ADVERTISEMENT

ಕಾಂಗ್ರೆಸ್‌ಗೆ ಒಲಿದ ಕೊರಟಗೆರೆ ಪ.ಪಂ.

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:55 IST
Last Updated 17 ಸೆಪ್ಟೆಂಬರ್ 2013, 8:55 IST

ಕೊರಟಗೆರೆ: ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ನಡೆಸಿದ ಕೊನೆ ಕ್ಷಣದ ಸರ್ಕಸ್ ಯಶಸ್ವಿ­ಯಾಗಿದೆ. ಪಟ್ಟಣ ಪಂಚಾಯಿತಿಯ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಶ್ವತ್ಥ್‌, ಉಪಾಧ್ಯಕ್ಷರಾಗಿ ನಯಾಜ್‌ ಸೋಮವಾರ ಆಯ್ಕೆಯಾದರು. ಒಟ್ಟು 14 ಸದಸ್ಯರಲ್ಲಿ 5 ಜೆಡಿಎಸ್‌, 5 ಕಾಂಗ್ರೆಸ್‌, 2 ಬಿಜೆಪಿ, 2 ಪಕ್ಷೇತರ ಸದಸ್ಯರು ಇದ್ದರು.

ಇಬ್ಬರು ಪಕ್ಷೇತರರು ಮತ್ತು ಒಬ್ಬ ಜೆಡಿಎಸ್‌ ಸದಸ್ಯರಿಗೆ ಕಾಂಗ್ರೆಸ್‌ ಗಾಳ ಹಾಕಿ ಪಟ್ಟಣ ಪಂಚಾಯಿತಿಯ ಅಧಿ­ಕಾರ ಹಿಡಿಯಿತು. ಇದಕ್ಕೂ ಮೊದಲು ಜೆಡಿಎಸ್‌ಗೆ ಬಿಜೆಪಿಯ ಇಬ್ಬರು ಸದಸ್ಯರು ಬೆಂಬಲ ನೀಡುವಂತೆ ಒಪ್ಪಂದ­­ವಾಗಿತ್ತು. ಇದರೊಂದಿಗೆ ಸ್ಥಳೀಯ ಶಾಸಕರ ಒಂದು ಮತ ಸೇರಿದಂತೆ ಒಟ್ಟು 8 ಮತಗಳ ಬೆಂಬಲ­ದೊಂದಿಗೆ ಜೆಡಿಎಸ್‌ಗೆ ಅಧಿಕಾರ ಹಿಡಿಯುವ ಅವಕಾಶವಿತ್ತು.

ಆದರೆ ಕೈ ಪಾಳಯದಲ್ಲಿ ಆಪ­ರೇಷನ್‌ ನಡೆದು ಒಬ್ಬ ಜೆಡಿಎಸ್‌ ಸದಸ್ಯ ಕಾಂಗ್ರೆಸ್‌ನತ್ತ ವಾಲಿದರು. 5 ಕಾಂಗ್ರೆಸ್‌, 2 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್‌ನ ಅಶ್ವತ್ಥ್ ಅಧ್ಯಕ್ಷರಾಗಿ ಆಯ್ಕೆಯಾದರು. ಪಟ್ಟಣ ಪಂಚಾಯಿತಿಯಲ್ಲಿ ಐವರು ಕಾಂಗ್ರೆಸ್‌ ಸದಸ್ಯರಿದ್ದರೂ ಇಬ್ಬರು ಪಕ್ಷೇತರ, ಒಬ್ಬ ಜೆಡಿಎಸ್‌ ಸದಸ್ಯರ ಬೆಂಬಲ ಪಡೆದು ಹೊಂದಾಣಿಕೆ ಆದ ಹಿನ್ನೆಲೆಯಲ್ಲಿ. ಕೊನೆ ಹಂತದಲ್ಲಿ ಜೆಡಿಎಸ್‌ನ ಅಶ್ವತ್ಥ್ ಕಾಂಗ್ರೆಸ್‌ ಬೆಂಬಲ­ದಿಂದ ಅಧ್ಯಕ್ಷರಾಗಿ, ಪಕ್ಷೇತರ ಸದಸ್ಯ ನಯಾಜ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದರು.

ಸಂಭ್ರಮ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಭರವಸೆ ಇಲ್ಲದೆ ಇದ್ದರೂ ಕೊನೆ ಹಂತ­ದಲ್ಲಿ ಬದಲಾದ ರಾಜಕೀಯ ಧ್ರುವೀಕರಣ­ದಲ್ಲಿ ಅಧಿಕಾರ ಕೈ ಪಾಲಾದ್ದ­ರಿಂದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಸ್ಥಾನ ಎರಡೂ ಕಾಂಗ್ರೆಸ್‌ಗೆ ದಕ್ಕಿದ ಸುದ್ದಿ ತಿಳಿದ ಕೂಡಲೆ ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಪಕ್ಷದ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ, ಪರಸ್ಪರರು ಸಿಹಿ ಹಂಚಿ ಸಂಭ್ರಮಿಸಿದರು.

ಆಯ್ಕೆಯಾದ ಅಭ್ಯರ್ಥಿಗಳು ಹೊರ ಬಂದ ನಂತರ ಪಟ್ಟಣದಾದ್ಯಂತ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.