ADVERTISEMENT

ಗೆಳೆಯರ ಬಳಗದ ಪರಿಸರ ಕಾಳಜಿ

ಕೊರಟಗೆರೆಯಲ್ಲಿ 500ಕ್ಕೂ ಹೆಚ್ಚು ಸಸಿ ನೆಟ್ಟು ಪೋಷಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 9:54 IST
Last Updated 5 ಜೂನ್ 2018, 9:54 IST
ಕೊರಟಗೆರೆಯಲ್ಲಿ 500ಕ್ಕೂ ಹೆಚ್ಚು ಸಸಿ ನೆಟ್ಟು ಪೋಷಣೆ
ಕೊರಟಗೆರೆಯಲ್ಲಿ 500ಕ್ಕೂ ಹೆಚ್ಚು ಸಸಿ ನೆಟ್ಟು ಪೋಷಣೆ   

ಕೊರಟಗೆರೆ: ಪರಿಸರ ದಿನಾಚರಣೆಯಂದು ಮಾತ್ರ ಗಿಡ ನೆಡಲು ಕಾಳಜಿ ತೋರುವ ಜನ ಬಳಿಕ ಆ ಬಗ್ಗೆ ಗಮನವೂ ಹರಿಸಲ್ಲ. ಇಂತಹ ದಿನಗಳಲ್ಲಿ ಪಟ್ಟಣದ ‘ಫ್ರೆಂಡ್ಸ್ ಗ್ರೂಪ್’ ಸಸಿ ನೆಟ್ಟು, ಪೋಷಿಸಿ ಪರಿಸರ ಕಾಳಜಿ ತೋರುತ್ತಿದೆ. ಆ ಮೂಲಕ ಪಟ್ಟಣದಲ್ಲಿ ಹಸಿರುಕ್ರಾಂತಿಗೆ ಅಡಿಗಲ್ಲು ಹಾಕಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ ಚಾಲಕರಾಗಿರುವ ಪಟ್ಟಣದ ರವಿಕುಮಾರ್ ಇದಕ್ಕೆ ಕಾರಣರಾಗಿದ್ದಾರೆ. ಒಂದಷ್ಟು ಜನ ಸ್ನೇಹಿತರನ್ನು ಸೇರಿಸಿಕೊಂಡು ಫ್ರೆಂಡ್ಸ್ ಗ್ರೂಪ್ ಎಂಬ ಹೆಸರಿನಲ್ಲಿ 2013ರಲ್ಲಿ ಸ್ವಯಂ ಪ್ರೇರಿತವಾಗಿ ಸಸಿ ನೆಡುವ ಕೆಲಸ ಪ್ರಾರಂಭಿಸಿದರು.

ಆರಂಭದಲ್ಲಿ ಪಟ್ಟಣದ ಅಂಬೇಡ್ಕರ್ ಭವನದ ರಸ್ತೆಯಲ್ಲಿ ಕೇವಲ 20 ಸಸಿ ನೆಟ್ಟರು. ಬಳಿಕ ಪ್ರತಿ ವರ್ಷ ಮಳೆಗಾಲದಲ್ಲಿ ಹೆಚ್ಚೆಚ್ಚು ಸಸಿ ಬೆಳೆಸಬೇಕೆಂಬ ಪಣ ತೊಟ್ಟು ಅದರಂತೆ ಮುಖ್ಯರಸ್ತೆಯ ರಸ್ತೆ ವಿಭಜಕ, ಕೆಎಸ್ಆರ್‌ಸಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಹಲವೆಡೆ ಸಸಿಗಳನ್ನು ಹಾಕಿದ್ದಾರೆ.

ADVERTISEMENT

ಗ್ರೂಪ್‌ ವತಿಯಿಂದ ಕೇವಲ ಗಿಡ ಹಾಕುವುದೇ ಅಲ್ಲ. ನೆಟ್ಟ ಗಿಡಗಳಿಗೆ ಆಗಿಂದಾಗೆ ಟ್ರ್ಯಾಕ್ಟರ್ ಮೂಲಕ ನೀರು ಉಣಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ.

‘ಗ್ರೂಪ್ ವತಿಯಿಂದ ಈಗಾಗಲೇ ಪಟ್ಟಣದಲ್ಲಿ 500ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ನೆಟ್ಟ ಸಸಿಗಳು ಈಗ ದೊಡ್ಡದಾಗಿ ಬೆಳೆದು ನೆರಳು ನೀಡುತ್ತಿರುವುದು ಖುಷಿ ನೀಡುತ್ತಿದೆ. ಇದು ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿದೆ’ ಎನ್ನುತ್ತಾರೆ ರವಿಕುಮಾರ್‌.

ಶಾಲಾ ಕಾಲೇಜು ಆವರಣದಲ್ಲಿ ಜಾಗ ಇದ್ದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತದೆ. ಯಾರಾದರೂ ಸಸಿ ನೆಡಲು ಅವಕಾಶ ನೀಡಿದರೆ ಅಲ್ಲಿ ನೆಟ್ಟು ಪೋಷಿಸುವ ಕೆಲಸವನ್ನು ಈ ತಂಡ ಮಾಡುತ್ತಿದೆ.

ಪರಿಸರ ದಿನಾಚರಣೆ ಅಂಗವಾಗಿ ಈ ಬಾರಿ ಪಟ್ಟಣದ ಬಾಲಕಿಯರ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡು 50ಕ್ಕೂ ಹೆಚ್ಚು
ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಂಘ ಸಂಸ್ಥೆಗಳು ಅನಗತ್ಯ ಖರ್ಚು ಮಾಡುವ ಬದಲು ಪ್ರತಿ ವರ್ಷ ಸಸಿ ನೆಟ್ಟು ಅವುಗಳನ್ನು ಒಂದು ಹಂತದವರೆಗೆ ಬೆಳೆಸುವ ಸಂಕಲ್ಪ ಆದಲ್ಲಿ ನಮ್ಮ ಪರಿಸರ ಹಸಿರು ವನವಾಗುವಲ್ಲಿ ಸಂಶಯ ಇಲ್ಲ ಗ್ರೂಪ್‌ನ ಅಂಬೋಣ.

ಸಸಿ ನೆಡುವ ಸಂಕಲ್ಪ ಮಾಡಿ

ನಾವು ದುಡಿದ ಹಣದ ಒಂದಿಷ್ಟು ಹಣವನ್ನು ಮೀಸಲಿಟ್ಟು ಪ್ರತಿ ವರ್ಷ ಸಸಿ ನೆಟ್ಟು ಪೋಷಿಸುವ ಕೆಲಸ ರೂಢಿಸಿಕೊಂಡು ಬರುತ್ತಿದ್ದೇವೆ. ಮರಗಳು ಅನೇಕರಿಗೆ ಉತ್ತಮ ಗಾಳಿ, ನೆರಳಾಗುತ್ತವೆ. ಎಲ್ಲರೂ ಸಸಿ ನೆಡುವ ಸಂಕಲ್ಪ ಮಾಡಿ; ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರುವನ ಮಾಡಿಕೊಳ್ಳಬೇಕು. ಸಸಿ ನೆಡಲು ಯಾರೇ ಮುಂದೆ ಬಂದರೂ ನಮ್ಮ ಗ್ರೂಪ್ ಅವರೊಂದಿಗೆ ಕೈ ಜೊಡಿಸುತ್ತದೆ
ಕೆ.ಎನ್.ರವಿಕುಮಾರ್, ಅಧ್ಯಕ್ಷ, ಫ್ರೆಂಡ್ಸ್ ಗ್ರೂಪ್

– ಎ.ಆರ್.ಚಿದಂಬರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.