ADVERTISEMENT

ಆಶ್ರಯ ಮನೆಯಷ್ಟೆಯಲ್ಲ; ಬೇಕಿದೆ ಹಕ್ಕುಪತ್ರ!

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:45 IST
Last Updated 24 ಜನವರಿ 2011, 10:45 IST

ತುಮಕೂರು: ಚರಂಡಿ ಮತ್ತು ರಸ್ತೆ ಬದಿಯಲ್ಲಿ, ಕೊಳಚೆ ಪ್ರದೇಶಗಳ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಡವರ ಕೂಗು ಕೊನೆಗೂ ಮಹಾನಗರ ಪಾಲಿಕೆಗೆ ಕೇಳಿಸಿದೆ.ಆಶ್ರಯ ಫಲಾನುಭವಿಗಳ ಸಮಸ್ಯೆಗೆ ಪರಿಹಾರ ಕಾಣಿಸಲು ಶಾಸಕ ಸೊಗಡು ಶಿವಣ್ಣ ಅಧ್ಯಕ್ಷತೆಯಲ್ಲಿ ಸೋಮವಾರ ಆಶ್ರಯ ಸಮಿತಿ ಸಭೆಯನ್ನು ಪಾಲಿಕೆ ಆಯುಕ್ತರು ಕರೆದಿದ್ದಾರೆ.

ಕಳೆದ 18 ವರ್ಷಗಳಿಂದ ಆಶ್ರಯ ನಿವೇಶನ, ಮನೆಗಳನ್ನು ನೀಡದ ಪರಿಣಾಮ ಬಡವರು, ನಿರ್ಗತಿಕರ ಸ್ಥಿತಿ ಎಷ್ಟೊಂದು ಚಿಂತಾಜನಕವಾಗಿದೆ ಎನ್ನುವ ಕಣ್ಣೆದುರಿನ ಕಟು ಸತ್ಯ ಬನಶಂಕರಿ 2ನೇ ಹಂತ, ಮರಳೂರು ದಿಣ್ಣೆಯ ಹೈಟೆನ್ಷನ್ ವೈರ್ ಕೆಳಗಿನ ಪ್ರದೇಶ, ಬೆಳಗುಂಬ ರಸ್ತೆ ಬದಿ, ಗುಬ್ಬಿ ವೀರಣ್ಣ ರಂಗಮಂದಿರ ಹಿಂಭಾಗ, ಮಂಡಿಪೇಟೆಯ ಕನ್ಸರ್‌ವೆನ್ಸಿ, ಬಂಡೆಪಾಳ್ಯದ ರಸ್ತೆ ಬದಿ ಕಣ್ಣಾಡಿಸಿದರೆ ಗೋಚರಿಸುತ್ತದೆ. ಇದು ಸಮಸ್ಯೆಯ ಒಂದು ಮಗ್ಗುಲಾದರೆ, ಇನ್ನೊಂದು ಗಂಭೀರ ಸಮಸ್ಯೆಯನ್ನು ಒಂದೂವರೆ ದಶಕಗಳಿಂದಲೂ ಅನುಭವಿಸುತ್ತಿರುವ ‘ಆಶ್ರಯ’ ನಿವಾಸಿಗಳ ಆರ್ತನಾದ ಕೇಳಿಸಿಕೊಳ್ಳುವವರೇ ಇಲ್ಲವಾಗಿದ್ದಾರೆ.

ಎಸ್.ಶಫಿ ಅಹಮದ್ ಶಾಸಕರಾಗಿದ್ದ ಅವಧಿಯಲ್ಲಿ ಆಶ್ರಯ ನಿವೇಶನ ಪಡೆದು, ಮನೆ ಕಟ್ಟಿಕೊಂಡ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿಲ್ಲ. ಸರ್ಕಾರದ ಸೌಲಭ್ಯಗಳಿಂದಲೂ ವಂಚಿತವಾಗಿ ಆ ಕುಟುಂಬಗಳು ಸಂಕಷ್ಟದಲ್ಲಿ ಬದುಕುತ್ತಿವೆ. ರಾಜೀವಗಾಂಧಿ ನಗರ, ಮೆಳೇಕೋಟೆ, ಸತ್ಯಮಂಗಲ, ದೇವರಾಯನಪಟ್ಟಣದಲ್ಲಿ ಆಶ್ರಯ ನಿವೇಶನ ಪಡೆದು ಮನೆಕಟ್ಟಿಕೊಂಡಿದ್ದ ಫಲಾನುಭವಿಗಳಲ್ಲಿ ಬಹುತೇಕ ಮಂದಿಗೆ ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ. ಒಂದೂವರೆ ದಶಕದಿಂದ ನಡೆಸಿದ ಹೋರಾಟಕ್ಕೂ ನ್ಯಾಯ ಸಿಕ್ಕಿಲ್ಲ. ಶಾಸಕ ಶಿವಣ್ಣ ಈ ಬಾರಿಯಾದರೂ ಸಮಸ್ಯೆಗೆ ಪರಿಹಾರ ನೀಡಿ, ಬಡವರ ಕಣ್ಣೀರು ಒರೆಸಬೇಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಆಶ್ರಯ ಫಲಾನುಭವಿಗಳು.

ದಿಬ್ಬೂರಿನಲ್ಲಿ ಗುರುತಿಸಿರುವ ಆಶ್ರಯ ನಿವೇಶನವೂ ಅಂತಿಮವಾಗದಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ನಗರ ವ್ಯಾಪ್ತಿಯ ಹತ್ತಿರದಲ್ಲಿ ಕಂದಾಯ ಭೂಮಿ ಇದ್ದರೆ ಪತ್ತೆ ಹಚ್ಚಿ ವರದಿ ನೀಡಲು ತಹಶೀಲ್ದಾರ್‌ಗೆ ಪತ್ರ ಬರೆದಿದ್ದರು. ತಹಶೀಲ್ದಾರರು ಯಾವುದೇ ಕಂದಾಯ ಭೂಮಿ ಇಲ್ಲ ಎಂದು ಆಯುಕ್ತರ ಪತ್ರಕ್ಕೆ ವಾಪಸ್ ಪತ್ರ ಬರೆದಿದ್ದಾರೆ. ಆದರೆ, ಪ್ರಭಾವಿ ವ್ಯಕ್ತಿಗಳು ಮತ್ತು ಖಾಸಗಿಯವರು ಸರ್ಕಾರದ ಭೂಮಿಯನ್ನು ಕಬಳಿಸಿ ಬೇಲಿ ಹಾಕಿಕೊಂಡಿರುವ ಸತ್ಯ ಜಿಲ್ಲಾಡಳಿತಕ್ಕೂ ಗೊತ್ತಿದೆ. ಒತ್ತುವರಿ ಭೂಮಿಯನ್ನು ಪತ್ತೆ ಹಚ್ಚಿ, ತೆರವು ಮಾಡಿ ಬಡವರಿಗೆ ಸೂರು ಕಲ್ಪಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಆಶ್ರಯ ಸಮಿತಿಯ ಸದಸ್ಯರೊಬ್ಬರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.