ADVERTISEMENT

ಚಡಪಡಿಸಿದರೆ ಪರೀಕ್ಷೆ ಕಷ್ಟ

ಕೋಚಿಂಗ್ ಇಲ್ಲದೇ 84ನೇ ರ‍್ಯಾಂಕ್‌ ಗಳಿಸಿದ ನಗರದ ಪ್ರಿಯಾಂಕ ನುಡಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 11:52 IST
Last Updated 2 ಜೂನ್ 2017, 11:52 IST
ಪ್ರಿಯಾಂಕ
ಪ್ರಿಯಾಂಕ   

ತುಮಕೂರು: ‘ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು, ಸಮಾಧಾನ ಚಿತ್ತರಾಗಿ ವರ್ಷಪೂರ್ತಿ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ ಲಭಿಸುತ್ತದೆ. ಅಯ್ಯೊ ವರ್ಷ ಪೂರ್ತಿ ಓದಬೇಕಲ್ಲ. ಅಷ್ಟೊಂದು ಸಿಲಬಸ್ ಇದೆಯಲ್ಲ ಎಂದು ಚಡಪಡಿಸಿದರೆ ಯುಪಿಎಸ್‌ಸಿ ಪರೀಕ್ಷೆ ಬರೆಯುವುದೂ ಕಷ್ಟ’.

ಇವು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 84ನೇ ರ‍್ಯಾಂಕ್‌ ಪಡೆದ ನಗರದ ಶಿರಾ ಗೇಟ್ ಬಡಾವಣೆಯ ಪ್ರಿಯಾಂಕ ಅವರ ನುಡಿಗಳು.

‘ನಾನು ಯಾವುದೇ ರೀತಿಯ ಕೋಚಿಂಗ್ ಹೋಗಿರಲಿಲ್ಲ. ಈ ಮೊದಲು ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. ಆದರೆ, ಈ ಬಾರಿ ಮೂರು ಅಂಕಿ (ತ್ರಿ ಡಿಜಿಟ್‌ನಲ್ಲಿ) ರ‍್ಯಾಂಕಿಂಗ್ ನಿರೀಕ್ಷೆ ಮಾಡಿದ್ದೆ. ಆದರೆ, ಎರಡು ಅಂಕಿಯ (84ನೇ ರ‍್ಯಾಂಕ್‌) ರ‍್ಯಾಂಕ್‌ ಬಂದಿತು. ತುಂಬಾ ಸಂತೋಷವಾಗಿದೆ. ನಮ್ಮ ತಂದೆ, ತಾಯಿ ಮತ್ತು ಸಹೋದರರ ಪ್ರೋತ್ಸಾಹ ಬಲದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಪ್ರಿಯಾಂಕ ನುಡಿದರು.

‘ಯುಪಿಎಸ್‌ಸಿ ಪರೀಕ್ಷೆಯನ್ನು ಪ್ರತಿ ವರ್ಷ 10 ಲಕ್ಷ ಮಂದಿ ದೇಶವ್ಯಾಪಿ ಬರೆಯುತ್ತಾರೆ. 2 ಲಕ್ಷ ಮಂದಿ ಗಂಭೀರವಾಗಿ ಅಧ್ಯಯನ ನಡೆಸಿರುತ್ತಾರೆ. ಹುದ್ದೆಗಳು 1,000ಕ್ಕಿಂತ ಕಡಿಮೆ ಇರುತ್ತವೆ. ಹೀಗಾಗಿ, ಸ್ಪರ್ಧೆ ಇದ್ದೇ ಇರುತ್ತದೆ. ಆದರೆ, ಎದೆಗುಂದದೇ ಸಿದ್ಧತೆ ಮಾಡಬೇಕು. ನಾನು ಎಂಜಿನಿಯರಿಂಗ್ ಪದವೀಧರೆಯಾಗಿದ್ದರೂ ಮಾನವಶಾಸ್ತ್ರ (ಅಂಥ್ರೊಪಾಲಜಿ) ವಿಷಯವನ್ನು ಪ್ರಧಾನ ವಿಷಯವಾಗಿ ಆಯ್ದುಕೊಂಡು ಅಧ್ಯಯನ ಮಾಡಿದೆ. ಯಾವುದೇ ವಿಷಯವಾದರೂ ಆಸಕ್ತಿ ಮುಖ್ಯ’ ಎಂದು ನುಡಿದರು.

ನಾನು ಆನ್‌ಲೈನ್‌ನಲ್ಲಿಯೇ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆಯುತ್ತಿದ್ದೆ. ಸ್ನೇಹಿತರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದುದು ಪರೀಕ್ಷೆಗೆ ಸಹಕಾರಿಯಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಿಯಾಂಕ, ನಗರದ ಕಾಳಿದಾಸ ಕಾಲೇಜಿನ ಭೌತವಿಜ್ಞಾನ ಪ್ರಾಧ್ಯಾಪಕ ಗೋವಿಂದರಾಜ್ ಅವರ ಪುತ್ರಿ. ನಗರದ ಬಿಷಪ್ ಸಾರ್ಜೆಂಟ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. 2006– 2008ರ ಅವಧಿಯಲ್ಲಿ ನಗರದ ಸರ್ವೋದಯ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಯಾಗಿದ್ದರು. ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದರು.

ಬೆಂಗಳೂರಿನ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಪೂರೈಸಿದ್ದರು. ಬಳಿಕ ಯು.ಟಿ.ಸಿ. ಏರೋಸ್ಪೇಸ್ ಎಂಬ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.

ಶಿರಾ ಗೇಟ್ ಬಡಾವಣೆ 3ನೇ ಸಾಧಕಿ!
ಶಿರಾ ಗೇಟ್ ಬಡಾವಣೆಯವರಾದ ಅಶ್ವಿನಿ ಅವರು 2015ರಲ್ಲಿ, ಡಾ.ಹರ್ಷ ಅವರು 2016ರಲ್ಲಿ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗಿದ್ದರು. 2017ರಲ್ಲಿ  ಪ್ರಿಯಾಂಕ ಅವರು ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗಿದ್ದು, ನಗರದ ಶಿರಾ ಗೇಟ್ ಬಡಾವಣೆಯೊಂದರಲ್ಲಿಯೇ ಮೂವರು ಯುಪಿಎಸ್‌ಸಿ ತೇರ್ಗಡೆಯಾಗಿರುವುದು ವಿಶೇಷ.

ಅಲ್ಲದೇ, ಈ ಮೂವರು ನಗರದ ಸರ್ವೋದಯ ಪದವಿ ಪೂರ್ವ ಕಾಲೇಜಿನ ಪ್ರತಿಭೆಗಳು. ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಒಟ್ಟು 12 ವಿದ್ಯಾರ್ಥಿಗಳು ಈವರೆಗೂ ಯುಪಿಎಸ್‌ಸಿ ತೇರ್ಗಡೆಯಾಗಿದ್ದಾರೆ. 2017ರಲ್ಲಿ 84ನೇ ರ‍್ಯಾಂಕ್‌ ಗಳಿಸಿರುವ ಪ್ರಿಯಾಂಕ ಅವರು ನಮ್ಮ ಕಾಲೇಜಿನಿ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಸರ್ವೋದಯ ಕಾಲೇಜಿನ ಕಾರ್ಯದರ್ಶಿ ಪ್ರೊ.ಜಿ.ಸೀತಾರಾಮ್ ಸಾಧಕಿಗೆ ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.