ಕುಣಿಗಲ್: ಕೊನೆ ಗಳಿಗೆಯಲ್ಲಿ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಿಂದ ಟಿಕೆಟ್ ವಂಚಿತರಾದ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಈಗ ಪಕ್ಷ ತೊರೆಯುವ ಚಿಂತನೆಯಲ್ಲಿ ಇದ್ದಾರೆ. ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎಂದು ಗೌಡರ ಆಪ್ತ ಮೂಲಗಳು ತಿಳಿಸಿವೆ.
ಜೆಡಿಎಸ್‌ನಿಂದ ಬಿ ಫಾರಂ ಪಡೆದು ಕುಣಿಗಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಾಜಿ ಸಚಿವ ಡಿ.ನಾಗರಾಜಯ್ಯ ಸಿ ಫಾರಂ ತಂದು ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಮುದ್ದಹನುಮೇಗೌಡರ ನಾಮಪತ್ರ ತಿರಸ್ಕೃತವಾಗಿತ್ತು. ಟಿಕೆಟ್‌ನಿಂದ ವಂಚಿತರಾದ ನಂತರ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ವಿಧಾನಸಭೆ ಚುನಾವಣೆ ಸಮಯದಲ್ಲೂ ತಟಸ್ಥವಾಗಿ ಉಳಿದಿದ್ದರು.
ಈಗ ಗೌಡರ ಬೆಂಬಲಿಗರು ರಾಜಕೀಯವಾಗಿ ಒಂದು ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹಾಕುತ್ತಿದ್ದು, ಮತ್ತೆ ತಮ್ಮ ಮಾತೃಪಕ್ಷ ಕಾಂಗ್ರೆಸ್ ಸೇರುವ ಲಕ್ಷಣಗಳು ಗೋಚರಿಸುತ್ತಿವೆ.
1994ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಮತ್ತೊಮ್ಮೆ ಶಾಸಕರಾದರು. 2004ರಲ್ಲಿ ಜೆಡಿಎಸ್‌ನ ಎಚ್.ನಿಂಗಪ್ಪ ವಿರುದ್ಧ ಸೋಲು ಕಂಡಿದ್ದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾದರು. ಕೊನೆಗೆ ಜೆಡಿಎಸ್ ಸೇರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ನಂತರ ಜೆಡಿಎಸ್ ಮೂಲಕವೇ ಕುಣಿಗಲ್ ಕ್ಷೇತ್ರದಲ್ಲೇ ರಾಜಕೀಯ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಸಿಗದೆ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದರು. ಈಗ ಮಾತೃ ಪಕ್ಷ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದ್ದಾರೆ.
ಗೌಡರ ಸಭೆ: ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ಮುದ್ದಹನುಮೇಗೌಡ ಬೆಂಬಲಿಗರ ಗುಂಪು ಹೆಬ್ಬೂರಿನ ನಿವಾಸದಲ್ಲಿ ಸಭೆ ನಡೆಸಿತು. ಜೆಡಿಎಸ್ ತೊರೆಯುವ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
`ವಿಧಾನಸಭೆ ಚುನಾವಣೆಯಲ್ಲಿ ಬಿ ಫಾರಂ ನೀಡಿ, ಅಂತಿಮ ಘಳಿಗೆಯಲ್ಲಿ ವಂಚಿಸಿದ ಜೆಡಿಎಸ್‌ನಲ್ಲಿ ಯಾವುದೇ ಕಾರಣಕ್ಕೂ ಮುಂದುವರೆಯುವುದು ಬೇಡ' ಎಂದು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಬೆಂಬಲಿಗರ ಗುಂಪು ಒಕ್ಕೂರಿಲಿನಿಂದ ಸಭೆಯಲ್ಲಿ ಆಗ್ರಹಿಸಿದೆ.
ಜಿ.ಪಂ. ಸದಸ್ಯ ದೇವರಾಜು, ಮುಖಂಡರಾದ ಗಿರೀಶ್, ನವೀನ್, ವಿಜಯ ಕುಮಾರ್, ಪಾಪಣ್ಣ, ಹೊನ್ನೇಗೌಡ, ಐ.ಜಿ.ರಮೇಶ್, ಬೋರೇಗೌಡ, ಕೇಂಪೀರೆಗೌಡ, ಶಿವರಾಮಯ್ಯ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
`ಮೊದಲು ನನಗೆ ಬಿ ಫಾರಂ ನೀಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಮಾಜಿ ಸಚಿವರಿಗೆ ಸಿ ಫಾರಂ ನೀಡಿದರು. ಈ ಬಗ್ಗೆ ಸೌಜನ್ಯಕ್ಕಾದರೂ ಪಕ್ಷದ ವರಿಷ್ಠರು ನನ್ನನ್ನು ಸಂಪರ್ಕಿಸಲಿಲ್ಲ' ಎಂದು ಮುದ್ದಹನುಮೇಗೌಡರು ದುಗುಡದಿಂದ ಮಾತನಾಡಿದರು. ಸಭೆಯಲ್ಲಿದ್ದ ಬಹುತೇಕ ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವಂತೆ ಒತ್ತಾಯಿಸಿದರು ಎಂದು ತಿಳಿದುಬಂದಿದೆ. ಇನ್ನು ಎರಡು ಮೂರು ದಿನದೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಅವರು ತಿಳಿಸಿದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.