ADVERTISEMENT

ಕಾಡುತ್ತಿರುವ ಬರ: ರೂ. 237 ಕೋಟಿ ಬೆಳೆ ನಷ್ಟ

ಪ್ರಜಾವಾಣಿ ವಿಶೇಷ
Published 8 ಅಕ್ಟೋಬರ್ 2011, 10:25 IST
Last Updated 8 ಅಕ್ಟೋಬರ್ 2011, 10:25 IST
ಕಾಡುತ್ತಿರುವ ಬರ: ರೂ. 237 ಕೋಟಿ ಬೆಳೆ ನಷ್ಟ
ಕಾಡುತ್ತಿರುವ ಬರ: ರೂ. 237 ಕೋಟಿ ಬೆಳೆ ನಷ್ಟ   

ತುಮಕೂರು: ಮಳೆ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮುಂಗಾರು ಬೆಳೆಗಳ ಬೆಳವಣಿಗೆ ಕುಂಠಿತ ಗೊಂಡಿದೆ. ಜಿಲ್ಲಾಧಿಕಾರಿ ನೀಡಿದ ವರದಿ ಆಧಾರದ ಮೇಲೆ ಸರ್ಕಾರ ಮಧುಗಿರಿ, ತುಮಕೂರು, ಕುಣಿಗಲ್, ಪಾವಗಡ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ.

ರಾಗಿ ಬೆಳೆಯುವ ಪ್ರದೇಶಗಳಾದ ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲ್ಲೂಕಿನಲ್ಲಿ ಅಕ್ಟೋಬರ್ ಮೊದಲ ವಾರದಲ್ಲೂ ಮಳೆ ಅಭಾವ ಮುಂದುವರೆದಿದ್ದು ಬೆಳೆ ಕೈಗೆ ಹತ್ತುವ ಸಾಧ್ಯತೆ ತೀರಾ ಕಡಿಮೆ.

ಮುಂಗಾರು ಹಂಗಾಮಿನಲ್ಲಿ 78,532 ಹೆಕ್ಟೇರ್ ಪ್ರದೇಶ ಬಿತ್ತನೆಯಾಗದೆ ಉಳಿದಿದೆ. ಬಿತ್ತನೆಯಾಗಿರುವ 2,13,751 ಹೆಕ್ಟೇರ್ ಪದೇಶದಲ್ಲಿ ಬೆಳೆ ನಾಶವಾಗುವ ಹಂತ ತಲುಪಿದೆ. ಅಕ್ಟೋಬರ್‌ನಲ್ಲೂ ಒಣಹವೆ ಮುಂದುವರಿದರೆ 1,73,162 ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆಗಳು ಹಾಳಾಗುತ್ತವೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಭಾರಿ ನಷ್ಟ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಒಟ್ಟು ರೂ. 237.71 ಕೋಟಿ ಆರ್ಥಿಕ ನಷ್ಟವಾಗಿದೆ. ಒಟ್ಟು 1898 ಗ್ರಾಮಗಳಲ್ಲಿ ಬರದ ಕರಿನೆರಳು ಆವರಿಸುತ್ತಿದೆ. 89081 ಹೆಕ್ಟೇರ್ ಶೇಂಗಾ, 102288 ಹೆಕ್ಟೇರ್ ರಾಗಿ, 3486 ಹೆಕ್ಟೇರ್ ತೊಗರಿ, 11331 ಹೆಕ್ಟೇರ್ ಮುಸುಕಿನಜೋಳ ಮಳೆ ಅಭಾವಕ್ಕೆ ತತ್ತರಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ಬೆಳೆ ಒಣಗಿ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೊಳಕೆ, ತೆಂಡೆ, ಹೂವು ಮತ್ತು ಕಾಳು ಕಟ್ಟುವ ಹಂತದಲ್ಲಿ ಮಳೆ ಕೊರತೆಯಿಂದಾಗಿ ಬೆಳೆ ಬಾಡಿ, ಒಣಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 529 ಮಿ.ಮೀ ಸೆಪ್ಟೆಂಬರ್ ಅಂತ್ಯದವರೆಗೆ ವಾಡಿಕೆಯಂತೆ 419 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 378 ಮಿ.ಮೀ ಮಳೆಯಾಗಿದೆ. ಹಾಕಿದ ಬೆಳೆಗಳು ಉತ್ತಮ ಬೆಳವಣಿಗೆ ಕಾಣುವ ಸೆಪ್ಟೆಂಬರ್‌ನಲ್ಲಿ ಮಳೆ ಕೈಕೊಟ್ಟಿದೆ. ಸೆಪ್ಟೆಂಬರ್‌ನಲ್ಲಿ 135 ಮಿ.ಮೀ ಮಳೆಯಾಗಬೇಕಿದ್ದು, ಕೇವಲ 37.5 ಮಿ.ಮೀ ಮಳೆಯಾಗಿದೆ.

