ADVERTISEMENT

ಪ್ರೇಕ್ಷಕರ ಗಮನ ಸೆಳೆದ ಮಹಿಳಾ ಯಕ್ಷಗಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:02 IST
Last Updated 30 ಜುಲೈ 2023, 15:02 IST
ಸೊರಬ ಪಟ್ಟಣದ ಶ್ರೀರಂಗ ಕನ್ವೆನ್ಷನ್ ಹಾಲ್‍ನಲ್ಲಿ ಸುರಭಿ ಮಹಿಳಾ ಯಕ್ಷ ಬಳಗದವರು ಚಂದ್ರಾವತಿ ವಿಲಾಸ ಯಕ್ಷಗಾನ ಪ್ರದರ್ಶನ ನೀಡಿದರು
ಸೊರಬ ಪಟ್ಟಣದ ಶ್ರೀರಂಗ ಕನ್ವೆನ್ಷನ್ ಹಾಲ್‍ನಲ್ಲಿ ಸುರಭಿ ಮಹಿಳಾ ಯಕ್ಷ ಬಳಗದವರು ಚಂದ್ರಾವತಿ ವಿಲಾಸ ಯಕ್ಷಗಾನ ಪ್ರದರ್ಶನ ನೀಡಿದರು   

ಸೊರಬ: ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್‍ನಲ್ಲಿ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀ ಸುರಭಿ ಮಹಿಳಾ ಯಕ್ಷ ಬಳಗದವರು ಪ್ರದರ್ಶಿಸಿದ ಚಂದ್ರಾವತಿ ವಿಲಾಸ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು.

ರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ಮಲೆನಾಡು ಭಾಗದ ಸಂಸ್ಕೃತಿ, ಕಲೆಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಹಿಳೆಯರು ಯಕ್ಷ ಬಳಗವನ್ನು ಸ್ಥಾಪಿಸಿಕೊಂಡು ಯಕ್ಷಗಾನ ಪ್ರದರ್ಶನ ನೀಡುತ್ತಿರುವುದು ಮೆಚ್ಚುವಂತಹದ್ದಾಗಿದೆ ಎಂದರು.

ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನವನ್ನು ಮಹಿಳೆಯರು ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮಹಿಳೆಯರು ಕೇವಲ ಒಂದು ತಿಂಗಳಲ್ಲಿ ಯಕ್ಷಗಾನ ಕಲೆಯನ್ನು ಕಲಿತು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸುತ್ತಿರುವವರ ಕಾರ್ಯ ಪ್ರಶಂಸನೀಯವಾಗಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲ್ಲೂಕು ಅಧ್ಯಕ್ಷ ಶಂಕರ್ ಶೇಟ್ ತಿಳಿಸಿದರು.

ADVERTISEMENT

ಮುಮ್ಮೇಳದಲ್ಲಿ ಕೃಷ್ಣನಾಗಿ ವೈಷ್ಣವಿ ಮುರಳಿಧರ್ ಹಾಗೂ ಶ್ವೇತಾ ರಾಮಚಂದ್ರ, ಗೋಪಾಲಕರಾಗಿ ವೀಣಾ ಶ್ರೀಧರ್, ಶೋಭಾ ಸತ್ಯಾ, ಹರ್ಷಿತಾ ಹೆಗಡೆ ಹಾಗೂ ಸುಮಿತ್, ಚಂದ್ರಾವಳಿಯಾಗಿ ಶಮಿತಾ ಬೆನ್ನೂರ್, ರಾಧೆಯಾಗಿ ಅನುಷಾ ನಾವುಡ, ಚಂದಗೋಪನಾಗಿ ಲಕ್ಷ್ಮೀ ಮುರಳಿಧರ್ ನಿರ್ವಹಿಸಿದ ಪಾತ್ರಗಳು ಗಮನ ಸೆಳೆದವು.

ಚುರುಕುನಡೆಯ ನಾಟ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅಜ್ಜಿಯಾಗಿ ಜೈ ಕುಮಾರ್ ಅವರ ಹಾಸ್ಯ ಸಕಾಲಿಕವಾಗಿತ್ತು.

ಹಿಮ್ಮೇಳದಲ್ಲಿ ಸೃಜನ್ ಹೆಗಡೆ ಮಾರುತಿಪುರ ಅವರ ಭಾಗವತಿಕೆ, ಮಂಜುನಾಥ್ ಭಟ್ ಗುಡ್ಡೆದಿಂಬ ಅವರ ಮದ್ದಳೆವಾದನ, ಗಣೇಶ್ ಹೆಗಡೆ ಕೆರೆಕೈ ಅವರ ಚೆಂಡೆವಾದನ ಸಭಿಕರನ್ನು ಮೈನವಿರೇಳಿಸಿತು. ಆಯುಷ್ ವೈದ್ಯಾಧಿಕಾರಿ ಡಾ. ಮುರುಳೀಧರ್, ಬಯಲಾಟ ಹಿರಿಯ ಕಲಾವಿದ ಎಚ್.ಕೆ. ಯಶವಂತಪ್ಪ ಚಂದ್ರಗುತ್ತಿ, ಹಿರಿಯ ನಾಗರಿಕ ಕೆ.ಪ್ರಭಾಕರ್ ರಾಯ್ಕರ್, ಕಲಾ ಪೋಷಕ ದಿವಾಕರ್ ಭಾವೆ, ದಿನಕರ ಭಟ್ ಭಾವೆ, ಶ್ರೀಧರ್ ನೆಮ್ಮದಿ, ಹನುಮಂತಪ್ಪ ಮಾಸ್ತರ್, ನಾಗರಾಜ ಗುತ್ತಿ, ಹರ್ಷಾ ಹೆಗಡೆ, ಜೆ.ಎಸ್. ಚಿದಾನಂದಗೌಡ,ಶ್ರೀವತ್ಸ ಎಸ್. ಆಚಾರ್, ಪ್ರಜ್ವಲ್ ಚಂದ್ರಗುತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.