ಗುಬ್ಬಿ: ಬಿಜೆಪಿಯನ್ನು ಅಧಿಕಾರಕ್ಕೆ ತಂದು ದೇಶವನ್ನು ಲಂಚಾವತಾರದಿಂದ ಪಾರುಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮನವಿ ಮಾಡಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಗುಬ್ಬಿ ವಿಧಾನಸಭಾ ಕ್ಷೇತ್ರ ಬಿಜೆಪಿ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನರೇಂದ್ರಮೋದಿ ಅವರನ್ನು ಈಗಾಗಲೇ ಮನೆಮನೆಗೆ ಪರಿಚಯಿಸಿ ಆಗಿದೆ. ಇನ್ನು ಪಕ್ಷದ ಚಿಹ್ನೆ ಪರಿಚಯ ಮಾಡಿಸುವುದಷ್ಟೇ ಬಾಕಿ ಉಳಿದಿದೆ ಎಂದರು.
ವಿಧಾನಪರಿಷತ್‌ನಲ್ಲಿ ಬಿಜೆಪಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಿ.ಸಿ.ನಾಗೇಶ್, ಜಿ.ಪಂ. ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಭೈರಪ್ಪ, ಮುಖಂಡರಾದ ಎಂ.ಬಿ.ನಂದೀಶ್, ಎನ್.ಸಿ.ಪ್ರಕಾಶ್, ಎಸ್.ಡಿ.ದಿಲೀಪ್, ಟಿ.ಎಸ್.ಕಿಡಿಗಣ್ಣಪ್ಪ, ಸಾಗರನಹಳ್ಳಿಯ ನಂಜೇಗೌಡ, ನಟರಾಜು, ವಿಜಯ್‌ಕುಮಾರ್, ಜಿ.ಎನ್.ಬೆಟ್ಟಸ್ವಾಮಿ ಇತರರು ಹಾಜರಿದ್ದರು.
ಸಭೆಗೆ ಬಹಿಷ್ಕಾರ
ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಮುಖಂಡರು– ಕಾರ್ಯಕರ್ತರ ಸಭೆಗೆ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಅವರನ್ನು ಆಹ್ವಾನಿಸದಿರುವ ಬಗ್ಗೆ ಹಾಗಲವಾಡಿ ಹೋಬಳಿ ಕಾರ್ಯಕರ್ತರು ಪ್ರಶ್ನೆ ಎತ್ತಿದರು.
ವೇದಿಕೆಯಲ್ಲಿದ್ದ ಅಭ್ಯರ್ಥಿ ಜಿ.ಎಸ್.ಬಸವರಾಜು ಇತರ ಮುಖಂಡರು ಒಬ್ಬರ ಮುಖ ಒಬ್ಬರು ನೋಡಿ ಗುಸುಗುಸು ಮಾತನಾಡಿಕೊಂಡರು. ಪ್ರಶ್ನೆಗೆ ಉತ್ತರ ಕೊಡದ ಮುಖಂಡರ ವಿರುದ್ಧ ಹರಿಹಾಯ್ದ ಕಾರ್ಯಕರ್ತರು ವೇದಿಕೆ ಮೇಲೇರಿ ಐದಾರು ನಿಮಿಷ ಕೂಗಾಡಿದರು.
ಸಭೆ ಬಹಿಷ್ಕರಿಸಿ ಹೊರನಡೆದ ಕಾರ್ಯಕರ್ತರ ಮನವೊಲಿಕೆಗೆ ಮಾಜಿ ಶಾಸಕ ಬಿ.ಸಿ.ನಾಗೇಶ್, ಜಿ.ಪಂ. ಸದಸ್ಯ ಚಂದ್ರಶೇಖರ್ಬಾಬು, ಎನ್.ಸಿ.ಪ್ರಕಾಶ್, ಎಂ.ಬಿ.ನಂದೀಶ್, ಎನ್.ಸಿ.ಪ್ರಕಾಶ್, ನಟರಾಜು, ಬೆಟ್ಟಸ್ವಾಮಿ, ದಿಲೀಪ್ ಯತ್ನಿಸಿದರು. ‘ತಪ್ಪು ಮನ್ನಿಸಿ, ಒಳಗೆ ಬನ್ನಿ, ಚರ್ಚಿಸಿ ಬಗೆಹರಿಸಿಕೊಳ್ಳೋಣ’ ಎಂಬ ಮುಖಂಡರ ಮಾತಿಗೆ ಕಾರ್ಯಕರ್ತರು ಲಕ್ಷ್ಯ ಕೊಡಲಿಲ್ಲ.
‘ಕಳ್ಳಂಬೆಳ್ಳ ಕ್ಷೇತ್ರವಿದ್ದಾಗ ಮಾಜಿ ಶಾಸಕ ಕಿರಣ್‌ಕುಮಾರ್, ಬಿಜೆಪಿ ಸಂಘಟಿಸಿದ್ದಾರೆ. ಹೋಬಳಿಯ36 ಬೂತ್ ಪೈಕಿ 34ರಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಪಕ್ಷಕ್ಕೆ ನಿಷ್ಠರಾಗಿರುವ ನಮ್ಮನ್ನು– ನಮ್ಮ ಮುಖಂಡರನ್ನು ಸಭೆಗೆ ಆಹ್ವಾನಿಸಿಲ್ಲ. ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿ ನಾವು ಸಭೆಗೆ ಬಂದ್ದಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸಕೆರೆ ಗ್ರಾ.ಪಂ. ಸದಸ್ಯ ನಟೇಶ್, ಮಾಜಿ ಸದಸ್ಯರಾದ ಶಾಂತರಾಜು, ಲೋಕಮ್ಮ ರಂಗನಾಥ್, ಅಳಿಲುಘಟ್ಟದ ಕೆಂಪರಾಜು, ತೆವಡಿಹಳ್ಳಿಯ ಮಹಾರುದ್ರಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.