ಗುಬ್ಬಿ: ಅನಾರೋಗ್ಯ ಕಾರಣ ನೀಡಿ ಗುಟ್ಕಾ ನಿಷೇಧ ಮಾಡಿರುವ ಬಗ್ಗೆ ಸುಪ್ರಿಂ ಕೋರ್ಟ್‌ನತ್ತ ಬೆರಳು ತೋರಿಸುವ ಸರ್ಕಾರ, ಮದ್ಯಪಾನ ಮತ್ತು ಧೂಮಪಾನಕ್ಕೂ ನಿಷೇಧ ಹೇರಬೇಕಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಅಭಿಪ್ರಾಯಪಟ್ಟರು.
ಗುಟ್ಕಾ ನಿಷೇಧ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ರಸ್ತೆ ತಡೆ ನಡೆಸಿದ ಜೆಡಿಎಸ್ ಹಾಗೂ ರೈತ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಡಿಕೆ ಬೆಳೆಗಾರರಿಗೆ ಆತಂಕ ಒಡ್ಡುವ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ನಿಷೇಧದ ತೀರ್ಮಾನ ಪ್ರಕಟಿಸುವ ಮೊದಲು ರೈತರೊಂದಿಗೆ ಚರ್ಚಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ತಿಂಗಳಲ್ಲೇ ರೈತರ ಹೊಟ್ಟೆ ಮೇಲೆ ಹೊಡೆದಿದೆ. ಆರೋಗ್ಯಕ್ಕೆ ಮಾರಕವಾಗಿರುವ ಸಿಗರೇಟ್, ಮದ್ಯಪಾನದಂಥ ಅಪಾಯಕಾರಿ ವ್ಯಸನಗಳ ಬಗ್ಗೆ ಯೋಚಿಸದ ಸರ್ಕಾರ ಕೇವಲ ಗುಟ್ಕಾ ನಿಷೇಧಿಸಿದರುವುದು ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.
ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ನೆರವಾಗಲು ನಾಫೆಡ್ ಮಾದರಿಯ ಕೇಂದ್ರಗಳನ್ನು ತೆರೆದು ಅಡಿಕೆಯನ್ನೂ ಖರೀದಿಸಬೇಕು ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗುರುರೇಣುಕಾರಾಧ್ಯ, ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಪ.ಪಂ. ಸದಸ್ಯರಾದ ಕೃಷ್ಣವೇಣಿ, ಸಿ.ಮೋಹನ್, ಕುಮಾರ್, ಸುರೇಶ್‌ಗೌಡ ಹಾಗೂ ಮುಖಂಡರಾದ ಮಂಜುನಾಥ್, ವೆಂಕಟೇಶ್, ಡಿ.ರಘು, ವಿರೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.