ADVERTISEMENT

ಕೊನೆಗೂ ಬಗೆಹರಿದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಗೊಂದಲ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 15:30 IST
Last Updated 16 ನವೆಂಬರ್ 2018, 15:30 IST

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ರಚನೆಯ ಗೊಂದಲ ಬಗೆಹರಿದಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮೂರು ಪಕ್ಷಗಳ ಮಧ್ಯೆ ಸಹಮತದ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಮೂರು ಸ್ಥಾಯಿ ಸಮಿತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಕೂಟಕ್ಕ, ಶಿಕ್ಷಣ ಮತ್ತು ಆರೋಗ್ಯ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗಳನ್ನು ಬಿಜೆಪಿಗೆ ಬಿಟ್ಟು ಕೊಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅವಧಿ 30 ತಿಂಗಳು ಇದೆ. ತಲಾ 15 ತಿಂಗಳಿಗೆ ಹಂಚಿಕೆ ಮಾಡಿರುವ ಕಾರಣ 6 ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಗೌರವ ಸಿಗಲಿದೆ. ಮೈತ್ರಿಯ ಮೂಲಕ ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ಉಂಟಾಗಿದ್ದ ಗೊಂದಲ ನಿವಾರಣೆಯಾಗಿದೆ ಎಂದರು.

ADVERTISEMENT

ಮೊದಲ 15 ತಿಂಗಳ ಅವಧಿಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಕೃಷಿ ಮತ್ತು ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ನೀಡಲಾಗಿದೆ. ಉಳಿದ 15 ತಿಂಗಳು ಸಾಮಾಜಿ ನ್ಯಾಯ ಸಮಿತಿ ಬಿಜೆಪಿಗೆ, ಉಳಿದ ಸಮಿತಿಗಳು ಮೈತ್ರಿಕೂಟಕ್ಕೆ ಸಿಗಲಿವೆ. ಪ್ರತಿ ಸ್ಥಾಯಿ ಸಮಿತಿಯಲ್ಲಿ ನಾಲ್ವರು ಬಿಜೆಪಿ ಸದಸ್ಯರು, ಇಬ್ಬರು ಮೈತ್ರಿಕೂಟಕದ ಸದಸ್ಯರು ಇರುತ್ತಾರೆ ಎಂದು ವಿವರ ನಿಡಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಮೂರು ಪಕ್ಷಗಳು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಇಳಿದಿದ್ದವು. ಈ ಬೆಳವಣಿಗೆಗಳ ಪರಿಣಾಮ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಬಾರದು ಎಂಬ ಕಾರಣಕ್ಕೆ ಪರಸ್ಪರ ಸಂದಾನಕ್ಕೆ ಬರಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯರಾದ ಕೆ.ಇ. ಕಾಂತೇಶ್, ವೀರಭದ್ರಪ್ಪ ಪೂಜಾರಿ, ಶಿವಲಿಂಗಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.