ADVERTISEMENT

ಉದ್ಘಾಟನೆಗೂ ಮುನ್ನವೇ ತೆರೆಮರೆಗೆ ಸರಿದ ಜಿಪ್‌ಲೈನ್!

ಸಾರ್ವಜನಿಕರ ಹಣ ಪೋಲು: ಪ್ರತಿಭಟನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 7:25 IST
Last Updated 9 ಮಾರ್ಚ್ 2022, 7:25 IST
ಜೋಗದಲ್ಲಿ ನಿರ್ಮಿಸಲಾಗಿದ್ದ ಜಿಪ್‌ಲೈನ್‌ ಕಾಮಗಾರಿ (ಎಡಚಿತ್ರ). ಈಗ ಜಿಪ್‌ಲೈನ್‌ ಕೇಬಲ್‌ ಅನ್ನು ಮರಕ್ಕೆ ಕಟ್ಟಿರುವುದು.
ಜೋಗದಲ್ಲಿ ನಿರ್ಮಿಸಲಾಗಿದ್ದ ಜಿಪ್‌ಲೈನ್‌ ಕಾಮಗಾರಿ (ಎಡಚಿತ್ರ). ಈಗ ಜಿಪ್‌ಲೈನ್‌ ಕೇಬಲ್‌ ಅನ್ನು ಮರಕ್ಕೆ ಕಟ್ಟಿರುವುದು.   

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಭಾರಿ ನಿರೀಕ್ಷೆಗಳೊಂದಿಗೆ ₹ 80 ಲಕ್ಷ ವೆಚ್ಚದಲ್ಲಿ ಸಿದ್ಧವಾದ ಸಾಹಸ ಪ್ರವಾಸೋದ್ಯಮದ ಭಾಗವಾದ ಜಿಪ್ ಲೈನ್, ಉದ್ಘಾಟನೆಗೂ ಮುನ್ನವೇ ತೆರೆ ಮರೆಗೆ ಸರಿದಿದೆ. ಜನರ ಹಣ ಪೋಲಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂಸದ ರಾಘವೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಅತ್ಯಂತ ಆಸಕ್ತಿ ವಹಿಸಿ ಕೋಟಿ ವೆಚ್ಚದಲ್ಲಿ ಜಿಪ್ ಲೈನ್ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದ್ದರು. ಜೋಗದ ರಾಣಿ ಜಲಪಾತದ ನೆತ್ತಿಯ ಎತ್ತರದ ಭಾಗದಲ್ಲಿ ನಿರ್ಮಾಣವಾದ ಜಿಪ್ ಲೈನ್ ನಿಲ್ದಾಣದಿಂದ ಜಲಪಾತದ ಮುಂಭಾಗದಲ್ಲಿ ವೀಕ್ಷಣಾ ಗೋಪುರದ ಮಧ್ಯೆ ನಿರ್ಮಿಸಿರುವ ಕಾಂಕ್ರೀಟ್ ಕಂಬದ ತುದಿಗೆ 960 ಅಡಿ ಆಳದ ಪ್ರಪಾತದಲ್ಲಿ ತಂತಿಯ ಮೇಲೆ ಸಾಹಸಮಯವಾಗಿ ಸಾಗಿಬರುವ ಕಾಮಗಾರಿ ಇದಾಗಿತ್ತು. ಮೈ ನವಿರೇಳುವ ಸಾಹಸಮಯವಾದ ಈ ಕಾಮಗಾರಿಯನ್ನು ಕರ್ನಾಟಕ ಕೈಗಾರಿಕಾ ನಿಗಮ ಗುತ್ತಿಗೆ ಆಧಾರದಲ್ಲಿ ಕೈಗೆತ್ತಿಕೊಂಡು, ಬೆಂಗಳೂರು ಮೂಲದ ‘ಏವಿಯನ್ ಸ್ಪೋರ್ಟ್ಸ್’ ಎಂಬ ಸಂಸ್ಥೆಗೆ ಉಪ ಗುತ್ತಿಗೆ
ನೀಡಿತ್ತು. ಅನನುಭವಿ ಗುತ್ತಿಗೆದಾರ ಮತ್ತು ಕೆಲಸಗಾರರ ಕಾರ್ಯ ನಿರ್ವಹಣೆಯಿಂದ ಆರಂಭದಿಂದಲೇ ಈ ಯೋಜನೆಯ ಬಗ್ಗೆ ಅನೇಕ ಅಪಸ್ವರಗಳು ಎದ್ದಿದ್ದವು. ಆದರೂ ಜೋಗ ನಿರ್ವಹಣಾ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಮಾತ್ರ ಇವುಗಳನ್ನು ಸಾರ್ವಜನಿಕವಾಗಿ ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದರು. ಕಾಮಗಾರಿ ಪೂರ್ಣಗೊಂಡರೂ ತಾಂತ್ರಿಕ ಕಾರಣದಿಂದ ಉದ್ಘಾಟನೆಯನ್ನು ಮುಂದೂಡುತ್ತಲೇ ಬಂದರು.

ಸರ್ಕಾರ ಹಾಲಿ ₹ 185 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಜಿಪ್‌ಲೈನ್ ನಿಲ್ದಾಣ ಮತ್ತು ವೀಕ್ಷಣಾ ಗೋಪುರದ ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ ಕಾರ್ಯಕ್ಕೆ ಸಿದ್ಧತೆಯನ್ನು ಕೆಪಿಸಿ ನಿಗಮದ ಉಸ್ತುವಾರಿಯಲ್ಲಿ ಶಂಕರ ನಾರಾಯಣ ಗುತ್ತಿಗೆ ಕಂಪನಿ ನಡೆಸುತ್ತಿದೆ. ಸ್ಕೈವಾಕ್ ಟವರ್ ನಿರ್ಮಾಣಕ್ಕೆ ಪೂರಕವಾಗಿ ಜಿಪ್‌ಲೈನ್‌ ಮತ್ತು ವೀಕ್ಷಣಾ ಗೋಪುರ ತೆರವು ಕಾರ್ಯ ಆರಂಭವಾಗಿದೆ. ಹೀಗಾದರೆ ಜಿಪ್ ಲೈನ್ ಕಥೆ ಮುಂದೇನು ಎಂಬ ಕುತೂಹಲ ಶರಾವತಿ ಕಣಿವೆಯಲ್ಲಿ ಮೂಡಿದೆ.

ADVERTISEMENT

‘ಭಾರಿ ನಿರೀಕ್ಷೆ ಮೂಡಿಸಿದ್ದ ಜಿಪ್ ಲೈನ್ ಯಾವುದೇ ಯುವ ಸಾಹಸಿಗಳಿಗೆ ಒಂದು ದಿನದ ಮಟ್ಟಿಗೂ ಉಪಯೋಗಕ್ಕೆ ಬಾರದಂತೆ ತೆರೆಯ ಮರೆಗೆ ಸರಿಯುತ್ತಿರುವುದು ಸಾರ್ವಜನಿಕ ಹಣ ಪೋಲಾಗುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ. ಉಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಜೋಗ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಕಾರಣಕ್ಕೆ ಜಲಪಾತ ಪ್ರದೇಶದಲ್ಲಿ ಕಾಮಗಾರಿಗಳಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಇದಕ್ಕೆ ಪ್ರಮುಖ ಸಾಕ್ಷಿಯೇ₹ 80 ಲಕ್ಷದ ವೆಚ್ಚದ ಜಿಪ್ ಲೈನ್ ಕಾಮಗಾರಿ. ಪ್ರಸಕ್ತ ವ್ಯವಸ್ಥೆಯಲ್ಲಿ ಈ ಅವ್ಯವಹಾರವನ್ನು ಪ್ರಶ್ನಿಸುವವರೇ ಇಲ್ಲವಾಗಿದೆ. ಸ್ಥಳೀಯವಾಗಿ ಈ ಬಗ್ಗೆ ಪ್ರತಿಭಟನೆಗೆ ವೇದಿಕೆ ಸಿದ್ಧಪಡಿಸುವುದು ಅನಿವಾರ್ಯ. ಜಿಲ್ಲಾಧಿಕಾರಿಗಳು ಇತ್ತ ಗಮನಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಲ್. ರಾಜಕುಮಾರ್
ಆಗ್ರಹಿಸಿದ್ದಾರೆ.

...........

ಕಾಮಗಾರಿಯಲ್ಲಿ ಯಾವುದೇ ತೊಂದರೆ–ತೊಡಕುಗಳಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಜಿಪ್ ಲೈನ್ ಮರುಸ್ಥಾಪನೆಯಾಗಿ ಕಾರ್ಯ ನಿರ್ವಹಿಸಲಿದೆ.

– ರಾಮಕೃಷ್ಣಯ್ಯ, ಜಂಟಿ ಕಾರ್ಯದರ್ಶಿ, ಜೋಗ ನಿರ್ವಹಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.