ADVERTISEMENT

ಅಕ್ಕರೆಯ ಹಪ್ಪಳದ ಅಜ್ಜಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 9:00 IST
Last Updated 19 ಜೂನ್ 2011, 9:00 IST

ತಿಪಟೂರು ನಗರದ ಕೆ.ಆರ್.ಬಡಾವಣೆ ಪಾರ್ಕ್ ಸಮೀಪ 45 ವರ್ಷಗಳಿಂದ ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ಬದುಕು ಸಾಗಿಸುತ್ತಿರುವ ಹಪ್ಪಳದ ಅಜ್ಜಿಯ ಜೀವನಪ್ರೀತಿ ಎಂಥವರಿಗೂ ಅಚ್ಚರಿ!

ಬಡಾವಣೆಯಲ್ಲಿ `ಹಪ್ಪಳದ ಅಜ್ಜಿ~ ಎಂದೇ ಗುರುತಿಸಿಕೊಂಡಿರುವ ಈ ವಿಧವೆಗೆ ಸುಮಾರು 30 ವರ್ಷಗಳಿಂದ ರೇಡಿಯೋನೇ ಸಂಗಾತಿ. ತನ್ನ ಅಕ್ಕರೆಗೆ ತಿಯಾಗಿ ಪ್ರೀತಿ ತೋರುವ ಮಕ್ಕಳ ಒಡನಾಟವೇ ಜೀವನೋತ್ಸಾಹ. ತನ್ನ ಬದುಕಿನ ನೆಲೆ ಮತ್ತು ಸರ್ವಸ್ವವೂ ಆದ ಪೆಟ್ಟಿಗೆ ಅಂಗಡಿ ಪಕ್ಕ ತಾನೇ ಬೆಳೆಸಿದ ನೇರಳೆ ಮರದಿಂದ ಬಿದ್ದ ಹಣ್ಣನ್ನು ಮಕ್ಕಳು ಆರಿಸಿ ಅಜ್ಜಿಗೆ ತಿನ್ನಜ್ಜಿ ಎಂದು ಹೇಳುವಾಗ ಆಕೆಯಲ್ಲಿ ಸಾರ್ಥಕ ಭಾವ.

ಹೌದು, ನಗರದ ಕೆ.ಆರ್.ಬಡಾವಣೆ 3ನೇ ಮುಖ್ಯರಸ್ತೆಯಲ್ಲಿ ಪೆಟ್ಟಿಗೆ ಅಂಗಡಿಯಲ್ಲೇ ಹಪ್ಪಳ, ಉಪ್ಪಿನಕಾಯಿಯನ್ನು ತಾನೇ ತಯಾರಿಸಿ ಮಾರುತ್ತಾ ಅಚ್ಚರಿಯಂತೆ ಬದುಕುತ್ತಿರುವ ಅಜ್ಜಿಗೆ ತನ್ನವರು ಎನ್ನುವವರು ಈಗ ಯಾರೂ ಇಲ್ಲ. ನೆರೆಯವರೇ ಆಸರೆ.

ಅಜ್ಜಿ ಹೆಸರು ನೀಲಮ್ಮ. ಶ್ರವಣಬೆಳಗೊಳ ಸಮೀಪದ ಕೆ.ಹೊಸಹಳ್ಳಿ ಈಕೆಯ ತವರು. 1962ರಲ್ಲಿ ಅರಸೀಕೆರೆ ತಾಲ್ಲೂಕಿನ ಳ್ಳಿಯೊಂದರ ಪುಟ್ಟಸ್ವಾಮಯ್ಯ ಎಂಬುವರ ಕೈ ಹಿಡಿದಾಗ ಹೆಚ್ಚೆಂದರೆ ಆಕೆಗೆ 18 ವರ್ಷ. ಮದುವೆಯಾಗಿ ಆರೇ ತಿಂಗಳಲ್ಲಿ ಪತಿ ನಿಧನರಾದಾಗ ಕನಸು ನುಚ್ಚುನೂರು. ಪತಿ ಮನೆ ಕಡೆಯ ಭದ್ರತೆಯೂ ಸಿಗದೆ ಅಣ್ಣ, ತಮ್ಮಂದಿರಿಲ್ಲದ ತವರಿನಲ್ಲೂ ಅಷ್ಟೇನೂ ಹಿತಕಾರಿ ವಾತಾವರಣ ಇಲ್ಲದೆ ಅತಂತ್ರ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಯಾರೋ ಕರೆತಂದು ಬಿಟ್ಟಿದ್ದರಿಂದ ತಿಪಟೂರಿನ ಒಬ್ಬರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿದ ಅನಿವಾರ್ಯತೆ.

ಸ್ವತಂತ್ರವಾಗಿ  ಬದುಕಬೇಕು ಎಂಬ ಆಸೆಯಲ್ಲಿದ್ದ ಆಕೆಗೆ ಪೆಟ್ಟಿಗೆ ಅಂಗಡಿ ಕನಸು ಹೊಳೆಯಿತು. ಸ್ವಾತಂತ್ರ್ಯ ಹೋರಾಟಗಾರ ಹನುಮಂತಪ್ಪ ಸಹಕಾರದಿಂದ ಪೆಟ್ಟಿಗೆ ಅಂಗಡಿ ಪಡೆದ ಅವರು, 3ನೇ ಮುಖ್ಯ ರಸ್ತೆಯಲ್ಲಿ ಅದನ್ನಿಟ್ಟುಕೊಂಡು ಅಚಲವಾಗಿ ಬದುಕಿನ ದಾರಿ ಹಿಡಿದರು.