ಮಳೆ ಎಲ್ಲ ಪ್ರದೇಶಗಳಿಗೆ ಸಮಾನವಾಗಿ ಹಂಚಿಕೆಯಾಗಿಲ್ಲ. ಕೆಲವೇ ಪ್ರದೇಶದಲ್ಲಿ ಚದುರಿದಂತೆ ಸುರಿದಿದೆ. ಸಾಕಷ್ಟು ರೈತರು ಅವಧಿ ಮೀರಿದ ನಂತರವೂ ಸೆಪ್ಟೆಂಬರ್‌ನಲ್ಲಿ ರಾಗಿ, ಶೇಂಗಾ ಬಿತ್ತಿದ್ದರು. ಸಕಾಲಕ್ಕೆ ಮಳೆಯಾಗದೆ ಬೆಳವಣಿಗೆ ಕುಂಠಿತವಾಗಿದೆ.

ಬರಪೀಡಿತ ಪ್ರದೇಶದ ಘೋಷಣೆಯಾಗದ ತಾಲ್ಲೂಕುಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ಕೊರಟಗೆರೆ: ಮುಂಗಾರು ಹಂಗಾಮಿನಲ್ಲಿ ಬಿತ್ತಿದ್ದ ಮುಸುಕಿನಜೋಳ ಮಳೆ ಕೊರತೆಯಿಂದ ಹಾನಿಗೊಳಗಾಗಿದೆ. ಹೊಳವನಹಳ್ಳಿ, ಚನ್ನರಾಯನದುರ್ಗ ಹೋಬಳಿಯಲ್ಲಿ ಪರಿಸ್ಥಿತಿ ವಿಷಮಿಸಿದೆ.

ಚಿಕ್ಕನಾಯಕನಹಳ್ಳಿ: ಪೂರ್ವ ಮುಂಗಾರು ಬೆಳೆಗಳಾದ ಎಳ್ಳು, ಹೆಸರು ಸಂಪೂರ್ಣ ನಾಶವಾಗಿದೆ. ಆಗಸ್ಟ್‌ನಲ್ಲಿ ಬಿದ್ದ ಅಲ್ಪ ಮಳೆಯನ್ನೇ ನೆಚ್ಚಿಕೊಂಡು ಬಿತ್ತಿದ ರಾಗಿ ಬಾಡುತ್ತಿದೆ. ಹುಳಿಯಾರು, ಹಂದನಕೆರೆ, ಕಂದಿಕೆರೆ ಹೋಬಳಿಗಳಲ್ಲಿ ಬೆಳೆ ನಾಶ ಭೀತಿ ಎದುರಾಗಿದೆ.

ತುರುವೇಕೆರೆ: ಸತತ ಮಳೆ ಕೊರತೆಯಿಂದಾಗಿ ಮಾಯಸಂದ್ರ, ದಬ್ಬೇಗಟ್ಟ ಹೋಬಳಿಗಳಲ್ಲಿ ಬೆಳೆಹಾನಿಯಾಗಿದೆ.
ಗುಬ್ಬಿ: ಆಗಸ್ಟ್ ಕೊನೆ, ಸೆಪ್ಟೆಂಬರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ ಚೇಳೂರು, ಹಾಗನವಾಗಿ, ಕಡಬ ಹೋಬಳಿಯಲ್ಲಿ ರಾಗಿ ಬೆಳೆ ನೆಲಕಚ್ಚುವ ಸ್ಥಿತಿಯಲ್ಲಿದೆ.

ತಿಪಟೂರು: ಪೂರ್ವ ಮುಂಗಾರು ಬೆಳೆಗಳು ಜೂನ್ ಮಳೆ ಕೊರತೆಯಿಂದಾಗಿ ಹಾನಿಗೊಳಗಾದವು. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಿಂದಾಗಿ ಹೊನ್ನವಳ್ಳಿ, ಕಸಬಾ ಹೋಬಳಿಯಲ್ಲಿ ಮುಂಗಾರು ಹಂಗಾಮಿನ ರಾಗಿ ಹಾನಿಗೊಳಗಾಗುವ ಭೀತಿ ಎದುರಾಗಿದೆ.

ಸರ್ಕಾರಕ್ಕೆ ಪತ್ರ: ಇಡಿ ಜಿಲ್ಲೆಯನ್ನು `ಬರಪೀಡಿತ ಪ್ರದೇಶ~ದ ಪಟ್ಟಿಗೆ ಸೇರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ ಗುರುವಾರವೇ ಪೂರಕ ದಾಖಲೆಗಳೊಂದಿಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬರದ ನಾಡು ಪಟ್ಟಿಯಲ್ಲಿ ಇಲ್ಲ: ಆತಂಕ

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸದೇ ಅನ್ಯಾಯ ಮಾಡಲಾಗಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಚಿಕ್ಕನಾಯಕನಹಳ್ಳಿ ಪ್ರದೇಶದಲ್ಲಿ ಯಾವುದೇ ನೀರಾವರಿ  ವ್ಯವಸ್ಥೆ ಇಲ್ಲ. ಜನತೆ ಮಳೆಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ತಾಲ್ಲೂಕಿನ ಬೋರನಕಣಿವೆ ಜಲಾಶಯ 20 ವರ್ಷಗಳಿಗೊಮ್ಮೆ ತುಂಬಿದರೆ ಹೆಚ್ಚು. ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಬಹಳ ಕಡಿಮೆ ಮಳೆಯಾಗಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಸುತ್ತಾ ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ಹುಳಿಯಾರು ಹೋಬಳಿಯಲ್ಲಂತೂ ಸಂಪೂರ್ಣ ಮಳೆ ಬಾರದೆ ಬಿತ್ತನೆ ಕಾರ್ಯವೇ ನಡೆದಿಲ್ಲ. ಮುಂಗಾರಲ್ಲೂ ಸಹ ಮಳೆ ಬರಲಿಲ್ಲ. ಮತ್ತೊಮ್ಮೆ ತಾಲ್ಲೂಕಿನ ಸ್ಥಿತಿಗತಿಯನ್ನು ಅವಲೋಕಿಸಿ ಬರಗಾಲದ ಪಟ್ಟಿಗೆ ಸೇರಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಬಿಳಿ ಜೋಳ ಬಿತ್ತಿ ಜಾನುವಾರುಗಳಿಗೆ ಮೇವಾದರೂ ಆಗುತ್ತದೆ ಎಂಬ ಕಾರಣಕ್ಕೆ ಒಣ ಭೂಮಿಯನ್ನೆ ಹದ ಮಾಡಿದ್ದೇವೆ. ಈಗ ಮಳೆ ಹೋದರೆ ಜಾನುವಾರುಗಳನ್ನು ಮಾರಿ ಕೈತೊಳೆದು ಕೊಳ್ಳಬೇಕಾಗುತ್ತದೆ ಎಂದು ಸೋಮನಹಳ್ಳಿ ರೈತ ರಂಗನಾಯ್ಕ ಹೇಳಿದರು.

ಬರದ ನೆರಳು: ತತ್ತರಿಸಿದ ರೈತರ ಬದುಕು

ತೋವಿನಕೆರೆ: ಕೊರಟಗೆರೆ ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ.52ರಷ್ಟು ಬೆಳೆ ವಿಫಲವಾಗಿದೆ. ಈ ಕುರಿತು ಸರ್ಕಾರಕ್ಕೆ ಅಗತ್ಯ ಮಾಹಿತಿಯನ್ನು ಶೀಘ್ರ ರವಾನಿಸುವುದಾಗಿ ತಹಶೀಲ್ದಾರ್ ವಿ.ಪಾತರಾಜು ತಿಳಿಸಿದರು.

ತಾಲ್ಲೂಕಿನ ಬೆಳೆ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಈಗಾಗಲೇ ಕೃಷಿ ಇಲಾಖೆಯ ನಿರ್ದೇಶಕರೂ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಬೆಂಗಳೂರಿನ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳೂ ನಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೂ ನಿಯಮಿತವಾಗಿ ಮಾಹಿತಿ ರವಾನಿಸಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕಿನ ಹೆಚ್ಚಿನ ಸಂಖ್ಯೆಯ ರೈತರು ಸಣ್ಣ ಮತ್ತು ಅತಿಸಣ್ಣ ಭೂ ಹಿಡುವಳಿ ಹೊಂದಿದ್ದಾರೆ. ರೈತರ ಸಂಕಷ್ಟದ ಕುರಿತು ಕ್ಷೇತ್ರದ ಶಾಸಕರು ಮತ್ತು ಇತರ ಜನಪ್ರತಿನಿಧಿಗಳೂ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ನುಡಿದರು.

ತಾಲ್ಲೂಕಿನ ಬಹುತೇಕ ಎಲ್ಲ ಕೆರೆಗಳು ಬಣಗುಟ್ಟುತ್ತಿವೆ. ಮುಂಗಾರು ಹಂಗಾಮಿನ ಬೆಳೆ ಕಾಳು ಕಟ್ಟುವ ಹಂತದಲ್ಲಿ ಮಳೆ ಸಂಪೂರ್ಣ  ಕೈಕೊಟ್ಟ ಕಾರಣ ಪ್ರಸಕ್ತ ಸಾಲಿನ ಬೆಳೆ ಕೈಬಿಟ್ಟಂತೆ ಆಗಿದೆ. ತಾಲ್ಲೂಕಿನ ಸೆಪ್ಟೆಂಬರ್ ತಿಂಗಳ ವಾಡಿಕೆ ಮಳೆ 149.5 ಮಿಮೀ. ಆದರೆ ಈ ಬಾರಿ ಕೇವಲ 58.4 ಮಿ.ಮೀ ಬಿದ್ದಿದೆ ಎಂದು ಮಾಹಿತಿ ನೀಡಿದರು.

ಸಹಾಯಕ ಕೃಷಿ ಅಧಿಕಾರಿ ಅಶೋಕ್ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಒಟ್ಟು 33,488 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 17,413 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದರು.

ತೋವಿನಕೆರೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಸವರಾಜು, ಗಟ್ಲಗೊಲ್ಲಹಳ್ಳಿ ಬಸವರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.