ADVERTISEMENT

ಐಟಿ ದಾಳಿಗೆ ಖಂಡನೆ: 23ಕ್ಕೆ ಪ್ರತಿಭಟನಾ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 10:12 IST
Last Updated 20 ಜುಲೈ 2013, 10:12 IST
ಐಟಿ ದಾಳಿಗೆ ಖಂಡನೆ: 23ಕ್ಕೆ ಪ್ರತಿಭಟನಾ ರ‌್ಯಾಲಿ
ಐಟಿ ದಾಳಿಗೆ ಖಂಡನೆ: 23ಕ್ಕೆ ಪ್ರತಿಭಟನಾ ರ‌್ಯಾಲಿ   

ತುಮಕೂರು: ಆದಿಚುಂಚನಗಿರಿ ಮಠದ ಶಾಖೆ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯನ್ನು ಜಿಲ್ಲಾ ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿದೆ.
ಮಠದ ಮೇಲಿನ ಐಟಿ ದಾಳಿ, ನಂಜಾವಧೂತ ಸ್ವಾಮೀಜಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ್ಯವನ್ನು ಸಹಿಸಲಾಗದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿತು. ಮಠದ ಮೇಲೆ ನಡೆದ ದಾಳಿ ಕುರಿತಂತೆ ಚರ್ಚಿಸಲು ಶುಕ್ರವಾರ ನಗರದ ಜಿಲ್ಲಾ ಒಕ್ಕಲಿಗರ ಸಂಘದ ಆವರಣದಲ್ಲಿ ಕರೆದಿದ್ದ ಸಭೆಯಲ್ಲಿ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಜನಾಂಗದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಮಾಜದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧವೂ ದೌರ್ಜನ್ಯ ನಡೆಯುತ್ತಿದೆ. ಈ ಎಲ್ಲವನ್ನು ಖಂಡಿಸಿ ಜುಲೈ 23ರಂದು ಸರ್ಕಾರದ ವಿರುದ್ಧ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ.

ಸಭೆಯಲ್ಲಿ ಕೇಂದ್ರ ಒಕ್ಕಲಿಗರ ಸಂಘದ ಜಂಟಿ ಕಾರ್ಯದರ್ಶಿ ಆಡಿಟರ್ ನಾಗರಾಜ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಎಲ್.ಪ್ರಕಾಶ್, ತುಮಕೂರು ವಿ.ವಿ ಸಿಂಡಿಕೇಟ್ ಮಾಜಿ ಸದಸ್ಯ ಬ್ಯಾಟರಂಗೇಗೌಡ, ಸಂಘದ ಸದಸ್ಯ ಶ್ರೀನಿವಾಸಗೌಡ, ಯೋಗ ನರಸಿಂಹ, ಇತರರು ಭಾಗವಹಿಸಿದ್ದರು.

ಐಟಿ ದಾಳಿ: ರಸ್ತೆ ತಡೆ
ಕುಣಿಗಲ್: ಆದಿಚುಂಚನಗಿರಿಯ ಶಾಖಾ ಮಠದ ಮೇಲೆ ನಡೆದ ಆದಾಯ ತೆರಿಗೆ ದಾಳಿ ಖಂಡಿಸಿ ತಾಲ್ಲೂಕಿನ ನಿಡಸಾಲೆ ಗ್ರಾಮಸ್ಥರು ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು.

ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಗ್ರಾಮದಲ್ಲಿ ಸಂಘಟಿತರಾದ ನೂರಾರು ಒಕ್ಕಲಿಗ ಸಮುದಾಯದವರು ಪ್ರತಿಭಟನಾ ಸಭೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅರೆಶಂಕರ ಮಠಾಧ್ಯಕ್ಷ ಸಿದ್ದರಾಮಚೈತನ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸುವ ಹಿಂದೆ ಕುತಂತ್ರ ಅಡಗಿದೆ. ಒಕ್ಕಲಿಗ ಸಮಾಜದ ಧಾರ್ಮಿಕ ಭಾವನೆ ಕೆರಳಿಸುವ ಕಾರ್ಯವಾಗಿದ್ದು, ರಾಜ್ಯದಲ್ಲಿ ಸುಭದ್ರವಾಗಿರುವ ಒಕ್ಕಲಿಗ ಸಮುದಾಯದ ಸಂಘಟನೆಯನ್ನು ಅಭದ್ರಗೊಳಿಸುವ ಷಡ್ಯಂತ್ರ ಎಂದಿಗೂ ಫಲಕಾರಿಯಾಗುವುದಿಲ್ಲ ಎಂದರು.

ಮಠಗಳು ಧಾರ್ಮಿಕ, ಶೈಕ್ಷಣಿಕ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿವೆ. ಅವ್ಯವಹಾರ ನಡೆಸಿದ್ದರೆ ಕಾನೂನು ಬದ್ಧವಾಗಿ ಅಧ್ಯಯನ ನಡೆಸಿ ದಾಳಿ ಮಾಡುವ ಮುನ್ನ ಎಚ್ಚರಿಕೆ ಹೆಜ್ಜೆಯನ್ನಿಡಬೇಕಿತ್ತು. ಮುಂದಾದರೂ ದಾಳಿ ನಡೆಸಿದ ಉದ್ದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಪ್ರತಿಭಟನೆಯಲ್ಲಿ ಮುದ್ದಣ್ಣ ಸ್ವಾಮೀಜಿ, ಮುಖಂಡರಾದ ಗಂಗಾಧರ, ಸತೀಶ, ಶಿವರಾಜ ಇತರರಿದ್ದರು.

