ಬರು ಮನೆಗೇ ಬಂದು ₹ 10 ಸಾವಿರ ನಗದನ್ನು ಮಗಳ ಕೈಗೆ ಕೊಟ್ಟಿದ್ದರು. ದೇವರ ದಯೆಯಿಂದ ಈಗ ಆಕೆ ಎತ್ತರದ ಸಾಧನೆ ಮಾಡಿದ್ದಾಳೆ. ಆ ಮೂಲಕ ನಮ್ಮೂರಿಗೆ, ಇಡೀ ದೇಶಕ್ಕೇ ಕೀರ್ತಿ ತಂದಿದ್ದಾಳೆ. ಮುಂದೆಯೂ ಆಕೆಯ ಭವಿಷ್ಯ ಉಜ್ವಲವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಭಾವುಕರಾದರು.  

ದನದ ಕೊಟ್ಟಿಗೆಯಲ್ಲಿ ಕರುಗಳನ್ನು ಮುದ್ದಿಸುತ್ತಿರುವ ಕಾವ್ಯಾ
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿದ್ದ ಕಾವ್ಯಾ
ಸ್ಥಳೀಯರುಕಾವ್ಯಾಳನ್ನು ಸನ್ಮಾನಿಸುತ್ತಿರುವುದು. ತಂದೆ–ತಾಯಿ ಹಾಗೂ ಕುಟುಂಬದವರೂ ಜೊತೆಗಿದ್ದಾರೆ
ಹಾರ–ತುರಾಯಿಗಳ ಸನ್ಮಾನಕ್ಕಿಂತ ಕಾವ್ಯಾ ಮತ್ತು ಆಕೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತಾಗಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು
ಹಬೀಬ್ ಎಂ.ಜೆ ರಿಪ್ಪನ್‌ಪೇಟೆ ನಿವಾಸಿ
ಕಾವ್ಯಾಳ ಸಾಧನೆಯನ್ನು ಗುರುತಿಸಿ ಕೇಂದ್ರ ಇಲ್ಲವೇ ರಾಜ್ಯ ಸರ್ಕಾರ ಸರ್ಕಾರಿ ನೌಕರಿ ನೀಡಬೇಕು. ಆಕೆ ಮತ್ತು ಆಕೆಯ ಮನೆಯವರ ಜೀವನಕ್ಕೆ ಭದ್ರತೆ ಒದಗಿಸಬೇಕು 
ಆರ್.ರಾಘವೇಂದ್ರ ರಿಪ್ಪನ್‌ಪೇಟೆ ನಿವಾಸಿ
ಕಾವ್ಯಾ ಅವರ ಕುಟುಂಬಕ್ಕೆ ವಾಸಿಸಲು ಯೋಗ್ಯ ಮನೆ ನಿರ್ಮಾಣ ಮಾಡಿಕೊಡಬೇಕು. ಇದಕ್ಕಾಗಿ ದಾನಿಗಳು ಸಂಘ–ಸಂಸ್ಥೆಗಳು ಕಾರ್ಪೊರೇಟ್‌ ಕಂಪನಿ ನೆರವಾಗಬೇಕು 
ದೇವದಾಸ್ ಆರ್‌.ಎಚ್ ವಿಶ್ವಕರ್ಮ ಸಮಾಜದ ಮುಖಂಡ

‘ನೋವು ಅವಮಾನಗಳನ್ನು ಮೆಟ್ಟಿ ನಿಂತೆ’

‘ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬುದು ಅಪ್ಪನ ಕನಸಾಗಿತ್ತು. ಈ ಕಾರಣಕ್ಕೇ ಅವರು ಬಡತನವನ್ನೂ ಲೆಕ್ಕಿಸದೆ ಶಿವಮೊಗ್ಗದ ಅಂಧರ ಶಾಲೆಗೆ ಸೇರಿಸಿದರು. ನನ್ನನ್ನು ಅಲ್ಲಿ ಬಿಟ್ಟು ಬರಲು ಮನಸ್ಸಿಲ್ಲದಿದ್ದರೂ ಕಠಿಣ ನಿರ್ಧಾರ ಕೈಗೊಂಡರು. ಆಗ ಊರಿನಿಂದ ಶಿವಮೊಗ್ಗಕ್ಕೆ ಹೋಗಲು ಬಸ್‌ ಟಿಕೆಟ್‌ಗೂ ಅವರ ಬಳಿ ದುಡ್ಡಿರಲಿಲ್ಲ. ಅದಕ್ಕಾಗಿ ಅವರಿವರ ಬಳಿ ಸಾಲ ಮಾಡಿದ್ದಿದೆ. ಹಸಿವಿನಿಂದ ಬಳಲುತ್ತಿದ್ದ ನನಗೆ ಆಗ ಉಪಾಹಾರ ಕೊಡಿಸಲೂ ಆಗದ ಸ್ಥಿತಿಯಲ್ಲಿ ಅವರಿದ್ದರು.

ಆ ದಿನಗಳನ್ನು ನೆನಪಿಸಿಕೊಂಡಾಗ ಈಗಲೂ ಹೃದಯ ಭಾರವಾಗುತ್ತದೆ’ ಎಂದು ಕಾವ್ಯಾ ಹೇಳಿದರು. ‘ಕಣ್ಣು ಕಾಣುವುದಿಲ್ಲ ಎಂಬ ಕಾರಣಕ್ಕೆ ಜನ ನನ್ನನ್ನು ತಾತ್ಸಾರದಿಂದ ಕಾಣುತ್ತಿದ್ದರು. ಜೊತೆಗೆ ಓದುತ್ತಿದ್ದವರೂ ಕೇವಲವಾಗಿ ನಡೆಸಿಕೊಳ್ಳುತ್ತಿದ್ದರು. ಆ ನೋವು ಅವಮಾನಗಳೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ. ಈ ಸಾಧನೆಗೆ ಮೆಟ್ಟಿಲಾಗಿ ನಿಂತ ಎಲ್ಲಾ ಶಿಕ್ಷಕರಿಗೆ ಆರ್ಥಿಕ ಸಹಕಾರ ನೀಡಿದ ಸ್ವಯಂ ಸೇವಾ ಹಾಗೂ ಸಂಘ ಸಂಸ್ಥೆಗಳಿಗೆ ಆಭಾರಿಯಾಗಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.