ಚಿಂತಾಮಣಿ: ನಿರ್ಭೀತ ಮತ್ತು ಗಂಡಾಂತರ ರಹಿತ ಸಮಾಜ ನಿರ್ಮಾಣ ಹಾಗೂ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಕಾನೂನಿನ ಪರಿಪಾಲನೆ ಮಾಡುವುದು ಅಗತ್ಯವಾಗಿದೆ ಎಂದು ಸ್ಥಳೀಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಪಾಲ್ ಅಭಿಪ್ರಾಯಪಟ್ಟರು.
ನಗರದ ಚೇಳೂರು ರಸ್ತೆಯಲ್ಲಿರುವ ವಿಕ್ರಮ್ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಕಾಲೇಜುಗಳ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮೌಲ್ಯಯುತ ಜೀವನಕ್ಕೆ ಅನುಗುಣವಾದ ಪಠ್ಯಪುಸ್ತಕಗಳ ರಚನೆಯಾಗಬೇಕು. ಜತೆಗೆ ಕಾನೂನಿನ ತಿಳಿವಳಿಕೆ ನೀಡುವ ಕೆಲಸವೂ ಸಹ ಆರಂಭಿಕ ಹಂತದಿಂದಲೇ ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳಿಗೆ ಕಾನೂನಿನ ತಿಳಿವಳಿಕೆಯನ್ನು ನೀಡಬೇಕು ಎಂದು ಸೂಚಿಸಿದರು.
ಬಿಜೆಪಿ ಮುಖಂಡ ಸೂರ್ಯಕಾಂತ್‌ರಾಕಲೆ ಮಾತನಾಡಿ, ರಾಜಕಾರಣಿಗಳು ಹೆಚ್ಚಾಗಿ ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಸಂಸತ್ತು ಮತ್ತು ಶಾಸನ ಸಭೆಗಳಲ್ಲಿ ಕಾನೂನು ರೂಪಿಸುವಂತಹವರು ನಡೆದುಕೊಳ್ಳುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕಾನೂನಿನ ಅರಿವು ಅಗತ್ಯ. ದೇಶದ ಯುಶಕ್ತಿಯಾದ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾನೂನು ಅರಿವು ಅಗತ್ಯ ಎಂದರು.
ಎಸ್‌ಎಲ್‌ಎನ್ ವಿದ್ಯಾಸಂಸ್ಥೆ ಅಧ್ಯಕ್ಷ ನರಸಿಂಹರೆಡ್ಡಿ, ನ್ಯಾಯಾಧೀಶ ಬಿ.ಸಿ.ಚಂದ್ರಶೇಖರ್, ನ್ಯಾಯಮೂರ್ತಿ ಪ್ರಕಾಶ ನಾಯಕ್, ವಕೀಲರ ಸಂಘದ ಅಧ್ಯಕ್ಷ ಪಾಪಿರೆಡ್ಡಿ, ಸಹಾಯಕ ಸರ್ಕಾರಿ ಅಭಿಯೋಜಕ ರೆಹಮಾನ್, ಕೆ.ಎಸ್.ಜ್ಯೋತಿಲಕ್ಷ್ಮೀ, ಹಿರಿಯ ವಕೀಲ ಎ.ಎಸ್.ನಾಗರಾಜ್, ಮುನಿರೆಡ್ಡಿ, ಜಿ.ಎಂ.ಇಬ್ರಾಹಿಂ ಮತ್ತಿತರರು ಭಾಗವಹಿಸಿದ್ದರು.
ಹಿರಿಯ ವಕೀಲ ಕೆ.ವಿ.ವೆಂಕಟರಾಯಪ್ಪ ಭೂಸುಧಾರೆ ಬಗ್ಗೆ, ಬಿ.ಆರ್.ಶ್ರೀನಾಥ್ ಆಸ್ತಿಗಳ ವರ್ಗಾವಣೆ ಕಾಯ್ದೆ, ಡಿ.ಎಲ್.ಪ್ರಸಾದ್ ಮಾಹಿತಿ ಹಕ್ಕು ಹಾಗೂ ಎಸ್.ರಾಜಾರಾಂ ಮೋಟಾರು ವಾಹನ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.