ADVERTISEMENT

ಚಿತ್ತಾಪಹರಣ ಮಾಡಿದ ‘ಸಖಿ’

​ಪ್ರಜಾವಾಣಿ ವಾರ್ತೆ
Published 13 ಮೇ 2018, 7:43 IST
Last Updated 13 ಮೇ 2018, 7:43 IST

ತುಮಕೂರು: ರಸ್ತೆ ಬದಿ ಸ್ವಾಗತಕ್ಕೆ ಅದ್ಧೂರಿ ಕಮಾನು, ನೆಲ ಹಾಸು, ಆವರಣ ಗೋಡೆ, ಕೊಠಡಿ ಒಳಗಿನ ಕುರ್ಚಿ– ಮೇಜುಗಳಿಗೆ ಹೊದಿಕೆ...

ಇದು ಯಾವುದೇ ಸಮಾರಂಭಕ್ಕಾಗಿ ಮಾಡಿದ ಸಿದ್ಧತೆ ಅಲ್ಲ; ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು, ಹೆಚ್ಚು ಮತದಾನ ಮಾಡಲು ಪ್ರೇರೇ ಪಿಸಲು ಸಿದ್ಧಪಡಿಸಿದ್ದ ಮತಗಟ್ಟೆ ಇದು.

ಇಲ್ಲಿ ಎಲ್ಲವೂ ಗುಲಾಬಿಮಯ. ಗೋಡೆ ಮತ್ತು ಶಾಮಿಯಾನ ತಡೆಗೋಡೆಯನ್ನು ಅಲಂಕರಿಸಿದ್ದ ಕಾಗದ, ಹೂವು, ಮತ ಯಂತ್ರದ ಮುಂಭಾಗದ ಹಾಕಿದ್ದ ಪರದೆಯೂ ಗುಲಾಬಿ ಬಣ್ಣದ್ದು. ಅಷ್ಟೇ ಏಕೆ ಒಳಗೆ ಕರ್ತವ್ಯನಿರತ ಸಿಬ್ಬಂದಿ ಉಟ್ಟಿದ್ದ ಸೀರೆ, ಬಿಂದಿ, ಬಳೆ, ರಿಬ್ಬನ್‌ ಸಹ ಗುಲಾಬಿ ಬಣ್ಣದ್ದೇ.

ADVERTISEMENT

ಮತದಾನದ ದಿನ ಎಲ್ಲರ ಗಮನ ಸೆಳೆದಿದ್ದು ಈ ’ಸಖಿ’. ನಗರದ ವಿವಿಧೆಡೆ ಐದು ಈ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲೆಡೆ ಸಂಭ್ರಮದಿಂದ ಮತದಾನ ನಡೆಯಿತು.

ಹಿಂದೆ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಎಲ್ಲರಂತೆ ಸರತಿಯಲ್ಲಿ ನಿಂತು ಮತದಾನ ಮಾಡಬೇಕಾಗಿತ್ತು. ಗಂಟೆಗಟ್ಟಲೆ ಕಾಯ್ದು ಮತದಾನ ಮಾಡಲು ಮುಜುಗರ ಆಗುತ್ತಿತ್ತು. ಆದರೆ ಈ ಬಾರಿ ಪಿಂಕ್‌ ಮತಗಟ್ಟೆ ಒಳ ಹೋಗಿ, ಅದರೊಳಗೆ ನಿಂತು ಮತ ಹಾಕಿದ್ದು ಖುಷಿ ಕೊಟ್ಟಿತು. ಮತದಾನ ಮಾಡುವುದು ಎಲ್ಲರ ಕರ್ತವ್ಯ. ಆದರೆ ಅದಕ್ಕೊಂದು ವಿಭಿನ್ನ ವಾತಾವರಣ ನಿರ್ಮಿಸಿದ್ದು ವಿಶೇಷವಾಗಿತ್ತು. ಅಲ್ಲಿ ಹೋಗಿ ಮತ ಹಾಕುವುದಕ್ಕೆ ಹೆಮ್ಮೆ ಅನಿಸಿತು ಎಂಬುದು ಬಹುತೇಕ ಮಹಿಳೆಯರ ಅನಿಸಿಕೆ.

ಮಹಿಳಾ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಅದರಲ್ಲೂ ಮುಖ್ಯವಾಗಿ ಮೊದಲ
ಬಾರಿ ಮತದಾನಕ್ಕೆ ಬಂದಿದ್ದ ಯುವತಿಯರು ಮತಗಟ್ಟೆ ಎದುರು, ಮತದಾನದ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೆಲವರು ಸಿಬ್ಬಂದಿ ಜೊತೆಗೂ ಫೋಟೊ ತೆಗೆಸಿಕೊಂಡು ನಂತರ ಮತ ಹಾಕಿದರು.