ಆಕೆ ತಯಾರಿಸಿದ ಹಪ್ಪಳ, ಉಪ್ಪಿನಕಾಯಿ ಬಡಾವಣೆಯಲ್ಲಿ ಬಹುಬೇಗ ಹೆಸರಾಯಿತು. ಮಕ್ಕಳ ಸಾಂಗತ್ಯಕ್ಕೆಂದಷ್ಟೇ ನೇರಳೆ, ಈಚಲ, ಎರದೆ ಹಣ್ಣು, ಸೌತೆ, ಪೆಪ್ಪರಮೆಂಟು ಮಾರುತ್ತಿದ್ದ ಆಕೆಗೆ ಬೇಸರ ನೀಗಿಕೊಳ್ಳುವ ಮಾರ್ಗ ಸಿಕ್ಕಿತು. ಅದೇ ಮಕ್ಕಳು ಮುಂದೆ ತನ್ನ ಬಗ್ಗೆ ಕಾಳಜಿ ತೋರುವ ಆಸ್ತಿಯಾಗಿ ಬೆಳೆಯಿತು. ಆಕೆಯ ಅಕ್ಕರೆ ಉಂಡ ಮಕ್ಕಳು ದೊಡ್ಡವರಾದರೂ ಅಜ್ಜಿಯನ್ನು ಆಗಾಗ್ಗೆ ವಿಚಾರಿಸಿಕೊಂಡು ಹೋಗುವುದು ಪರಿಪಾಠವಾಯಿತು.

ಅಂಗಡಿಯಲ್ಲಿ ದುಡಿದ ದುಡ್ಡು, ವಿಧವಾ ವೇತನ ಕೂಡಿ ಹಾಕಿದ್ದನ್ನು ತನ್ನನ್ನು ಪ್ರೀತಿಯಿಂದ ಕಾಣುವ `ದೊಡ್ಡ ಮಕ್ಕಳು  ಕೇಳಿದರೆ ಕೈಗಿತ್ತು, ನೆರವಾಗಿ ಕೊಟ್ಟಾಗ, ಮರಳಿ ಪಡೆಯುವ ಅಜ್ಜಿಗೆ ಹಣ ಪಡೆದು ವಂಚಿಸಿದವರೂ ಇದ್ದಾರೆ. ಆಯ್ದುಕೊಂಡು ತಿನ್ನುವ ಕೋಳಿ ಕಾಲು ಮುರಿದಂತೆ ಆರು ತಿಂಗಳ ಹಿಂದೆ ಅಜ್ಜಿ ಹೊರಗೆ ಹೋಗಿದ್ದಾಗ ಯಾರೋ ಪೆಟ್ಟಿಗೆ ಅಂಗಡಿ ಹಿಂದಿನ ಹಲಗೆ ಮುರಿದು 4000 ರೂಪಾಯಿ ಕದ್ದು ನೀಚತನ ಮೆರೆದಿದ್ದಾರೆ.

ಈಗ 80 ವರ್ಷ ವಯಸ್ಸಾಗಿರುವ ಆಕೆಗೆ ತಿಂಗಳಿಂದ ಆರೋಗ್ಯ ಕೆಟ್ಟಿದೆ. ಕಾಲಿಗೆ ಎಂಥದ್ದೋ ಗಾಯವಾಗಿ ಓಡಾಡದಂತಾಗಿದೆ. ಹಪ್ಪಳ, ಉಪ್ಪಿನಕಾಯಿ ಮಾಡುವುದನ್ನು ಕೈಬಿಟ್ಟಿದೆ. ಬಾಲ್ಯದಲ್ಲಿ ಅಜ್ಜಿಯಿಂದ ಹಣ್ಣು, ಪೆಪ್ಪರಮೆಂಟು ತಿಂದ ನಾಗಿ, ಪೃಥ್ವಿ, ಸತೀಶ್ ಮತ್ತಿತರರು ಆಕೆಯನ್ನು ಆಸ್ಪತ್ರೆಗೆ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಅಜ್ಜಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೋದರೆ ಆಗೋದಿಲ್ಲ  ಅಂದುಬಿಟ್ಟರಂತೆ. `ಸರ್ಕಾರಿ ಆಸ್ಪತ್ರೆ ಡಾಕ್ಟರದ್ದೇ ಹೊರತು ಬಡವರದ್ದಲ್ಲಪ್ಪ~ ಎಂದು ಅವರು ನೊಂದು ನುಡಿಯುತ್ತಾರೆ.

ಪೆಟ್ಟಿಗೆ ಪಕ್ಕ ತಾನೇ ಬೆಳೆಸಿದ ನೇರಳೆ ಮರದಲ್ಲಿ ಈಗ ಕಪ್ಪಿಟ್ಟು ಹುದುರುತ್ತಿರುವ ಹಣ್ಣು ಆಯ್ದುಕೊಳ್ಳಲು ಹುಡುಗರ ಸಂಭ್ರಮ ಕಾಣುತ್ತಿದೆ. ಕಾಲಿನ ಗಾಯಕ್ಕೆ ಬಟ್ಟೆ ಕಟ್ಟಿಕೊಂಡ ವೃದ್ಧೆ ಮಕ್ಕಳ ಕಲರವ ಕೇಳಿ, ನೋಡಿ ನೋವು ಮರೆಯುತ್ತಿದ್ದರೂ; ದಿನೇದಿನೇ ಹೆಚ್ಚುತ್ತಿರುವ ಗಾಯ ಆಕೆಯನ್ನು ಕಂಗೆಡಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT