ADVERTISEMENT

ಮರಳು ದಂಧೆ ತನಿಖೆಗೆ ಎಸ್‌ಐಟಿ: ಸಚಿವ ಆರ್‌. ಅಶೋಕ್‌

ಗೋಮಾಳ ಒತ್ತುವರಿ: ಕಂದಾಯ ಸಚಿವ ಆರ್‌.ಅಶೋಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:58 IST
Last Updated 29 ಮಾರ್ಚ್ 2022, 19:58 IST
   

ಬೆಂಗಳೂರು: ‘ಭೂ ಕಬಳಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ಈಗಾಗಲೇ ಸರ್ಕಾರ ನಿರ್ಧರಿಸಿದ್ದು, ಅದೇ ದಳದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಸರ್ಕಾರಿ ಗೋಮಾಳ ಒತ್ತುವರಿ ಹಾಗೂ ಫಿಲ್ಟರ್ ಮರಳು ದಂಧೆಯ ತನಿಖೆ ನಡೆಸಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಎಚ್‌.ಎಂ. ರಮೇಶಗೌಡ, ಬಿಜೆಪಿಯ ಎನ್‌. ರವಿಕುಮಾರ್‌, ಕಾಂಗ್ರೆಸ್ಸಿನ ಪಿ.ಆರ್‌. ರಮೇಶ್‌ ಪ್ರಸ್ತಾಪಿಸಿದ ವಿಷಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ‘ತೇಲ್ಗೆರೆ ಗ್ರಾಮದಲ್ಲಿ 211 ಎಕರೆ ಸರ್ಕಾರಿ ಗೋಮಾಳವಿದೆ. ಅದರಲ್ಲಿ 15 ಜನರಿಗೆ 16 ಎಕರೆಯಂತೆ ಮಂಜೂರು ಮಾಡಿರುವುದು ಕೂಡ ಅನುಮಾನಾಸ್ಪದವಾಗಿದೆ. ಕಳೆದ ವರ್ಷ ಈ ಪ್ರಕರಣ ಗಮನಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ತನಿಖೆ ಮಾಡಿಸಲಾಗಿದೆ’ ಎಂದರು.

‘ಸರ್ಕಾರದಿಂದ ಫಿಲ್ಟರ್ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ. ಈ ಜಾಗದಲ್ಲಿ ಅನೇಕ ವರ್ಷ‌ಗಳಿಂದ ಫಿಲ್ಟರ್ ಮರಳು ದಂಧೆ ನಡೆಯುತ್ತಿತ್ತು. ನಮ್ಮ ಸರ್ಕಾರ ಆರೋಪಿಗಳಿಗೆ ₹ 2.18 ಕೋಟಿ ದಂಡ ಹಾಕಿದೆ. ಶಿವಕುಮಾರ್ ಬಿನ್ ಸೊಣ್ಣಪ್ಪ ಎಂಬುವವರು ಮರಳು ದಂಧೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿರುವ ಆರೋಪವಿದೆ. ಫಿಲ್ಟರ್ ಮರಳಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಕಳಪೆ ಮರಳಿನಿಂದ ಮನೆ ಕಟ್ಟಿದ ಪರಿಣಾಮ ಬೆಂಗಳೂರಿನ ಹಲವು ಕಟ್ಟಡಗಳು ಕುಸಿದುಬಿದ್ದಿವೆ’ ಎಂದರು.

ADVERTISEMENT

ರಮೇಶ್ ಗೌಡ, ‘ಗೋಮಾಳದ ಸ್ವತ್ತಿಗೆ ಖಾಸಗಿ ವ್ಯಕ್ತಿಗಳು ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮ ಖಾತೆ ಮೂಲಕ ಭೂ ಕಬಳಿಕೆ ಮಾಡಿದ್ದಾರೆ. ಒತ್ತುವರಿಯಾದ ಜಾಗದಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಸಲಾಗುತ್ತದೆ. ಇದರ ಮೇಲೆ ಈ ಹಿಂದೆ ಲೋಕಾಯುಕ್ತ ದಾಳಿ ನಡೆದಾಗ ಅಕ್ರಮ ಮಾಡುವವರಿಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ನೆರವು ನೀಡಿದ್ದರು’ ಎಂದು ಆರೋಪಿಸಿದರು.

ಎನ್. ರವಿಕುಮಾರ್, ‘ಒತ್ತುವರಿ ಜಮೀನಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು’ ಎಂದು ಆಗ್ರಹಿಸಿದರು.

ಪಿ.ಆರ್‌. ರಮೇಶ್, ‘ಈ ಜಾಗದಲ್ಲಿ ಖಾಸಗಿ ವ್ಯಕ್ತಿಗಳು 12 ಎಕರೆ ಜಾಗದಲ್ಲಿ 20 ಅಡಿ ಆಳದವರೆಗೆ ಕೊರೆದು ಅಕ್ರಮವಾಗಿ ಫಿಲ್ಟರ್ ಮರಳು ಗಣಿಗಾರಿಕೆ ನಡೆಸಿದ್ದಾರೆ. ದೊಡ್ಡ ಮಟ್ಟದಲ್ಲಿ ಅಕ್ರಮ ನಡೆಯುತ್ತಿದ್ದರೂ ಸರ್ಕಾರ ಯಾಕೆ ಮೌನವಾಗಿದೆ’ ಎಂದು ಪ್ರಶ್ನಿಸಿದರು. ಜೆಡಿಎಸ್ಸಿನ ಮರಿತಿಬ್ಬೇಗೌಡ ಕೂಡ ಪ್ರಕರಣದ ತನಿಖೆಗೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.