22ಕ್ಕೆ ಕಾಲ್ನಡಿಗೆ ಜಾಥಾ
ಶಿರಾ: ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದನ್ನು ಖಂಡಿಸಿ ಪಟ್ಟನಾಯಕನಹಳ್ಳಿಯಿಂದ ಶಿರಾ ತಾಲ್ಲೂಕು ಕಚೇರಿವರೆಗೆ ಜುಲೈ 22ರಂದು ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.

ಮಠದ ಆವರಣದಲ್ಲಿ ಶವಸಂಸ್ಕಾರ ನಡೆಸುವುದಕ್ಕೆ ಸಂಬಂಧಿಸಿದಂತೆ ಒಂದು ಜಾತಿಯ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಸ್ವಾಮೀಜಿಯವರ ಪ್ರತಿಕೃತಿ ದಹಿಸಿದ್ದು ಖಂಡನೀಯ. ಇದರ ವಿರುದ್ಧ ಮಠದ ಭಕ್ತ ಸಮೂಹದಿಂದ ಪ್ರತಿಭಟನಾತ್ಮಕವಾಗಿ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕುಂಚಿಟಿಗ ಒಕ್ಕಲಿಗ ಮುಖಂಡರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಷುಲ್ಲಕ ಕಾರಣದಿಂದ ಸ್ವಾಮೀಜಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೃತ್ಯವನ್ನು ಭಕ್ತ ಸಮೂಹ ಬಲವಾಗಿ ಖಂಡಿಸುತ್ತಿದ್ದು, 22ರಂದು ಭಕ್ತರು ಸ್ವಯಂ ಪ್ರೇರಿತರಾಗಿ ಬೃಹತ್ ಸಂಖ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಆಗಮಿಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ಕುಂಚಿಟಿಗರ ಸಂಘದ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು ಹೇಳಿದರು.

ಸಮಾಜದಲ್ಲಿ ಎಲ್ಲರೂ ಒಟ್ಟಿಗೆ ಬಾಳಬೇಕು. ಯಾರೇ ಆಗಲಿ ಜಾತಿ-ಜಾತಿ ನಡುವೆ ಕಿಡಿ ಹಚ್ಚುವ ಕೃತ್ಯ ಮಾಡಬಾರದು. ಆದರೆ ಮಠದ ಆವರಣದಲ್ಲೇ ಶವ ಸಂಸ್ಕಾರ ಮಾಡಬೇಕು ಎಂದು ಹಠ ಹಿಡಿದು ಒಂದು ಸಮಾಜದ ಹೆಸರಿನಲ್ಲಿ ಅವಾಂತರ ಸೃಷ್ಟಿಸಿದ್ದು ಸೌಜನ್ಯದ ವರ್ತನೆಯಲ್ಲ ಎಂದರು.

ಐಟಿ ದಾಳಿ: ಆದಿಚುಂಚನಗಿರಿ ಮಠದ ಮೇಲೆ ಐಟಿ ದಾಳಿ ನಡೆಸಿರುವುದನ್ನು ಕುಂಚಿಟಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ನಾಗರಾಜು ತಿಳಿಸಿದ್ದಾರೆ.

ಇದು ಕೇವಲ ಒಂದು ಮಠಕ್ಕೆ ಸೀಮಿತವಲ್ಲ. ಯಾವುದೇ ಧಾರ್ಮಿಕ ಮಠದ ಮೇಲಿನ ದಾಳಿಯನ್ನೂ ಸಂಘ ಖಂಡಿಸುತ್ತದೆ ಎಂದರು. ಮುಖ್ಯಮಂತ್ರಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರ ತೆಗೆಸುವುದು, ಒತ್ತಡ ಹೆಚ್ಚಿದಾಗ ಅದನ್ನು ಮತ್ತೆ ಅಲ್ಲೇ ಹಾಕಿಸುವುದು ಅಪಹಾಸ್ಯ ಮಾಡಿದಂತಾಗುತ್ತದೆ. ಇಂತಹ ಕೃತ್ಯಗಳನ್ನು ಸಂಘ ಖಂಡಿಸುತ್ತದೆ ಎಂದು ಹೇಳಿದರು.

ಸಂಘದ ನಿರ್ದೇಶಕರಾದ ಬಾಂಬೆ ರಾಜಣ್ಣ, ಅರೇಹಳ್ಳಿ ಬಾಬು, ನಗರಸಭೆ ಸದಸ್ಯ ಎಸ್.ಜೆ.ರಾಜಣ್ಣ, ಜಗದೀಶ್ ಚಂದ್ರ, ಲಕ್ಷ್ಮೀಕಾಂತ್, ನಿವೃತ್ತ ಶಿಕ್ಷಕ ಮರುಡಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.