ADVERTISEMENT

ಅ.1ಕ್ಕೆ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:59 IST
Last Updated 6 ಸೆಪ್ಟೆಂಬರ್ 2013, 6:59 IST

ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ಅ. 1ರಂದು ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರಪ್ಪ ಹೇಳಿದರು.

ರಾಜ್ಯದ ದಕ್ಷಿಣ ಭಾಗದ 75 ತಾಲ್ಲೂಕುಗಳಲ್ಲಿ ತೀವ್ರ ಬರಗಾಲವಿದೆ ಎಂದು ಸರ್ಕಾರವೇ ಹೇಳುತ್ತದೆ. ಆದರೆ ರೈತರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಬರದ ಸ್ಥಿತಿಯಲ್ಲಿಯೂ ಬ್ಯಾಂಕ್‌ಗಳು ಸಾಲ ವಸೂಲಿಗೆ ಇಳಿದಿವೆ. ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಬರಗಾಲ ಮುಗಿಯುವರೆಗೆ ಬ್ಯಾಂಕ್‌ಗಳು ಯಾವುದೇ ಕೃಷಿ ಸಾಲವನ್ನು ವಸೂಲಿ ಮಾಡಬಾರದು ಎಂದು ಸರ್ಕಾರ ಆದೇಶಿಸಬೇಕೆಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದ ಎಲ್ಲ ಜಲಾಶಯಗಳು ತುಂಬಿ ಸಮುದ್ರಕ್ಕೆ ನೀರು ಹರಿಯುತ್ತಿದ್ದರೂ ಇಲ್ಲಿನ ಕೆರೆಗಳನ್ನು ತುಂಬಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಕುಡಿಯುವ ನೀರು ಕೊಡಲು ಸಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಕೃತಕ ಬರಗಾಲ ಸೃಷ್ಟಿಸಲಾಗುತ್ತಿದೆ. ತೆಂಗು- ಅಡಿಕೆ ಬೆಳೆ ನಾಶವಾಗುತ್ತಿದ್ದು, ಕೇಂದ್ರ ಸರ್ಕಾರ ಗೋರಖ್‌ಸಿಂಗ್ ವರದಿ ಜಾರಿಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಮರಳು ದಂಧೆ ಹೆಚ್ಚಾಗಿದ್ದು, ಪ್ರಮುಖ ರಾಜಕಾರಣಿಗಳು ಮತ್ತು ಹಿಂಬಾಲಕರು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಸಮಾಜ ವಿರೋಧಿ ಶಕ್ತಿಗಳ ಕೈಯಲ್ಲಿ ಮರಳು ಮಾಫಿಯಾ ಇದ್ದು, ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ ನಡೆಯುತ್ತಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ವೆಂಕಟೇಗೌಡ, ಮೂಡ್ಲಗಿರಿಯಪ್ಪ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.