ADVERTISEMENT

ಕಾರ್ಯಪಡೆ ಪುನರ್‌ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 9:35 IST
Last Updated 3 ಜನವರಿ 2012, 9:35 IST
ಕಾರ್ಯಪಡೆ ಪುನರ್‌ರಚನೆಗೆ ಆಗ್ರಹ
ಕಾರ್ಯಪಡೆ ಪುನರ್‌ರಚನೆಗೆ ಆಗ್ರಹ   

ತುಮಕೂರು: ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಪಡೆಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನೂ ಸದಸ್ಯರಾಗಿ ನೇಮಿಸಬೇಕು. ಬರದಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ತಮಿಳುನಾಡು ಮಾದರಿಯಲ್ಲಿ ತಕ್ಷಣ ರೂ. 5 ಲಕ್ಷ ಪರಿಹಾರ ಒದಗಿಸಬೇಕು ಎಂಬ ಎರಡು ಮಹತ್ವದ ನಿರ್ಣಯಗಳನ್ನು ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.

ಅಧ್ಯಕ್ಷ ಡಾ.ಬಿ.ಎನ್.ರವಿ ನಿರ್ಣಯ ಓದುತ್ತಿದ್ದಂತೆಯೇ ಎಲ್ಲ ಸದಸ್ಯರೂ ಸಮ್ಮತಿ ಸೂಚಿಸಿದರು.
ಬರದಿಂದ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಸಮಸ್ಯೆ ಪಟ್ಟಿಯನ್ನು ಇನ್ನು ಮೂರು ದಿನದಲ್ಲಿ ಅಧ್ಯಕ್ಷರ ಕಚೇರಿಗೆ ಎಲ್ಲ ಸದಸ್ಯರು ತಲುಪಿಸಬೇಕು. ಅದನ್ನು ಕ್ರೋಡೀಕರಿಸಿ ಜಿಲ್ಲೆಯ ಎಲ್ಲ ಸಂಸದರು, ಶಾಸಕರ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಬರದಿಂದ ಜಿಲ್ಲೆಯಲ್ಲಿ ಒಟ್ಟು ರೂ. 340 ಕೋಟಿ ನಷ್ಟ ಸಂಭವಿಸಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ತುರ್ತಾಗಿ ರೂ. 44 ಕೋಟಿ ಬೇಕಾಗಿದೆ. ಕುಡಿಯುವ ನೀರು ಸೇರಿದಂತೆ ಅತ್ಯಗತ್ಯ ಕಾಮಗಾರಿ ನಿರ್ವಹಣೆಗೆ ರೂ. 15 ಕೋಟಿಯ ಅಗತ್ಯವಿದೆ ಎಂದು ಸಭೆಗೆ ಅಧ್ಯಕ್ಷರು ಮಾಹಿತಿ ನೀಡಿದರು.

ಈಗಾಗಲೇ ಬರ ಪೀಡಿತ 6 ತಾಲ್ಲೂಕಿಗೆ ತಲಾ ರೂ. 20 ಲಕ್ಷ, ಉಳಿದ ತಾಲ್ಲೂಕುಗಳಿಗೆ ತಲಾ ರೂ. 10 ಲಕ್ಷ, ಮೇವು ಸಂಗ್ರಹಕ್ಕಾಗಿ ರೂ. 2 ಲಕ್ಷ ಬಿಡುಗಡೆ ಮಾಡಲಾಗಿದೆ. ಪರಿಹಾರ ಕಾಮಗಾರಿ ಕೈಗೊಳ್ಳಲು ಈ ಹಣ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಸ್ಥಾಯಿ ಸಮಿತಿ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ನೀರಾವರಿ ಯೋಜನೆ ಕುರಿತು ಮಾತನಾಡಿದರು.

ಅಸಮಾಧಾನ: ಜಿಲ್ಲೆಯಲ್ಲಿ ಜಾನುವಾರು ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದರಾವ್ ಆರೋಪಿಸಿದರು. ಸದಸ್ಯರಾದ ಕೃಷ್ಣಪ್ಪ, ಬಡೀರಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ರವೀಂದ್ರ, ಒಟ್ಟು 11,600 ಫಲಾನುಭವಿಗಳಿಗೆ ಮೇವು ಬಿತ್ತನೆ ಬೀಜ ವಿತರಿಸಲಾಗಿದೆ. ಜನವರಿ ಕೊನೆ ವಾರದಲ್ಲಿ ಒಟ್ಟು 43500 ಟನ್ ಹಸಿರು ಮೇವು ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದರು.

ಪುಢಾರಿ ಅಧಿಕಾರಿ: ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ದೊರೈರಾಜ್ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಆಗುವ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ ಎಂಬ ಹೆಬ್ಬೂರು ಕ್ಷೇತ್ರದ ಸದಸ್ಯೆ ಲಲಿತಾ ನಿಂಗಪ್ಪ ಆರೋಪ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

`ದೊರೈರಾಜ್ ಒಬ್ಬ ಪುಢಾರಿ. ತಮ್ಮ ಸಲಹೆಗಾರರ ಮಾತು ಕೇಳಿಕೊಂಡು ಕಾರ್ಯಕ್ರಮಗಳ ದಿನಾಂಕ ನಿಗದಿ ಮಾಡುತ್ತಾರೆ. ನನ್ನ ಅನುದಾನದಲ್ಲಿ ನಡೆಯುವ ಕಾಮಗಾರಿ ಭೂಮಿಪೂಜೆಗೆ ಆಹ್ವಾನಿಸುವುದಿಲ್ಲ~ ಎಂದು ಸಂಸದ ಬಸವರಾಜ್ ದೂರಿದರು.

`ನೀವು ಪಕ್ಷದ ಸದಸ್ಯರಾಗಿ ಕೆಲಸ ಮಾಡುತ್ತೀದ್ದೀರಿ? ಜನಪ್ರತಿನಿಧಿಗಳನ್ನು ಎದುರು ಹಾಕಿಕೊಂಡರೆ ನಿಮ್ಮ ಸರ್ವೀಸ್ ಕ್ಲಿಯರ್ ಆಗಲ್ಲ~ ಎಂದು ಸದಸ್ಯ ಹುಚ್ಚಯ್ಯ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.