ADVERTISEMENT

ಆಧುನಿಕ ತಂತ್ರಜ್ಞಾನದಿಂದ ಪ್ರಗತಿ ಸಾಧ್ಯ

ಫಲಾನುಭವಿಗಳಿಗೆ ತರಬೇತಿ ಕಾರ್ಯಾಗಾರ; ನಾಗಭೂಷಣ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಮೇ 2018, 10:02 IST
Last Updated 30 ಮೇ 2018, 10:02 IST

ಪಾವಗಡ: ಕೃಷಿ, ಹೈನುಗಾರಿಕೆಯ ಬಗ್ಗೆ ಹೊಸ ವಿಚಾರಗಳು, ತಾಂತ್ರಿಕತೆಯ ಬಗ್ಗೆ ತಿಳಿದುಕೊಂಡಲ್ಲಿ ರೈತರು ಅಭಿವೃದ್ಧಿ ಹೊಂದಬಹುದು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಆರ್.ಎಂ.ನಾಗಭೂಷಣ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಪಶು ವೈದ್ಯ ಸೇವಾ ಇಲಾಖೆ, ಪಶು ಭಾಗ್ಯ, ಎಸ್.ಸಿ.ಪಿ., ಟಿಎಸ್‌ಪಿ ಫಲಾನುಭವಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಹಸು, ಎಮ್ಮೆ ಖರೀದಿಸುವ ಮುನ್ನ ಸ್ಥಳೀಯ ವಾತಾವರಣಕ್ಕೆ
ಅವು ಒಗ್ಗಿಕೊಳ್ಳುತ್ತವೆಯೇ ಎಂಬ ಬಗ್ಗೆ ವೈದ್ಯರ ಸಲಹೆ ಪಡೆಯಬೇಕು. ಹಾಲು ಕರೆಯುವ ಯಂತ್ರ, ರಬ್ಬರ್ ಹಾಸಿಗೆ ಇತ್ಯಾದಿ ಆಧುನಿಕ ಯಂತ್ರಗಳನ್ನು ಬಳಸಿ ಕಡಿಮೆ ಶ್ರಮದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ADVERTISEMENT

ಕಾಲುಬಾಯಿ ಜ್ವರದಂತಹ ಮಾರಕ ರೋಗಗಳು ಬಾರದಂತೆ ಲಸಿಕೆ ಹಾಕಿಸಬೇಕು. ಹಾಲು ಕಡಿಮೆಯಾಗುತ್ತದೆ, ಗರ್ಭಧರಿಸಲು ಸಮಸ್ಯೆಯಾಗುತ್ತದೆ ಎಂಬ ಕಾರಣ ನೀಡಿ ಲಸಿಕೆ ಹಾಕದಂತೆ ತಡೆಯಬಾರದು. ಸ್ವಚ್ಛತೆ ಕಾಪಾಡುವ ಹಾಗೂ ಲಸಿಕೆ ಹಾಕಿಸುವ ಮೂಲಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಹಿರಿಯ ಪಶು ವೈದ್ಯಾಧಿಕಾರಿ ನಾಗಭೂಷಣ್ ಮಾತನಾಡಿ, ಪ್ಯಾಟ್ ಬರುವುದಿಲ್ಲ ಎಂಬ ಕಾರಣಕ್ಕೆ ಹಾಲಿಗೆ ಉಪ್ಪು, ರಾಸಾಯನಿಕಗಳನ್ನು ಮಿಶ್ರಣ ಮಾಡಬಾರದು. ಅನಾರೋಗ್ಯ ಕಾರಣದಿಂದ ಹಾಲಿನ ಫ್ಯಾಟ್ ಕಡಿಮೆಯಾಗಬಹುದು. ಸೂಕ್ತ ಚಿಕಿತ್ಸೆ, ಪೋಷಕಾಂಶ ಆಹಾರ ಕೊಡುವ ಮೂಲಕ ಫ್ಯಾಟ್ ಸಮಸ್ಯೆ ಬಗೆಹರಿಸಬಹುದು ಎಂದರು. ವೈದ್ಯೆ ಕಾವ್ಯಾ, ಡಾ.ಶೈಲೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.