ADVERTISEMENT

ಕನ್ನಡ ವಿಭಾಗ: ರಾಜಲಕ್ಷ್ಮಿ ಹೆಸರಿನಲ್ಲಿ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:47 IST
Last Updated 14 ಮೇ 2018, 8:47 IST

ಶಿರಾ: ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದವರಿಗೆ ರಾಜಲಕ್ಷ್ಮಿ ಹೆಸರಿನಲ್ಲಿ ಚಿನ್ನದ ಪದಕ ನೀಡಲಾಗುವುದು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ‘ಅನ್ನ ನೀಡಿದ ಅಮ್ಮ’ ರಾಜಲಕ್ಷ್ಮಿ ಬರಗೂರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ವಿಶ್ವವಿದ್ಯಾಲಯದ ಜತೆ ಚರ್ಚಿಸಲಾಗುವುದು’ ಎಂದರು.

‘ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಾವ ವ್ಯಕ್ತಿಯ ಪತ್ನಿಗೂ ಸಿಗದ ಸ್ಥಾನಮಾನ ಹಾಗೂ ಗೌರವ ನನ್ನ ರಾಜಲಕ್ಷ್ಮಿಗೆ ದೊರಕುತ್ತಿದೆ. ಅದಕ್ಕೆ ಅವರು ಮಾಡಿರುವ ಸಮಾಜ ಸೇವೆಯೇ ಕಾರಣ. ನಿರಾಶ್ರಿತ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿದ್ದು, ಸ್ನೇಹಿತರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಕಷ್ಟಸುಖ ವಿಚಾರಿಸಿ ಆಸರೆಯಾಗಿದ್ದು, ಎಷ್ಟೂ ಹೆಣ್ಣ ಮಕ್ಕಳ ಬಾಣಂತನ ಮಾಡಿ ಆಶ್ರಯ ನೀಡಿದ ಹೆಗ್ಗಳಿಕೆ ನನ್ನ ಪತ್ನಿಗೆ ಇದೆ’ ಎಂದು ತಿಳಿಸಿದರು.

ADVERTISEMENT

‘ರಾಜಲಕ್ಷ್ಮಿ ಹೆಸರಿನಲ್ಲಿ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಇಬ್ಬರಿಗೆ ತಲಾ ₹ 25ದ ಪ್ರಶಸ್ತಿ ನೀಡಲಾಗುವುದು. ಉತ್ತಮ ಕಾದಂಬರಿ ಮತ್ತು ವಿಚಾರ–ವಿಮರ್ಶೆ ಕೃತಿಗೆ ‘ಪುಸ್ತಕ ಪ್ರಶಸ್ತಿ’ ಕೊಡಲಾಗುವುದು. ಈ ಬಾರಿಯಿಂದ ಪ್ರತಿಭಾ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾಗಿದೆ. ಇದೆಲ್ಲ ನನ್ನ ಆತ್ಮೀಯ ಸ್ನೇಹಿತರು ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವೆ’ ಎಂದು ನುಡಿದರು.

ಕಡು ಬಡತನದಲ್ಲಿ ಹುಟ್ಟಿದ ನಾನು ರಾಜಲಕ್ಷ್ಮಿ ಜತೆ ಅಂತರ್ಜಾತಿ ವಿವಾಹ ಆದೆ. ಕಡುಬಡತನದಲ್ಲಿಯೂ ಯಾವ ದಿನವೂ ಬೇಸರ ಮಾಡಿಕೊಳ್ಳದೆ ಸಂತೋಷದಿಂದಲೇ ಜೀವನ ನಡೆಸಿದಳು. ನನ್ನ ಸಾಧನೆ ಹಾಗೂ ಯಶಸ್ಸಿನಲ್ಲಿ ರಾಜಲಕ್ಷ್ಮಿಯ ಪಾತ್ರ ಹಿರಿದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.