ADVERTISEMENT

ತಂದೆಯವರ ಪ್ರೇರಣೆಯಿಂದ ಜೇನುಕೃಷಿ: ಹೆನಗೆರೆ ಗ್ರಾಮದ ಯುವಕ ಕಿರಣ್‌ಕುಮಾರ್

ತ್ಯಾಗರ್ತಿ ಸಮೀಪದ ಹೆನಗೆರೆ ಗ್ರಾಮದ ಯುವಕ ಕಿರಣ್‌ಕುಮಾರ್

ಪಾವನಾ ನೀಚಡಿ
Published 25 ಮೇ 2022, 4:15 IST
Last Updated 25 ಮೇ 2022, 4:15 IST
ಜೇನು ಸಾಕಣೆಯಲ್ಲಿ ತೊಡಗಿಕೊಂಡಿರುವ ಹೆನಗೆರೆ ಗ್ರಾಮದ ಕಿರಣ್ ಕುಮಾರ್
ಜೇನು ಸಾಕಣೆಯಲ್ಲಿ ತೊಡಗಿಕೊಂಡಿರುವ ಹೆನಗೆರೆ ಗ್ರಾಮದ ಕಿರಣ್ ಕುಮಾರ್   

ತ್ಯಾಗರ್ತಿ: ಸಮೀಪದ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನಗೆರೆ ಗ್ರಾಮದ ಯುವಕ ಕಿರಣ್‌ಕುಮಾರ್ ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ.

ಕಿರಣ್‌ಕುಮಾರ್‌ ಅವರ ತಂದೆಯವರು ಜೇನು ಸಾಕಣೆ ನಡೆಸುತ್ತಿದ್ದರು. ಅವರೊಂದಿಗೆ ತಾವೂ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇವರ ಮನೆಯ ಸುತ್ತಮುತ್ತ ಅಡಿಕೆ ತೋಟ, ಭತ್ತದ ಗದ್ದೆ, ಖುಷ್ಕಿ ಜಮೀನುಗಳಿದ್ದು, 30ಕ್ಕೂ ಹೆಚ್ಚು ಜೇನು ಕುಟುಂಬಗಳನ್ನು ಸಾಕಿದ್ದಾರೆ.

ತಮ್ಮ ಸಂಬಂಧಿಕರು ಮತ್ತು ಪರಿಚಿತರ ಮನೆಗಳಿಂದ ಖಾಲಿ ಇರುವ ಜೇನು ಪೆಟ್ಟಿಗೆ ತಂದು ದುರಸ್ತಿಗೊಳಿಸಿ ಜೇನು ಸಾಕಣೆ ನೆಡೆಸಿದ್ದಾರೆ. ಅತಿ ಉಷ್ಣತೆ ಬಿಡುಗಡೆ ಮಾಡುವ ಮರದ ಪೆಟ್ಟಿಗೆಯಲ್ಲಿ ಜೇನು ಹುಳುಗಳು ವಾಸ ಮಾಡದೆ ಹಾರಿ ಹೋಗುತ್ತವೆ. ಉಷ್ಣತೆಯನ್ನು ನಿಯಂತ್ರಿಸುವ ಮರಗಳಾದ ನಂದಿ, ಸಾಗುವಾನಿ, ಮತ್ತಿ, ಮಾವು ಇತ್ಯಾದಿ ಕೆಲ ನಿರ್ದಿಷ್ಟ ಮರದ ಹಲಗೆಯಿಂದ ಮಾಡಿದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಹುಳುಗಳು ವಾಸಿಸುತ್ತವೆ ಎಂಬುದು ಇವರ ಅನುಭವದ ಮಾತು.

ADVERTISEMENT

ತಮ್ಮ ಜಮೀನಿನ ಸುತ್ತಮುತ್ತ ಇರುವ ಕಾಡು ಪ್ರದೇಶ, ಮರದ ಪೊಟರೆ, ಗೆದ್ದಲು ಹುತ್ತ, ಇಳಿಜಾರು ದರೆ, ಜಂಬಿಟ್ಟಿಗೆ ಕಲ್ಲಿನ ಸಂದು ಇತ್ಯಾದಿಗಳಲ್ಲಿ ಗೂಡು ಕಟ್ಟಿರುವ ತುಡುವೆ ಜೇನನನ್ನು ಹಿಡಿದು ತಂದು ಚಾಕಚಕ್ಯತೆಯಿಂದ ಮರದ ಪೆಟ್ಟಿಗೆಯಲ್ಲಿ ಇರಿಸಿ ಸಾಕಣೆ ನಡೆಸುತ್ತಾರೆ. ಮುಖ್ಯ ಕೃಷಿಯ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಬಿಡುವು ಮಾಡಿಕೊಂಡು ಜೇನು ಪೆಟ್ಟಿಗೆಯಲ್ಲಿನ ಜೇನು ಹುಳುಗಳ ಚಲನವಲನ, ಆರೋಗ್ಯ ಗಮನಿಸುತ್ತಾರೆ. ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳೊಳಗೆ ರಾಣಿಯಾಗುವ ಮೊಟ್ಟೆಯನ್ನು ಗುರುತಿಸಿ ಜೇನು ಕುಟುಂಬ ಇಬ್ಭಾಗಗೊಳಿಸಿ ಜೇನು ಕುಟುಂಬವನ್ನು ಹೆಚ್ಚಿಸುತ್ತಾರೆ. ಒಂದು ಕುಟುಂಬದಿಂದ 3 ಕುಟುಂಬಗಳಾಗಿಸಿ ಒಂದು ಜೇನು ಕುಟುಂಬಕ್ಕೆ ₹ 500ರಿಂದ ₹ 800ಕ್ಕೆ ಮಾರಿ ಆದಾಯ ಗಳಿಸುತ್ತಿದ್ದಾರೆ.

