ADVERTISEMENT

ಅಸಮರ್ಪಕ ಅನುದಾನ ಬಳಕೆಯೇ ತೊಡಕು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:45 IST
Last Updated 18 ಅಕ್ಟೋಬರ್ 2012, 8:45 IST

ಕುಣಿಗಲ್: ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಅನುದಾನದ ಅಸಮರ್ಪಕ ಬಳಕೆಯೇ ತೊಡಕಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪ ಇಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಇಪ್ಪಾಡಿ, ಚೌಡನಕುಪ್ಪೆ, ಮೋದೂರು, ಹೆಗ್ಗಡತಿಹಳ್ಳಿ ಹಾಗೂ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ, ಮರಾಠ ಸಮಾಜದ ಸ್ಥಿತಿಗತಿಯನ್ನು ಕಣ್ಣಾರೆ ಕಂಡಿದ್ದೇನೆ. ಗ್ರಾಮೀಣ ಪ್ರದೇಶದ ಮರಾಠ ಸಮಾಜದ ಸ್ಥಿತಿಗತಿ ಶೋಚನೀಯವಾಗಿದೆ.

ಆಯೋಗದ ವತಿಯಿಂದ ಈಗಾಗಲೇ ಮಾಹೇಶ್ವರಿ, ಮರಾಠ, ಕಟ್ಟಿಗಾರ್, ಬೆಳ್ಳಾಳ ಒಕ್ಕಲಿಗ, ಹಡಪದ್, ಶಿವಾರ್ಚಕ್ ಸಮಾಜಗಳ ವತಿಯಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಈ ಸಮಾಜಗಳ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಂದುಳಿದ ವರ್ಗಗಳ ಹುಟ್ಟು, ಬೆಳವಣಿಗೆ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಗುವುದು. ಜನಾಂಗಗಳ ಕುರಿತು ಪುಸ್ತಕಗಳನ್ನು ಪ್ರಕಟಿಸುವ ಆಲೋಚನೆ ಇದೆ. ಈ ಕಾರ್ಯಕ್ಕೆ 2 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ ಎಂದರು.

ಮರಾಠ ಸಮಾಜದ ಮುಖಂಡರಾದ ವಿಜಯೇಂದ್ರ ಜಾದವ್, ನಾರಾಯಣರಾವ್ ಸೂರ್ಯವಂಶಿ, ಲಕ್ಷ್ಮಿನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.