ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇಗಟ್ಟದಲ್ಲಿ ಅಗ್ನಿಕೊಂಡ ಹಾಯುವಾಗ ದೇವರನ್ನು ಹೊತ್ತಿದ್ದವರು ಮುಗ್ಗರಿಸಿದ ಪರಿಣಾಮ ಕೆಂಡದಲ್ಲಿ ಬಿದ್ದು, ದೇವರನ್ನು ನಿಗಿನಿಗಿ ಕೆಂಡದಲ್ಲೇ ಬಿಟ್ಟು ಓಡಿದ ಘಟನೆ ಮಂಗಳವಾರ ನಡೆದಿದೆ.
ಗಂಗಾಸ್ನಾನ ಮುಗಿಸಿ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ದೇವರನ್ನು ಕರೆತರಲಾಯಿತು. ಮಧ್ಯಾಹ್ನ 3ಗಂಟೆಗೆ ಭಕ್ತರ ಹರ್ಷೋದ್ಗಾರದೊಂದಿಗೆ ಅಗ್ನಿಕೊಂಡ ಹಾಯುವ ಪ್ರಕ್ರಿಯೆಗೆ ಚಾಲನೆ ನಿಡಲಾಯಿತು.
ಕೆಂಡ ಹಾಯುವಾಗ ಮುಂಬದಿಯಲ್ಲಿ ಪಲ್ಲಕ್ಕಿ ಹೊತ್ತಿದ್ದ ಸೋಮಶೇಖರ್ ಎಂಬಾತ ಮುಗ್ಗರಿಸಿ ಕೆಂಡದಲ್ಲಿ ಬಿದ್ದರು. ತಕ್ಷಣ ಹಿಂಬದಿಯಲ್ಲಿದ್ದ ಗೋವಿಂದರಾಜ್ ಕೂಡ ಆಯತಪ್ಪಿ ಬಿದ್ದರು. ಇಬ್ಬರೂ ದೇವರನ್ನು ಅಗ್ನಿ ಕೊಂಡದಲ್ಲೇ ಬಿಟ್ಟು ಹೊರಗೆ ಓಡಿದರು. ಈ ಘಟನೆಯಿಂದ ನೆರೆದಿದ್ದ ಭಕ್ತಸ್ತೋಮ ಕ್ಷಣ ಕಾಲ ದಂಗಾಯಿತು!
ದೇವರನ್ನು ಕೆಂಡದಲ್ಲೇ ಬಿಟ್ಟು ಓಡಿದ್ದರಿಂದ ಪಲ್ಲಕ್ಕಿ ಹೊತ್ತಿದ್ದವರು ಪ್ರಾಣಾಪಾಯದಿಂದ ಪಾರಾದರು. ನಂತರ ಭಕ್ತರು ಹೊರಗಿನಿಂದ ಪಲ್ಲಕ್ಕಿ ಸಮೇತ ದೇವರನ್ನು ಕೆಂಡದಿಂದ ಹೊರಗೆ ಎಳೆದುಕೊಂಡರು. ಇಬ್ಬರಿಗೂ ಗಂಭೀರ ಸುಟ್ಟಗಾಯಗಳಾಗಿದ್ದು, ತಕ್ಷಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಎರಡು ಶತಮಾನದ ಇತಿಹಾಸ ಹೊಂದಿರುವ ದಬ್ಬೇಘಟ್ಟ ಮರುಳಸಿದ್ದೇಶ್ವರ ಜಾತ್ರೆ ತಾಲ್ಲೂಕಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದು. ಅದರಲ್ಲೂ ಜಾತ್ರೆಯ ಪ್ರಮುಖ ಘಟ್ಟವಾದ ದೇವರು ಕೆಂಡ ಹಾಯುವುದನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಾರೆ. ಈ ಬಾರಿ ಆರು ಟ್ರ್ಯಾಕ್ಟರ್ ಲೋಡು ಒಣ ಸೌದೆ ಸುಟ್ಟು 15 ಚದರಡಿ ವಿಸ್ತೀರ್ಣದಲ್ಲಿ ಕೆಂಡ ಹರಡಲಾಗಿತ್ತು. ಇದೇ ಮೊದಲ ಬಾರಿಗೆ ಈ ಅವಘಡ ಸಂಭವಿಸಿದ್ದರಿಂದ ಭಕ್ತರು ಕಳವಳಕ್ಕೀಡಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.