ADVERTISEMENT

ಒಡೆದ ಪೈಪ್: ನೀರು ಸರಬರಾಜು ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 11:02 IST
Last Updated 15 ಡಿಸೆಂಬರ್ 2012, 11:02 IST
ಒಡೆದ ಪೈಪ್: ನೀರು ಸರಬರಾಜು ವ್ಯತ್ಯಯ
ಒಡೆದ ಪೈಪ್: ನೀರು ಸರಬರಾಜು ವ್ಯತ್ಯಯ   

ತಿಪಟೂರು: ನಗರಕ್ಕೆ ಹೇಮಾವತಿ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಒಡೆದಿದ್ದು, ದುರಸ್ತಿ ಮಾಡುವ ಯತ್ನ ಶುಕ್ರವಾರವೂ ಫಲ ನೀಡಲಿಲ್ಲ. ಇದರಿಂದಾಗಿ ಕೆಲ ದಿನ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.

ಈಚನೂರು ಕೆರೆಯಿಂದ ಪಂಪ್ ಮಾಡಿದ ಹೇಮಾವತಿ ನೀರು ಗಾಂಧಿನಗರದ ಶುದ್ಧೀಕರಣ ಘಟಕದ ಮೂಲಕ ನಗರಕ್ಕೆ ಪೂರೈಕೆಯಾಗುತ್ತದೆ. ಶುದ್ಧೀಕರಣ ಘಟಕದ ಪಕ್ಕದಲ್ಲೇ ನಗರದ ವಿವಿಧ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ಪೈಪ್‌ನಿಂದ ಈಚೆಗೆ ಸೋರಿಕೆ ಕಾಣಿಸಿಕೊಂಡಿತ್ತು.
ದುರಸ್ತಿ ಮಾಡಿಸಲು ನಗರಸಭೆ ಪ್ರಯತ್ನಿಸುತ್ತಿದೆ. ಆದರೆ ಹಳೆ ಸಿಮೆಂಟ್ ಪೈಪ್‌ಗಳನ್ನು ಜೋಡಿಸುವುದು ತಡವಾಗುತ್ತಿದೆ. ಕಾಂಕ್ರಿಟ್ ಹಾಕಿ ಜೋಡಿಸಿದರೂ `ಎಲ್' ಆಕಾರದ ಜೋಡಣೆ ಇರುವ ಸ್ಥಳದಲ್ಲಿ ನೀರಿನ ಒತ್ತಡ ತಾಳದೆ ಪೈಪುಗಳು ಒಡೆಯುತ್ತಿವೆ.

ನಗರಸಭೆ ಪ್ರಭಾರಿ ಅಧ್ಯಕ್ಷ ಟಿ.ಎನ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್, ಪೌರಾಯುಕ್ತ ಡಾ.ವೆಂಕಟೇಶಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಮಸ್ಯೆ ಪರಿಹರಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ನಗರ ನೀರು ಸರಬರಾಜು ಇಲಾಖೆ ಎಂಜಿನಿಯರುಗಳನ್ನು ಸಂಪರ್ಕಿಸಿ, ಪೈಪ್ ಜೋಡಣೆಯ ಪರಿಣಿತರನ್ನು ಕರೆಸಿ ದುರಸ್ತಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪರಿಣಿತ ಎಂಜಿನಿಯರುಗಳು ದುರಸ್ತಿ ಕಾರ್ಯ ಪ್ರಾರಂಭಿಸಿದರೂ ಕಾಮಗಾರಿ ಮುಗಿಯಲು ಐದಾರು ದಿನ ಬೇಕಾಗಬಹುದು. ಹಾಗಾಗಿ ನಗರಕ್ಕೆ ಹೇಮಾವತಿ ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪೌರಾಯುಕ್ತ ಡಾ.ವೆಂಕಟೇಶಯ್ಯ ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಇದೇ ರೀತಿ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಸಾಯಿಬಾಬಾ ರಸ್ತೆ ಎದುರು ಹಾದುಹೋಗಿದ್ದ ಹೇಮಾವತಿ ನೀರಿನ ಮುಖ್ಯ ಪೈಪ್‌ಗೆ ಧಕ್ಕೆಯಾಗಿತ್ತು. ನೀರು ನಿಂತು ರಸ್ತೆ ಕಾಮಗಾರಿಗೂ ಅಡ್ಡಿಯಾಗಿತ್ತು. ಕಡೆಗೆ ಶಿವಮೊಗ್ಗದಿಂದ ಪರಿಣಿತರನ್ನು ಕರೆಸಿ ಸರಿಪಡಿಸಲಾಗಿತ್ತು.

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು
ತಿಪಟೂರು:
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ಗ್ರಾ.ಪಂ.- ಅಧ್ಯಕ್ಷ- ಉಪಾಧ್ಯಕ್ಷರ ಹೆಸರನ್ನು ಅನುಕ್ರಮವಾಗಿ ನೀಡಲಾಗಿದೆ.
ನಾಗರಘಟ್ಟ- ಗಂಗಾಧರಯ್ಯ- ಎಚ್.ಎಂ.ಜಯಮಾಲಾ, ಕುಪ್ಪಾಳು- ರಂಗಮ್ಮ- ರಾಜಣ್ಣ, ಮತ್ತೀಹಳ್ಳಿ- ಎಸ್.ಆರ್.ಮಲ್ಲೇಶ್ ಜಯಮ್ಮ, ಹುಚ್ಚುಗೊಂಡನಹಳ್ಳಿ- ಮಂಜುಳಾ- ಕೆ.ಎಸ್.ಪ್ರಶಾಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.