ADVERTISEMENT

ಕರೀಕೆರೆಯಲ್ಲಿ ವಾಮಚಾರ: ಗ್ರಾಮಸ್ಥರ ಆತಂಕ

ಆರು ಹಂದಿ ಮರಿ, ಐದು ಕೋಳಿ, ಎರಡು ಮೇಕೆ ಬಲಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 9:24 IST
Last Updated 4 ಜನವರಿ 2014, 9:24 IST

ತಿಪಟೂರು: ಮೂಢನಂಬಿಕೆ ತಡೆ ಕಾಯ್ದೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭ­ದಲ್ಲೇ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಪ್ರಾಣಿ ಬಲಿ ಕೊಟ್ಟು ಗ್ರಾಮಸ್ಥರನ್ನು ತಲ್ಲಣಗೊಳಿಸಿರುವ ಘಟನೆ ನಡೆದಿದೆ.

ತಾಲ್ಲೂಕಿನ ಕರೀಕೆರೆ ಗ್ರಾಮದ ಹೊಲ­ವೊಂದ­ರಲ್ಲಿ ಜ.1ರಂದು ರಾತ್ರಿ ಮಾಟ, ಮಂತ್ರ, ಚೌಡಿ ಪೂಜೆ, ಪ್ರಾಣಿಬಲಿ ನಡೆದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗ್ರಾಮದ ಪಾರ್ವತಮ್ಮ ಎಂಬುವರ ಹೊಲದ ತೊಗರಿ ಬೆಳೆ ನಡುವೆ ಭಯಗೊಳಿಸು­ವಂತೆ ಪ್ರಾಣಿ ಬಲಿ ನೀಡಿ ಕುಂಕುಮ, ಅರಿಷಿಣ ಚೆಲ್ಲಿ ಪೂಜೆ ಮಾಡಿರುವುದು ಕರೀಕೆರೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗುರುವಾರ ಸಂಜೆ ಹೊಲಕ್ಕೆ ಹೋದ ಮಹಿಳೆ­ವಾಮಾಚಾರ ದೃಶ್ಯ ನೋಡಿದಾಗ ಘಟನೆ ಬಹಿರಂಗಗೊಂಡಿದೆ.

ಹೊಲದ ಮಾಲೀಕರಾದ ಪಾರ್ವತಮ್ಮ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಗಿಡವೊಂದಕ್ಕೆ ಪೂಜೆ ಸಲ್ಲಿಸಿ ಬಲಿಕೊಟ್ಟ 6 ಹಂದಿ ಮರಿ, 5 ಕೋಳಿ, 2 ಮೇಕೆ ಮರಿ­ಗಳ ಶವ ಕಂಡು ಬಂದಿದೆ. ಕೋಳಿಮಟ್ಟೆ, ನಿಂಬೆ­ಹಣ್ಣು, ಅಕ್ಕಿ, ರಾಗಿ ಹಿಟ್ಟು, ರಕ್ತಮಿಶ್ರಿತ ಅನ್ನ ಇದ್ದಿದ್ದು ಮಾಟ, ಮಂತ್ರದ ಸುಳಿವು ನೀಡಿದೆ.

ಆತಂಕಗೊಂಡ ಪಾರ್ವತಮ್ಮ ತಕ್ಷಣ ಪೊಲೀಸ­ರಿಗೆ ಸುದ್ದಿ ಮುಟ್ಟಿಸಿದರು. ಎಎಸ್‌ಪಿ ಕಾರ್ತಿಕ್ ರೆಡ್ಡಿ, ಹೊನ್ನವಳ್ಳಿ ಪೊಲೀಸ್ ಠಾಣೆ ಎಸ್ಐ ರಾಘವೇಂದ್ರ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪಾರ್ವತಮ್ಮನಿಂದ ಮಾಹಿತಿ ಪಡೆದಿದ್ದಾರೆ.

ಕರೀಕೆರೆ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನ, ದೇವರ ದುರ್ಬಳಕೆ ವಿರುದ್ಧ ದನಿ ಎತ್ತಿದ್ದು, ಅದಕ್ಕೆ ಸಂಬಂಧಿಸಿದವರು ತನ್ನ ವಿರುದ್ಧ ಮಾಟ ಮಾಡಿಸಿದ್ದಾರೆ ಎಂದು ಪಾರ್ವತಮ್ಮ ಅನುಮಾನ ವ್ಯಕ್ತ­­ಪಡಿಸಿ ಪೊಲೀಸರಿಗೆ ಮಾಹಿತಿ ನೀಡಿ­ದ್ದಾರೆ. ಪೊಲೀಸರು ಈಕೆಗೆ ಧೈರ್ಯ ತುಂಬಿ ಬಂದಿದ್ದಾರೆ.

ನಿಂಬೆ ಹಣ್ಣು ತರಿಸಿದ ಎಸ್ಐ
ಆದರೆ ನಂತರ ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ತಮ್ಮ ಹೊಲದಲ್ಲಿ ಮಾಟ ಮಾಡಿ­ರುವ ಸಂಬಂಧ ಪ್ರಕರಣ ದಾಖಲಿಸುವಂತೆ ಹೊನ್ನವಳ್ಳಿ ಪೊಲೀಸ್ ಠಾಣೆಗೆ ಪಾರ್ವತಮ್ಮ ಎಡ ತಾಕಿದ್ದರು.

ಠಾಣೆಗೆ ಬಂದ ಪಾರ್ವತಮ್ಮನಿಂದ ನಾಲ್ಕು ನಿಂಬೆಹಣ್ಣು ತರಿಸಿದ ಅಲ್ಲಿನ ಎಸ್ಐ ಆಕೆಯನ್ನು ಮತ್ತೊಂದು ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಮಾಡಿಸಲು ಪ್ರಯತ್ನ ನಡೆಸಿದ್ದಾರೆ.

ಎಸ್ಐ ಈ ಕೆಲಸ ಮಾಡಿರುವುದು ನಗೆ­ಪಾಟಲಿಗೀಡಾಗಿದೆ. ಎಸ್ಐ ನಿಂಬೆ ಹಣ್ಣು ತರಿಸಿದ ವಿಚಾರವನ್ನು ಸ್ವತಃ ವಿವರಿದ ಪಾರ್ವತಮ್ಮ, ದೇವಾಲಯಕ್ಕೆ ತೆರಳಲು ನಾಲ್ಕು ನಿಂಬೆಹಣ್ಣು ತರುವಂತೆ ಠಾಣೆಯ ಎಸ್ಐ ತಿಳಿಸಿದರು. ಹಾಗಾಗಿ ನಿಂಬೆಹಣ್ಣು ತಂದು ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದೇನೆ ಎಂದು ತಮ್ಮನ್ನು ಸಂಪರ್ಕಿಸಿದ ಪರ್ತಕರ್ತರಿಗೆ ತಿಳಿಸಿದ್ದಾರೆ. ನಂತರ ಎಸ್ಐ ಹೇಳಿದ್ದಾರೆಂದು ವ್ಯಕ್ತಿಯೊಬ್ಬರು ಈ ಮಹಿಳೆಯನ್ನು ಕಾರಿನಲ್ಲಿ ಹಾಸನ ಸಮೀಪದ ಪುರದಮ್ಮ ದೇವ­ಸ್ಥಾನವೊಂದಕ್ಕೆ ಕರೆದೊಯ್ದಿದ್ದಾರೆ. ಈ ವಿಷಯ ಇದೀಗ ನಗೆಪಾಟಲಿಗೀಡಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.