ADVERTISEMENT

ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಂದ ದಿಗ್ಬಂಧನ

ಕುಣಿಗಲ್‌ ತಾಲ್ಲೂಕಿನ ಗಿರಿಗೌಡನಪಾಳ್ಯ; ಚೆಂಡು ಹೂ ಸಂಸ್ಕರಣ ಘಟಕದ ಮಾಲಿನ್ಯ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 10:42 IST
Last Updated 1 ಜೂನ್ 2018, 10:42 IST

ಕುಣಿಗಲ್: ಶಾಲಾ ಪಕ್ಕದ ಚೆಂಡು ಹೂ ಸಂಸ್ಕರಣ ಘಟಕದಿಂದ ಉಂಟಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವಂತೆ ಆಗ್ರಹಿಸಿದ ವಿದ್ಯಾರ್ಥಿಗಳು ಜಿಲ್ಲಾ ಪರಿಸರ ಅಧಿಕಾರಿಗಳಿಗೆ ಗುರುವಾರ ದಿಗ್ಬಂಧನ ಹಾಕಿದರು.

ತಾಲ್ಲೂಕಿನ ಗಿರಿಗೌಡನಪಾಳ್ಯ ಬಳಿಯ ಅರವಿಂದ್ ಇಂಟರ್ ನ್ಯಾಷನಲ್ ಶಾಲೆ ಪಕ್ಕದಲ್ಲಿರುವ ಚೆಂಡು ಹೂ ಸಂಸ್ಕರಣಾ ಘಟಕದಿಂದ ವಾಯುಮಾಲಿನ್ಯ ಉಂಟಾಗಿ ದುರ್ವಾಸನೆ ಸಹಿಸಲಾಗದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 5 ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳವ ಭರವಸೆ ನೀಡಿದ್ದರು.

ನಂತರ ಶಾಲೆಯ ಮುಖ್ಯಸ್ಥರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ ಮೇರೆಗೆ ಗುರುವಾರ ಜಿಲ್ಲಾ ಪರಿಸರ ಅಧಿಕಾರಿ ಭೀಮಸಿಂಗ್ ಗೋಗಿ, ಉಪ ಪರಿಸರಾಧಿಕಾರಿ ರಮೇಶ್ ಅವರನ್ನು ಒಳಗೊಂಡ ತಂಡ ಹೂವಿನ ಸಂಸ್ಕರಣಾ ಘಟಕಕ್ಕೆ ಪರಿಶೀಲನೆಗಾಗಿ ಬಂದಿತ್ತು.

ADVERTISEMENT

ಆಗ ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳ ಗುಂಪು ಜಿಲ್ಲಾ ಪರಿಸರ ಅಧಿಕಾರಿ ಭೀಮ್ ಸಿಂಗ್ ಗೋಗಿ ಅವರನ್ನು ಅಡ್ಡಗಟ್ಟಿ ವಾದಕ್ಕಿಳಿದರು. ಮನೋಜ್, ಸಚ್ಚಿನ್, ಸೌಮ್ಯಾ ಮತ್ತು ಹರ್ಷಿತಾ ಅವರು ಅಧಿಕಾರಿಗಳೊಂದಿಗೆ ಮಾತನಾಡಿ, ‘ಕಳೆದ 5 ವರ್ಷಗಳಿಂದ ಈ ಸಮಸ್ಯೆ ಇದೆ. ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸಿ ಹೋಗುತ್ತಿದ್ದಾರೆಯೆ ಹೊರತು; ಪರಿಹಾರ ಸಿಕ್ಕಿಲ್ಲ. ಕೆಟ್ಟವಾಸನೆಯಿಂದಾಗಿ ಪರಿಸರ ಕುಲುಷಿತಗೊಳ್ಳುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸಮಸ್ಯೆ ನಿರಂತರವಾಗಿದೆ. ಕೂಡಲೆ ಕ್ರಮ ತೆಗೆದುಕೊಂಡು ಘಟಕವನ್ನು ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದರು.

ಭಿಮ್‌ಸಿಂಗ್ ಗೋಗಿ ಅವರು, ‘ಸಂಸ್ಕರಣಾ ಘಟಕದ ಪರಿಶೀಲನೆ ನಡೆಸಿ, ಮಾದರಿಗಳನ್ನು ಸಂಗ್ರಹ ಮಾಡಿದ್ದೇವೆ. ಕೇಂದ್ರ ಮಂಡಳಿಗೆ ಕಳುಹಿಸಿ ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರೂ, ವಿದ್ಯಾರ್ಥಿಗಳು ಜಗ್ಗದೆ ಸುಮಾರು ಎರಡುಗಂಟೆಗಳ ಕಾಲ ಅಧಿಕಾರಿಯನ್ನು ಶಾಲಾ ಆವರಣದಿಂದ ಹೊರಹೋಗದಂತೆ ತಡೆದು ಪ್ರತಿಭಟನೆ ಮುಂದುವರಿಸಿದರು.

ಒಂದು ಕಡೆ ವಿದ್ಯಾರ್ಥಿಗಳು, ಮತ್ತೋದು ಕಡೆ ಶಿಕ್ಷಕರು ಸೇರಿದ್ದರಿಂದ ಪರಿಸರ ಅಧಿಕಾರಿಗಳ ತಂಡ ಸುಮ್ಮನೆ ನಿಲ್ಲಬೇಕಾದ ಪರಿಸ್ಥಿತಿ ಉಂಟಾಯಿತು.

ನಂತರ ಪಿಎಸ್ಐ ಪುಟ್ಟೆಗೌಡ ಮತ್ತು ಸಿಬ್ಬಂದಿ ಬಂದು ಅಧಿಕಾರಿಯೊಂದಿಗೆ ಚರ್ಚಿಸಿದದರು. ‘ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರೂ ಶಿಕ್ಷಕರು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ಆರೋಪಿಸಿದರು.

ನಂತರ ಶಿಕ್ಷಕರು, ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಮನವಿ ಮಾಡಿದರು. ನಂತರ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಶಾಲೆಯಿಂದ ಹೊರಬಂದರು.

ಸಮಸ್ಯೆ ನಿರಂತರವಾಗಿದೆ; ಬಗೆಹರಿಸಿ

ಶಿಕ್ಷಣ ಮತ್ತು ಆರೋಗ್ಯ ನಮ್ಮ ಹಕ್ಕು. ಶಾಲೆಯ ಪಕ್ಕದ ಚೆಂಡುಹೂ ಘಟಕದಿಂದ ಶಿಕ್ಷಣ ಪಡೆಯಲು ಬಂದಿರುವ ನಮ್ಮ ಆರೋಗ್ಯವೂ ಹಾಳಾಗುತ್ತಿದೆ. ಶಿಕ್ಷಣ ಪಡೆಯುವುದಕ್ಕೂ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ ಸಮಸ್ಯೆ ನಿರಂತರವಾಗಿದೆ ಬಗೆಹರಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.