ADVERTISEMENT

ಆಂತರಿಕ ಒಪ್ಪಂದ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಟ್ಟು

ಜಿಲ್ಲಾ ಪಂಚಾಯಿತಿಯಲ್ಲಿ 8 ಸ್ಥಾನ ಹೊಂದಿದ್ದರೂ ‘ಕೈ’ಗಿಲ್ಲ ಯಾವುದೇ ಅಧಿಕಾರ

ಚಂದ್ರಹಾಸ ಹಿರೇಮಳಲಿ
Published 17 ನವೆಂಬರ್ 2018, 6:30 IST
Last Updated 17 ನವೆಂಬರ್ 2018, 6:30 IST
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ.
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ.   

ಶಿವಮೊಗ್ಗ:ಜೆಡಿಎಸ್, ಕಾಂಗ್ರೆಸ್ ಮಧ್ಯೆ ನಡೆದ ಆಂತರಿಕ ಒಪ್ಪಂದದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಅವರ 30 ತಿಂಗಳ ಅವಧಿ ಪೂರ್ಣಗೊಂಡಿದ್ದು, ಉಳಿದ ಎರಡೂವರೆ ವರ್ಷ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಟ್ಟು ಹಿಡಿದಿದೆ.

31 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಗೆ 2016ರ ಏಪ್ರಿಲ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವೇದಾ ವಿಜಯ ಕುಮಾರ್ ಸೇರಿ) 16 ಹಾಗೂ ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು. ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ನಿಗದಿಯಾಗಿತ್ತು.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಮೈತ್ರಿ ಏರ್ಪಟ್ಟ ಫಲವಾಗಿ 2016 ಮೇ 5ರಂದು ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದ ಸದಸ್ಯೆ ಜೆಡಿಎಸ್‌ನ ಜ್ಯೋತಿ ಕುಮಾರ್ ಅಧ್ಯಕ್ಷ ಸ್ಥಾನ, ಹಸೂಡಿ ಕ್ಷೇತ್ರದ ಪಕ್ಷೇತರ ಸದಸ್ಯೆ ವೇದಾ ವಿಜಯಕುಮಾರ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

ADVERTISEMENT

ಸರ್ಕಾರದ ಹೊಸ ಆದೇಶದಂತೆ ಅಧ್ಯಕ್ಷರ ಅವಧಿ 5 ವರ್ಷಗಳು. ಒಂದೇ ಮೀಸಲಾತಿ ಐದು ವರ್ಷಕ್ಕೆ ನಿಗದಿ ಮಾಡಿದ್ದ ಕಾರಣ ಆ ಸಮಯದಲ್ಲಿ ಎರಡೂ ಪಕ್ಷಗಳ ಮುಖಂಡರು ಆಂತರಿಕ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಮೊದಲ ಎರಡೂವರೆ ವರ್ಷ ಜೆಡಿಎಸ್, ನಂತರ ಎರಡೂವರೆ ವರ್ಷ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಮ್ಮತಿಸಿದ್ದರು.

ಈ ಮಧ್ಯೆ ಜಿಲ್ಲಾ ಪಂಚಾಯಿತಿ ಆವಿನಹಳ್ಳಿ ಕ್ಷೇತ್ರದ ಸದಸ್ಯ ಕಾಗೋಡು ಅಣ್ಣಪ್ಪ ನಿಧನದ ಪರಿಣಾಮ ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ಸದಸ್ಯ ಬಲ ಸಮವಾಗಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಂಡ ಪರಿಣಾಮ ಮತ್ತೆ ಮೈತ್ರಿಗೆ ಬಲ ಬಂದಿದೆ. ಅಧ್ಯಕ್ಷರ ಬದಲಾವಣೆಯ ಪಟ್ಟು ಬಿಗಿಗೊಂಡಿದೆ.

ಹೆಚ್ಚು ಸ್ಥಾನ ಇದ್ದರೂ ಅಧಿಕಾರ ದೂರ

ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಆದರೂ, ಮೊದಲ ಅವಧಿ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ, ಪಕ್ಷೇತರ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿತ್ತು.

8 ಸ್ಥಾನ ಪಡೆದಿದ್ದ ಕಾಂಗ್ರೆಸ್ ಎರಡು ಸ್ಥಾಯಿ ಸಮಿತಿಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಮೊದಲ 20 ತಿಂಗಳು ಎರಡು ಸ್ಥಾಯಿ ಸಮಿತಿಗಳು ಆ ಪಕ್ಷಕ್ಕೆ ದೊರಕಿದ್ದವು. ಹೊಳೆಹೊನ್ನೂರು ಕ್ಷೇತ್ರದ ರೇಖಾ ಉಮೇಶ್ ಹಾಗೂ ಕುಪ್ಪಳಿ ಕ್ಷೇತ್ರದ ಕಲ್ಪನಾ ಪದ್ಮನಾಭ ಅವರು ಸ್ಥಾಯಿ ಸಮಿತಿ ಅಧಕ್ಷ ಸ್ಥಾನ ಅಲಂಕರಿಸಿದ್ದರು. ಪ್ರಸಕ್ತ ವರ್ಷದ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಸಾಮಾನ್ಯಸಭೆಯಲ್ಲಿ ಬಿಜೆಪಿ ಬಲ ವೃದ್ಧಿಸಿದ ಪರಿಣಾಮ ಇರುವ ಮೂರು ಸ್ಥಾಯಿ ಸಮಿತಿಗಳಲ್ಲಿ ಎರಡು ಬಿಜೆಪಿ ಪಾಲಾಗಿವೆ. ಉಳಿದ ಒಂದು ಸ್ಥಾನವೂ ಕಾಂಗ್ರೆಸ್‌ ಕೈ ತಪ್ಪುವ ಸಾಧ್ಯತೆ ಇದೆ. ಹಾಗಾಗಿ, ಕಾಂಗ್ರೆಸ್‌ಗೆ ಯಾವುದೇ ಅಧಿಕಾರ ಇಲ್ಲವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಕಲ್ಪನಾ ಪದ್ಮನಾಭ, ಅನಿತಾ ಕುಮಾರಿ, ಶ್ವೇತಾ ಬಂಡಿ, ಭಾರತಿ ಬಾಳೆಹಳ್ಳಿ ಪ್ರಭಾಕರ್, ರೇಖಾ ಉಮೇಶ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ, ಉಪಾಧ್ಯಕ್ಷ ಸ್ಥಾನದಲ್ಲಿ ವೇದಾ ಅವರು ಮುಂದುರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.