ಫೆಬ್ರುವರಿ ಮೊದಲ ವಾರದಿಂದ ಮೇವರೆಗೂ ಜೇನು ಹುಳುಗಳು ಸುತ್ತಮುತ್ತಲ ವಿವಿಧ ಮರ, ಗಿಡ, ಬಳ್ಳಿಗಳ ಹೂವಿನಿಂದ ಮಧು ಸಂಗ್ರಹಿಸಿ ತುಪ್ಪ ತಯಾರಿಸುತ್ತವೆ. ಜೂನ್‌ನಿಂದ ಅಕ್ಟೋಬರ್ ಆರಂಭದವರೆಗೂ ಮಳೆಗಾಲದಲ್ಲಿ ಇವುಗಳಿಗೆ ಸಾಕಷ್ಟು ಹೂವು ಮತ್ತು ತುಪ್ಪದ ಅಂಶ ಸಿಗುವುದಿಲ್ಲ. ಆ ಸಮಯದಲ್ಲಿ ಜೇನು ಹುಳುಗಳಿಗೆ ಸಕ್ಕರೆ ಪಾಕ, ಬಾಳೆ ಹಣ್ಣು ಇತ್ಯಾದಿ ಸಿಹಿ ಪದಾರ್ಥಗಳನ್ನು ಜೇನು ಪೆಟ್ಟಿಗೆಯ ಸಮೀಪ ಇಟ್ಟು ಆಹಾರ ನೀಡುತ್ತಾರೆ.

ಇರುವೆ, ಓತಿಕಾಟ, ದುಂಬಿ ಇತ್ಯಾದಿಗಳು ಜೇನು ಹುಳುಗಳ ಮೊಟ್ಟೆ ತಿನ್ನದಂತೆ ಕಾಪಾಡಲು ಕಬ್ಬಿಣದ ಪೈಪ್ ಬಳಸಿ ಸ್ಟ್ಯಾಂಡ್ ನಿರ್ಮಿಸಿ ಈ ಸ್ಟ್ಯಾಂಡ್‌ಗಳ ಮಧ್ಯಭಾಗದಲ್ಲಿ ಸ್ಟೀಲ್ ಕಪ್‌ಗಳನ್ನು ವೆಲ್ಡಿಂಗ್ ಮಾಡಿಸಿ ನೀರು ತುಂಬಿಸಿಟ್ಟಿದ್ದಾರೆ. ಜೇನಿನ ಅರಿಯಿಂದ ತುಪ್ಪ ಬೇರ್ಪಡಿಸಲು ತಿರುಗಿಸುವ ಯಂತ್ರ ಬಳಸುತ್ತಾರೆ. ಇದರಿಂದ ಜೇನು ತುಪ್ಪ ಸುಲಭವಾಗಿ ಬೇರ್ಪಡಿಸಿ ಬಾಟಲಿಗಳಲ್ಲಿ ಸಂಗ್ರಹಿಸಲು ಅನುಕೂಲವಾಗುತ್ತದೆ. ಪ್ರಸಕ್ತ ವರ್ಷ 30 ಪೆಟ್ಟಿಗೆ ನಿರ್ವಹಿಸಿ 116 ಕೆ.ಜಿ. ಜೇನುತುಪ್ಪ ಸಂಗ್ರಹಿಸಿ ಕೆ.ಜಿ.ಗೆ ₹ 500ರಂತೆ ಮಾರಾಟ ಮಾಡಿ ₹ 58 ಸಾವಿರ ಆದಾಯ ಗಳಿಸಿದ್ದಾರೆ.

ಜೇನು ಪೆಟ್ಟಿಗೆ ದುರಸ್ತಿ, ಕಬ್ಬಿಣದ ಸ್ಟ್ಯಾಂಡ್‌ಗಳ ನಿರ್ವಹಣೆ, ಮಳೆಗಾಲದಲ್ಲಿ ಜೇನು ಹುಳುಗಳಿಗೆ ಆಹಾರ ಇತ್ಯಾದಿಗೆ ₹7 ಸಾವಿರ ವೆಚ್ಚವಾದರೂ ₹51 ಸಾವಿರ ಆದಾಯ ಉಳಿತಾಯವಾಗುತ್ತದೆ. ಮಳೆಗಾಲದಲ್ಲಿ ಜೇನು ಹುಳುಗಳ ನಿರ್ವಹಣೆ ಸರಿಯಾಗಿ ಮಾಡದಿದ್ದರೆ ಹುಳುಗಳು ಪೆಟ್ಟಿಗೆ ಬಿಟ್ಟು ಹಾರಿ ಹೋಗುತ್ತವೆ. ಮತ್ತೆ ಜೇನು ಕುಟುಂಬವನ್ನು ಹುಡುಕಿ ತರುವುದು ಸಾಹಸದ ಕೆಲಸ ಎನ್ನುತ್ತಾರೆ ಕಿರಣ್‌ಕುಮಾರ್‌.

ಇವರ ಸಂಪರ್ಕ ಸಂಖ್ಯೆ: 9731409237

ಪ್ರಾರಂಭಿಕ ದಿನಗಳಲ್ಲಿ ಜೇನು ಕಚ್ಚಿದರೆ ಭಯವಾಗುತ್ತಿತ್ತು. ಆದರೆ, ತಂದೆಯವರ ಮಾರ್ಗದರ್ಶನದಿಂದ ಕೃಷಿಯೊಂದಿಗೆ ಉಪ ಕಸುಬಾಗಿ ಜೇನು ಸಾಕಣೆ ಮಾಡುತ್ತಿದ್ದೇನೆ.
ಕಿರಣ್ ಕುಮಾರ್, ಜೇನು ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.