ADVERTISEMENT

ಎರಡು ಗಂಟೆಯಲ್ಲಿ ಕ್ಷಯರೋಗ ಪತ್ತೆ:ಪಾವಗಡಕ್ಕೆ ಜೀನ್ ಎಕ್ಸ್‌ಪರ್ಟ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 8:45 IST
Last Updated 25 ಮಾರ್ಚ್ 2012, 8:45 IST

ತುಮಕೂರು: ಪಾವಗಡ ಕ್ಷಯರೋಗ ಚಿಕಿತ್ಸಾ ಘಟಕ ವ್ಯಾಪ್ತಿಯ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 30ರಂದು ರಾಜ್ಯದ ಮೊಟ್ಟ ಮೊದಲಿಗೆ ಕ್ಷಯ ರೋಗ ಪತ್ತೆ ಮಾಡುವ `ಜೀನ್ ಎಕ್ಸ್‌ಪರ್ಟ್~ ಉಪಕರಣ ಅಳವಡಿಸಲಾಗುತ್ತದೆ.

ಪ್ರಸ್ತುತ ಇಡಿ ದೇಶದಲ್ಲಿ ಕೇವಲ 17 ಆರೋಗ್ಯ ಕೇಂದ್ರಗಳಲ್ಲಿ ಮಾತ್ರ `ಜೀನ್ ಎಕ್ಸ್‌ಪರ್ಟ್~ ಕಾರ್ಯನಿರ್ವಹಿಸುತ್ತಿದೆ. ಪಾವಗಡ ಚಿಕಿತ್ಸಾ ಘಟಕದ ವಿವೇಕಾನಂದ ಸಂಸ್ಥೆ 18ನೇ ಕೇಂದ್ರವಾಗಿ ದೇಶದ ಆರೋಗ್ಯ ಭೂಪಟದಲ್ಲಿ ಸ್ಥಾನ ಪಡೆಯಲಿದೆ.

ಆಂಧ್ರ ಗಡಿಗೆ ಹೊಂದಿಕೊಂಡಂತಿರುವ ಪಾವಗಡ ಆರೋಗ್ಯ ಕೇಂದ್ರದಲ್ಲಿ ದಾಖಲಾಗುತ್ತಿರುವ ಟಿಬಿ, ಎಚ್‌ಐವಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹಾಗೂ ಎರಡೂ ರಾಜ್ಯದ ರಾಜಧಾನಿಯಿಂದ ಪಾವಗಡ ಸಾಕಷ್ಟು ದೂರದಲ್ಲಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ವಿಶ್ವಸಂಸ್ಥೆ ಮತ್ತು `ಫೈಂಡ್~ ಸರ್ಕಾರೇತರ ಸಂಸ್ಥೆಗಳು ಉಪಕರಣವನ್ನು ಕೊಡುಗೆಯಾಗಿ ನೀಡಿವೆ.

ಹಾಲಿ ಅಸ್ತಿತ್ವದಲ್ಲಿರುವ `ಸಾಲಿಡ್ ಕಲ್ಚರ್~ ಮಾದರಿಯ ಕಫ ಪರೀಕ್ಷೆಯಲ್ಲಿ ಕಫದಲ್ಲಿರುವ ಕ್ಷಯ ರೋಗಾಣುಗಳನ್ನು ಸಾಲಿಡ್ ಕಲ್ಚರ್ ಮೇಲೆ ಬೆಳೆಸಿ- ವಿಶ್ಲೇಷಿಸಿ ಅನಂತರ ಔಷಧ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಜೀನ್ ಎಕ್ಸ್‌ಪರ್ಟ್ ಯಂತ್ರವು `ಕಾಟ್ರಿಡ್ಜ್~ ಮಾದರಿಯಲ್ಲಿ ರೋಗಾಣುಗಳ ವಂಶವಾಹಿಯನ್ನೇ ಪರೀಕ್ಷೆಗೆ ಒಳಪಡಿಸುತ್ತದೆ.

ರೋಗದ ತೀವ್ರತೆ ಮತ್ತು ಔಷಧದ ಪರಿಣಾಮ ಕುರಿತು ಕೇವಲ 2 ಗಂಟೆಯಲ್ಲಿ ತನ್ನ ವರದಿ ನೀಡುತ್ತದೆ. ಹೀಗಾಗಿ ಮುಂದಿನ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲು ಹಾಗೂ ರೋಗದ ಶೀಘ್ರ ಉಪಶಮನಕ್ಕೆ ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಸ್ಮಾ ತಬಸ್ಸುಮ್.

ರೂ. 30 ಲಕ್ಷ ಮೌಲ್ಯದ ಈ ಉಪಕರಣದಲ್ಲಿ ಪ್ರತಿ ಕಫ ಪರೀಕ್ಷೆಗೆ ರೂ. 800 ಖರ್ಚಾಗುತ್ತದೆ. ಪ್ರಸ್ತುತ ಕೇವಲ ಪಾವಗಡ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಷಯ ರೋಗಿಗಳ ಕಫವನ್ನು ಮಾತ್ರ ಇಲ್ಲಿ ಪರೀಕ್ಷಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.