ADVERTISEMENT

ಕೆರೆಯಲ್ಲಿ ನೀರಿದೆ; ಸರಬರಾಜಿನದ್ದೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 9:45 IST
Last Updated 8 ಜನವರಿ 2011, 9:45 IST

ತುಮಕೂರು: ನಗರಕ್ಕೆ ನೀರು ಸರಬರಾಜಾಗುವ ಬುಗಡನಹಳ್ಳಿ ಕೆರೆಯಲ್ಲಿ ಸಾಕಷ್ಟು ನೀರಿದೆ. ಕೆರೆ ತುಂಬಿ ತುಳುಕುತ್ತಿದ್ದರೂ ನಗರದ ಜನತೆಗೆ ನೀರು ದೊರೆಯುತ್ತಿಲ್ಲ. ಬೇಸಿಗೆ ಬಂದರೆ ಮತ್ತೇನು ಎನ್ನುವ ಆತಂಕ ಜನತೆಯನ್ನು ಕಾಡುತ್ತಿದೆ. ರಾಜ್ಯದಲ್ಲಿ ನೀರು ಸರಬರಾಜು ಯೋಜನೆಗಳಿಗೆ ಹಣವಿಲ್ಲ ಎನ್ನುವಂತಿಲ್ಲ. ಕುಡಿಯುವ ನೀರು ನೀಡಲು ವಿಶೇಷ ಅನುದಾನ ಪಡೆಯುವ ವ್ಯವಸ್ಥೆ ಇದೆ. ಯಾವುದೇ ಸ್ಥಳೀಯ ಸಂಸ್ಥೆ ನೀರಿನ ಯೋಜನೆಗೆ ಹಣ ಇಲ್ಲ ಎಂದು ಹೇಳುವಂತಿಲ್ಲ. ಒಂದೆಡೆ ನೀರಿದೆ, ಮತ್ತೊಂದೆಡೆ ಹಣವಿದೆ. ಆದರೆ ಸಮರ್ಪಕ ಯೋಜನೆ ಮತ್ತು ಬದ್ಧತೆ ಕೊರತೆಯಿಂದ ಇದುವರೆಗೆ ದೂರದೃಷ್ಟಿಯ ಯೋಜನೆಗಳು ಜಾರಿಯಾಗಲಿಲ್ಲ.

ರಾಜ್ಯ ನೀರು ಸರಬರಾಜು ಮಂಡಳಿ ನಗರಕ್ಕೆ ಅವಶ್ಯವಿರುವ ನೀರು ಪೂರೈಸಬೇಕು. ನೀರನ್ನು ಶುದ್ಧೀಕರಿಸಿ ನಗರದ 44 ಟ್ಯಾಂಕ್‌ಗಳಿಗೆ ತುಂಬಿಸುವ ಜವಬ್ದಾರ ಮಂಡಳಿಗೆ ಸೇರಿದೆ. ಆನಂತರ ನಗರದ ಅವಶ್ಯಕತೆಗೆ ಅನುಗುಣವಾಗಿ ಮನೆಗಳಿಗೆ ಸರಬರಾಜು ಮಾಡುವ ಹೊಣೆಯನ್ನು ನಗರಪಾಲಿಕೆ ಹೊತ್ತುಕೊಂಡಿದೆ. ಎರಡು ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಸಹ ನೀರು ಸರಬರಾಜು ಸಮಸ್ಯೆಗೆ ಕಾರಣವಾಗಿದೆ.

ನೀರು ಸರಬರಾಜು ಮತ್ತು ನಿರ್ವಹಣೆಯನ್ನು ಮಂಡಳಿ ಹೊತ್ತುಕೊಂಡಿದ್ದರೂ, ಸಂಪೂರ್ಣ ಹಣವನ್ನು ನಗರಪಾಲಿಕೆ ಭರಿಸುತ್ತದೆ. ಇದಕ್ಕಾಗಿ ಪ್ರತಿ ತಿಂಗಳು ಮಂಡಳಿ ಸಿಬ್ಬಂದಿಯ ವೇತನ ಸೇರಿದಂತೆ ಸುಮಾರು ರೂ. 1.80 ಲಕ್ಷವನ್ನು ಪಾಲಿಕೆ ನೀಡುತ್ತಿದೆ. ಇದೆಲ್ಲಾ ನಗರದ ನಾಗರಿಕರ ತೆರಿಗೆ ಹಣ. ಆದರೂ ನಗರಕ್ಕೆ ಸಮರ್ಪಕ ಕುಡಿಯುವ ನೀರು ಕೊಡುವಲ್ಲಿ ಮಂಡಳಿ ಅಧಿಕಾರಿಗಳು ವಿಫಲರಾಗಿದ್ದಾರೆ.

ತೃಪ್ತಿಯಿಲ್ಲ: ಆಯುಕ್ತ
‘ಜನತೆಗೆ ಕೊಡುತ್ತಿರುವ ನೀರಿನ ಪ್ರಮಾಣದ ಬಗ್ಗೆ ಸ್ವತಃ ನನಗೂ ತೃಪ್ತಿ ಇಲ್ಲ. ಈಗ ಅಗತ್ಯವಿರುವ ಅರ್ಧದಷ್ಟು ನೀರು ಸಹ ನೀಡಲು ನಮಗೆ ಸಾಧ್ಯವಾಗಿಲ್ಲ. ನಾವು ಎಷ್ಟು ಹಣ ಬೇಕಾದರೂ ಕೊಡುತ್ತೇವೆ. ಸರಿಯಾಗಿ ನೀರು ಸರಬರಾಜು ಮಾಡಿ ಎಂದು ಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಮಸ್ಯೆಯನ್ನು ಹಂತಹಂತವಾಗಿ               ಬಗೆಹರಿಸಲಾಗುತ್ತಿದೆ’ ಎಂದು ನಗರಪಾಲಿಕೆ ಆಯುಕ್ತ ಜಯವಿಭವಸ್ವಾಮಿ ಪ್ರಜಾವಾಣಿಗೆ ತಿಳಿಸಿದ್ದಾರೆ.

‘ನಗರಪಾಲಿಕೆ ಕೇಳಿದಷ್ಟು ಹಣ ನೀಡಲು ಸಿದ್ಧವಾಗಿರುವುದು ಸತ್ಯ. ಆದರೆ 1998ರಿಂದ ಸಮಸ್ಯೆ ಇದೆ. ಇತ್ತೀಚೆಗೆ ಸಮಸ್ಯೆ ಉಲ್ಬಣವಾಗಿದೆ. ಪರಿಹರಿಸಲು ಶಾಶ್ವತ ಯೋಜನೆ ರೂಪಿಸಿದ್ದೇವೆ. ಇದಕ್ಕಾಗಿ ಕಾಲಾವಾಕಾಶ ಬೇಕು. ಅಲ್ಲದೆ ಮಂಡಳಿಯಲ್ಲಿ ನೌಕರರೇ ಇಲ್ಲ. ಎಂಜಿನಿಯರ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಸುಮಾರು 30 ಮಂದಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಪ್ರತಿವರ್ಷ ಕೆಲವರು ನೌಕರಿ ಬಿಟ್ಟು ಹೋದಾಗ ಅವರನ್ನು ತರಬೇತಿಗೊಳಿಸುವುದೇ ದೊಡ್ಡ ಸಮಸ್ಯೆ’ ಎಂದು ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.