ADVERTISEMENT

ಎಐಟಿಯುಸಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:20 IST
Last Updated 1 ಫೆಬ್ರುವರಿ 2011, 6:20 IST

ತುಮಕೂರು: ಸೀತಾ ಗ್ರಾನೈಟ್ ಕಾರ್ಮಿಕ ಮುಖಂಡ ಗೌಡರಂಗಪ್ಪ ನಿಗೂಢ ಕಣ್ಮರೆ ಪ್ರಕರಣ ತನಿಖೆ ಮತ್ತು ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ ಎಐಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾರ್ಮಿಕರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಳೆದ 26ರಂದು ಮಧ್ಯಾಹ್ನ 3 ಗಂಟೆಯಿಂದ ಕಾಣೆಯಾಗಿರುವ ಕಾರ್ಮಿಕ ಮುಖಂಡ ಗೌಡರಂಗಪ್ಪ ಅವರ ಅಪಹರಣ ಆಗಿರುವ ಶಂಕೆ ಇದೆ. ಅವರ ಕುಟುಂಬ ಮತ್ತು ಕಾರ್ಖಾನೆ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಗೌಡರಂಗಪ್ಪ ಅವರನ್ನು ಪತ್ತೆಹಚ್ಚಬೇಕು. ಕಾರ್ಖಾನೆ ಆಡಳಿತ ಕೂಡಲೇ ಕಾರ್ಮಿಕ ಸಂಘದೊಂದಿಗೆ ಒಪ್ಪಂದಕ್ಕೆ ಬಂದು, ಕಾರ್ಖಾನೆ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ಆಡಳಿತ ಮಂಡಳಿ ಕಳೆದ ನಾಲ್ಕು ತಿಂಗಳಿಂದಲೂ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ. ಶೋಷಣೆಯ ವಿರುದ್ಧ ಧ್ವನಿ ಎತ್ತಿದವರನ್ನು ಹೊರ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಕಾರ್ಮಿಕ ವಿರೋಧಿ ವಿರುದ್ಧ ನಡೆಯುತ್ತಿದ್ದ ಹೋರಾಟದ ನೇತೃತ್ವ ವಹಿಸಿದ್ದ ಗೌಡರಂಗಪ್ಪ ಮತ್ತು ಇತರ ಕಾರ್ಮಿಕರ ಮೇಲೆ ಗೂಂಡಾಗಿರಿ ನಡೆದಿದೆ.ಅಲ್ಲದೆ ಸುಳ್ಳು ಮೊಕದ್ದಮೆ ಕೂಡ ದಾಖಲಾಗಿದೆ. ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ದೂರು ನೀಡಿ ನಾಲ್ಕು ದಿನಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆ ತುರ್ತು ಕ್ರಮ ತೆಗೆದುಕೊಳ್ಳಬೇಕು. ಕಾರ್ಖಾನೆ ಆಡಳಿತ ವರ್ಗ ಒಪ್ಪಿಕೊಂಡಿರುವ ಒಪ್ಪಂದಕ್ಕೆ ಅನುಗುಣವಾಗಿ ಕಾರ್ಖಾನೆ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಮಿಕ ಮುಖಂಡರಾದ ಎನ್.ಶಿವಣ್ಣ, ಟಿ.ಆರ್.ರೇವಣ್ಣ, ಕಂಬೇಗೌಡ, ಗಿರೀಶ್, ಚಂದ್ರಶೇಖರ್, ಚಿನ್ನಪ್ಪ, ರಾಜಶೇಖರ್, ಉಮಾಶಂಕರ್, ಗಂಗರಾಜು, ಪ್ರದೀಪ, ರಾಮಚಂದ್ರಪ್ಪ, ಶಿವನಂಜಪ್ಪ, ಲಕ್ಷ್ಮಿಪತಿ, ನರಸಿಂಹರಾಜು ಇನ್ನಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.