ADVERTISEMENT

ಅಭಿವೃದ್ಧಿಗೆ ಅಡ್ಡಿ: ಜಯಚಂದ್ರ ವಿಷಾದ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 10:25 IST
Last Updated 4 ಅಕ್ಟೋಬರ್ 2011, 10:25 IST

ಶಿರಾ: ಕ್ಷೇತ್ರದಲ್ಲಿ ಜನತೆಗೆ ಸ್ಪಂದಿಸಿ ಕೆಲಸ ಮಾಡುವುದೇ ಅಪರಾಧವಾಗಿದ್ದು, ಯಾವುದೇ ಕೆಲಸಕ್ಕೆ ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡರೆ ಅದರ ಮಾರನ ದಿನವೇ ಸಂಬಂಧಿಸಿದ ಸಚಿವರಿಗೋ ಅಥವಾ ಇಲಾಖೆ ಕಾರ್ಯದರ್ಶಿಗೋ ತಕರಾರು ಅರ್ಜಿ ಸಲ್ಲಿಸುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಚನ್ನನಕುಂಟೆ ಸಮೀಪದ ಕಲ್ಲುವಡ್ಡು ಬಳಿ ಭಾನುವಾರ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಮಾತನಾಡಿದ ಅವರು, ಇಂಥದ್ದನ್ನೆಲ್ಲ ಎದುರಿಸುವ ಶಕ್ತಿ ನನಗೆ ಇಲ್ಲ ಎಂದಲ್ಲ. ಆದರೆ ಅನಗತ್ಯ ಚರ್ಚೆ ಯಾಕೆಂದು ಸುಮ್ಮನಿದ್ದೇನೆ ಎಂದರು.

ಮರಳು ದಂಧೆ: ಮರಳು ದಂಧೆಯಿಂದ ರಸ್ತೆ ಹಾಳಾಗುತ್ತಿದ್ದು, ಮರಳಿನ ವಿಷಯದಲ್ಲಿ ಯಾರನ್ನೂ ಸಮಾಧಾನ ಮಾಡದ ಸ್ಥಿತಿಯಲ್ಲಿ ನಾನಿದ್ದೇನೆ. ಮರಳು ತೆಗೆಯುವ ವಿಷಯದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದ್ದು, ಪ್ರತಿಯೊಂದು ಊರಿನಲ್ಲೂ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲವಾಗಿದೆ. ಆದರೂ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆದಾರರಿಂದ 53 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಗೀತಾ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಪ್ಪ, ಉಪಾಧ್ಯಕ್ಷೆ ಕಂಬಕ್ಕ, ಲೋಕೋಪಯೋಗಿ ಇಲಾಖೆ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಟಿ.ತಮ್ಮಣ್ಣ, ಶಿಕ್ಷಕ ಮೂರ್ತಿ, ಡಿ.ಸಿ.ಅಶೋಕ್, ತಿಪ್ಪೇಶ್ ಇದ್ದರು. ರಘುರಾಮ್ ಸ್ವಾಗತಿಸಿ ನಿರೂಪಿಸಿದರು.

ಹಣ ಹಂಚದಿದ್ದಕ್ಕೆ ಸೋಲು!
ಕೊಪ್ಪಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮತದಾರರಿಗೆ ಹಣ ಹಂಚದಿದ್ದೇ ಕಾರಣ ಎಂದು ಇಲ್ಲಿನ ಮತದಾರರು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದರು.

ತಾಲ್ಲೂಕಿನ ಚನ್ನನಕುಂಟೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ನಡಿಗೆ-ಜನರ ಬಳಿಗೆ ಮತದಾರರೊಂದಿಗೆ ಮುಖಾಮುಖಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ, ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಬಂಧನದ ಭೀತಿಯಿಂದ ಜಾಮೀನು ಪಡೆದಿದ್ದಾರೆ. ಇಬ್ಬರು ಮಾಜಿ ಸಚಿವರು ಜೈಲಿನಲ್ಲಿದ್ದಾರೆ. ಬಿಜೆಪಿಯದ್ದು ಭ್ರಷ್ಟ ಸರ್ಕಾರ ಎಂದು ಮತದಾರರಿಗೆ ಗೊತ್ತಿದೆ. ಹೀಗಿದ್ದರೂ ಕೊಪ್ಪಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್ ಸೋಲಲು ಕಾರಣವೇನು ಎಂದು ಮತದಾರರಿಗೆ ಪ್ರಶ್ನಿಸಿದರು.

ಆಗ ಮತದಾರರು ಕಾಂಗ್ರೆಸ್ ಪಕ್ಷ ಹಣ ಹಂಚಿಲ್ಲದಿರುವುದೇ ಸೋಲಿಗೆ ಕಾರಣ ಎಂದು ಸಾಮೂಹಿಕವಾಗಿ ಉತ್ತರಿಸಿದರು. ಆಗ ಶಾಸಕ ಜಯಚಂದ್ರ ಜೋರಾಗಿ ನಕ್ಕು ನಿಜ ಎಂದು ಮತದಾರರ ಮಾತನ್ನು ಅನುಮೋದಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್, ಮಾಜಿ ಸದಸ್ಯ ರಾಮಚಂದ್ರಯ್ಯ, ತಾ.ಪಂ ಸದಸ್ಯೆ ಗೀತಾ, ಗ್ರಾ.ಪಂ ಅಧ್ಯಕ್ಷ ಗೋಪಾಲಪ್ಪ, ಉಪಾಧ್ಯಕ್ಷೆ ಕಂಬಕ್ಕ ಇದ್ದರು. ಅಶೋಕ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.