ADVERTISEMENT

ಉತ್ತರಪ್ರದೇಶದ ಮುಖಂಡನ ಅಪಹರಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:07 IST
Last Updated 24 ಏಪ್ರಿಲ್ 2013, 9:07 IST

ಮಧುಗಿರಿ: ವಿಧಾನಸಭೆ ಚುನಾವಣೆಗೆ ಬಿಎಸ್‌ಪಿ ಪರ ಪ್ರಚಾರ ನಡೆಸಲು ಆಗಮಿಸಿದ್ದ ಉತ್ತರಪ್ರದೇಶದ ಮುಖಂಡರೊಬ್ಬರನ್ನು ಅಪಹರಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಕ್ಷೇತ್ರದ ಅಭ್ಯರ್ಥಿ ಮಾಯಸಂದ್ರ ಮುನಿಯಪ್ಪ ಪರ ಪ್ರಚಾರ ನಡೆಸಲು ಉತ್ತರಪ್ರದೇಶದಿಂದ ಜಮಾಲ್ ಅಹಮದ್, ಗುಲಾಮ್ ಮೊಹಮದ್ ಮೊಹಮದ್ ಬದ್ರುದ್ದೀನ್ ಅನ್ಸಾರಿ ಪಟ್ಟಣಕ್ಕೆ ಆಗಮಿಸಿದ್ದರು.

ಈ ಮೂವರು ಮುಸ್ಲಿಂರಾಗಿದ್ದರಿಂದ ನಿತ್ಯ ನಮಾಜ್‌ಗೆ ತೆರಳುತ್ತಿದ್ದರು. ಏಪ್ರಿಲ್ 19 ರಂದು ನಮಾಜ್‌ಗೆ ಹೋಗಿದ್ದಾಗ ಪಟ್ಟಣದ ನಾಲ್ವರು ಯುವಕರು ಮೊಹಮದ್ ಬದ್ರುದ್ದೀನ್ ಅನ್ಸಾರಿಗೆ ನೀವು ಉತ್ತರಪ್ರದೇಶದಲ್ಲಿ ರಾಜಕೀಯ ಮಾಡಿ. ನೀವು ಅಡ್ಡ ಬಂದರೆ ನಿಮ್ಮನ್ನು ಮುಗಿಸುವುದಾಗಿ ಪ್ರಮುಖ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ಈ ಘಟನೆಯನ್ನು ಅನ್ಸಾರಿ ಸ್ನೇಹಿತರಿಗೆ ಹೇಳಿದ್ದರು.

ಏಪ್ರಿಲ್ 21ರ ಸಂಜೆ ಪ್ರಚಾರ ಮುಗಿಸಿ ಕೊಠಡಿಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ಕಾಣಿಸಿಲ್ಲ ಎಂದು ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ಕಣಿಮಯ್ಯ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ಅನ್ಸಾರಿ ಮಂಗಳವಾರ  ಬೆಳಗ್ಗೆ 11-45 ಕ್ಕೆ (9838124710) ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಟಗಾರ‌್ಲಹಳ್ಳಿಯ ಮಹಮದ್ ಅಫೀಜಲ್ಲಾಗೆ ದೂರವಾಣಿ ಮಾಡಿ ಯಾರೋ ರೂಂನಲ್ಲಿ ಕೂಡಿ ಹಾಕಿದ್ದಾರೆ. ಹೊರಗಡೆ ಬಿಡುತ್ತಿಲ್ಲ ಎಂದು ಅಳುತ್ತಾ ತಿಳಿಸಿದರು ಎಂದು ಮಾಯಸಂದ್ರ ಮುನಿಯಪ್ಪ ಪತ್ರಕರ್ತರಿಗೆ ವಿವರಿಸಿದರು.

ಪ್ರಕರಣ ಕುರಿತಂತೆ ದೂರು ದಾಖಲಾಗಿದ್ದು, ಯಾವ ಪ್ರದೇಶದಿಂದ ಮೊಬೈಲ್‌ನಲ್ಲಿ ಮಾತಾಡಿದ್ದಾರೆ ಎಂಬುದನ್ನು ತಿಳಿದು ಬಂಧಿಸಲು ನಾಲ್ಕು ತಂಡ ರಚಿಸಿದ್ದೇವೆ ಎಂದು ಡಿವೈಎಸ್‌ಪಿ ಡಾ.ಸೌಮ್ಯಲತಾ ತಿಳಿಸಿದರು.

ಬಿಎಸ್‌ಪಿ ಮುಖಂಡರಾದ ದೊಡ್ಡೇರಿ ಕಣಿಮಯ್ಯ, ಶಿವಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಡಿವೈಎಸ್ಪಿ ಕಚೇರಿ ಬಳಿ ಆಗಮಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಬಿಡುಗಡೆ: ಅಪಹರಣಕ್ಕೊಳಗಾಗಿದ್ದ ಅನ್ಸಾರಿ ಅವರನ್ನು ಹರಿಹರರೊಪ್ಪದ ಬಳಿ ನಾಲ್ವರು ಅಪರಿಚಿತರು ಕಾರಿನಿಂದ ನೂಕಿ ಪರಾರಿಯಾಗಿದ್ದಾರೆ. ಅನ್ಸಾರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.