ADVERTISEMENT

`ಉದ್ಯೋಗಿನಿ' ಆಯ್ಕೆಗೆ ಅತೃಪ್ತಿ

ಯೋಜನೆ ತಡೆಗೆ ತಾ.ಪಂ.ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 8:16 IST
Last Updated 7 ಸೆಪ್ಟೆಂಬರ್ 2013, 8:16 IST

ತಿಪಟೂರು: ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು ನೆರವಾಗುವ ಉದ್ಯೋಗಿನಿ ಯೋಜನೆ ಬಗ್ಗೆ ಸೂಕ್ತ ಪ್ರಚಾರ ಕೈಗೊಳ್ಳದೆ ಇರುವುದರಿಂದ ಆಯ್ಕೆ ಪ್ರಕ್ರಿಯೆ ತಡೆ ಹಿಡಿಯಿರಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾನುಪ್ರಕಾಶ್ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಉದ್ಯೋಗಿನಿ ಯೋಜನೆಗೆ ಮಾಹಿತಿ ಕೊರತೆಯಿಂದ ಗ್ರಾಮಗಳ ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹಾಗಾಗಿ ಆಯ್ಕೆ ಪ್ರಕ್ರಿಯೆ ತಡೆ ಹಿಡಿಯುವಂತೆ ಸೂಚಿಸಿದರು.

ತಾಲ್ಲೂಕಿನ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂಬ ದೂರುಗಳಿವೆ. ಇದನ್ನು ಗಂಭೀರವಾಗಿ ಪರಿಶೀಲಿಸಿ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.

700 ನಾಟಿ ಕೋಳಿಗಳಿಗೆ ಕೊಕ್ಕರೆ ರೋಗದ ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿ ತಿಳಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ಪ್ರಕಾಶ್, ಯಾವ ಕೋಳಿಗೆ ಲಸಿಕೆ ಹಾಕಿದ್ದೀರಿ ತೋರಿಸಿ ನಡಿಯಿರಿ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಅಂಕಿಅಂಶಗಳ ಮಾಹಿತಿ ನೀಡುವುದನ್ನು ಬಿಟ್ಟು ಕಾರ್ಯರೂಪಕ್ಕೆ ತನ್ನಿ ಎಂದರು.

ಪಶು ಸಂಗೋಪನೆ ಇಲಾಖೆಯಿಂದ ಈ ಬಾರಿ ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯ ಒದಗಿಸುವ ಅವಕಾಶವಿದೆ. ಕೋಳಿ, ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣ ಹಾಗೂ ಅಜೋಲಾ ಬೆಳೆಗೆ ರೈತರು ಹಣ ಬಳಸಿಕೊಳ್ಳಬಹುದು ಎಂದು ಅಧಿಕಾರಿ ಮಾಹಿತಿ ನೀಡಿದರು.
ಕೊನೇಹಳ್ಳಿ ಸಮೀಪ ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಕಾಮಗಾರಿ ಕಳಪೆಯಾಗಿದೆ.

ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಿರಿ. ಕಳಪೆ ಬಗ್ಗೆ ತನಿಖೆ ನಡೆಯುವವರೆಗೆ ಕಾಮಗಾರಿ ಮುಂದುವರಿಯದಂತೆ ನೋಡಿಕೊಳ್ಳಿ ಎಂದು ಬಿಸಿಎಂ ಅಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.

ನಗರದ ಬಿಸಿಎಂ ಕಾಲೇಜು ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಕೊಠಡಿ ಕೊರತೆ ಗಂಭೀರವಾಗಿ ಕಾಡುತ್ತಿದೆ. ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ತಲಾ 100 ವಿದ್ಯಾರ್ಥಿಗಳಿಗೆ ತಕ್ಕಂತೆ ಹೆಚ್ಚುವರಿ ಕಟ್ಟಡವನ್ನು ಬಾಡಿಗೆ ಪಡೆಯಲು ಸರ್ಕಾರ ಆದೇಶ ನೀಡಿದ್ದು, ಸದ್ಯದಲ್ಲೇ ಕೈಗೂಡಬಹುದು ಎಂದು ಬಿಸಿಎಂ ಅಧಿಕಾರಿ ತಿಳಿಸಿದರು.

ತಾಲ್ಲೂಕಿನಲ್ಲಿ ರೇಷ್ಮೆ ಹುಳು ಸಾಕಾಣಿಕೆಗೆ ಯಾರೇ ಅರ್ಜಿ ಸಲ್ಲಿಸಿದರೂ ಮನೆ ಕಟ್ಟಿಕೊಳ್ಳಲು ಸಾಲದ ಸೌಲಭ್ಯವಿದೆ. ತಾಲ್ಲೂಕಿನಲ್ಲಿ ಮೊದಲ ಹಂತದ ಭಾಗ್ಯ ಜ್ಯೋತಿ ಯೋಜನೆ ಕಾಮಗಾರಿ ಮುಗಿದಿದ್ದು, ಎರಡನೇ ಹಂತ ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೊನ್ನವಳ್ಳಿ ಪೇಟೆ ಬೀದಿಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್,  ಎಂಜಿನಿಯರ್ ವಿಭಾಗದ ಅಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.