ವಾತಾವರಣ ಚೆನ್ನಾಗಿತ್ತು, ಆದರೆ...

ಪಿಂಕ್‌ ಬೂತ್‌ ವಾತಾವರಣ ಚೆನ್ನಾಗಿತ್ತು. ಆದರೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌ ಇತ್ಯಾದಿ ಯಾವುದೇ ದಾಖಲೆ ಇದ್ದರೂ ಸಾಕು ಎಂದು ಚುನಾವಣೆ ಆಯೋಗ ತಿಳಿಸಿದೆ. ಆದರೆ ಇಲ್ಲಿ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದೇ ಹೊರ ಕಳುಹಿಸಿದ್ದು ಸರಿಯಲ್ಲ. ಅಧಿಕಾರಿಗಳಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು. ಅನಗತ್ಯವಾಗಿ ಗೊಂದಲ ಮೂಡಿಸಿ ಮತದಾನದ ಹಕ್ಕು ತಪ್ಪಿಸಿದ್ದು ಖಂಡನೀಯ 
– ಮಂಜುಳಾ ನಿರಂಜನ್‌, ನಗರಸಭೆ ಸದಸ್ಯೆ

ಮತಗಟ್ಟೆ ಆಕರ್ಷಕವಾಗಿ ಸಜ್ಜುಗೊಳಿಸಿದರೆ ಸಾಕೇ? ಮತದಾರರ ಪಟ್ಟಿಯಲ್ಲಿ ಹೆಸರು ಬೇಡವೇ? ಯುವಜನರ ಹೆಸರನ್ನು ಕೈಬಿಟ್ಟು ಸತ್ತವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಮತದಾನದ ಹಕ್ಕು ಚಲಾಯಿಸಲು ಬಂದ ಯುವಕ ಯುವತಿಯರು ಎಷ್ಟೇ ಬೇಡಿಕೊಂಡು, ಸಲ್ಲಿಸಿದ ಅರ್ಜಿ ತೋರಿಸಿದರೂ ಅವಕಾಶ ನೀಡಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು. ಇದೇನಾ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ?
ಗುರುಪ್ರಸಾದ್‌, ವಿದ್ಯುತ್‌ ಗುತ್ತಿಗೆದಾರ

ಸಖಿ ಮತಗಟ್ಟೆ ವಿಶೇಷವಾಗಿದೆ. ಇದು ನಮಗೂ ಹೊಸದು. ಇಲ್ಲಿರುವ ಪೊಲೀಸರು, ಚುನಾವಣಾ ಕರ್ತವ್ಯ ಸಿಬ್ಬಂದಿ, ಅಧಿಕಾರಿಗಳು– ಎಲ್ಲರೂ ಮಹಿಳೆಯರು. ಯಾವುದೇ ಅಂಜಿಕೆ ಅಥವಾ ಸಂಕೋಚ ಇಲ್ಲದೆ ಮಹಿಳೆಯರು ಮತಗಟ್ಟೆಗೆ ಬಂದು ಮತ ಹಾಕಿದರು
– ರೇಖಾ ಮತ್ತು ಸರಿತಾ, ಮತಗಟ್ಟೆ ಅಧಿಕಾರಿಗಳು

ಮೊದಲ ಬಾರಿ ಮತ ಹಾಕಲು ನಿನ್ನೆಯಿಂದಲೇ ಸಿದ್ಧವಾಗಿದ್ದೆ. ಪದೇ ಪದೇ ಅಪ್ಪ ಅಮ್ಮ, ಅಕ್ಕಪಕ್ಕದ ಮನೆಯವರನ್ನು ಕೇಳಿ ತಿಳಿದುಕೊಂಡಿದ್ದೆ. ಅದಕ್ಕಾಗಿ ಮನೆಯವರನ್ನೆಲ್ಲ ಬೇಗ ಹೊರಡಿಸಿ ಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದೆ. ಇಲ್ಲಿ ಬಂದಾಗ ಪಿಂಕ್‌ ಮತಗಟ್ಟೆ ನೋಡಿ ಸಮಾರಂಭಕ್ಕೆ ಬಂದಂತಾಯಿತು. ಬೆರಳಿಗೆ ಹಾಕಿ ಶಾಯಿ ಎಲ್ಲರಿಗೂ ತೋರಿಸಿ ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಹಂಚಿಕೊಂಡೆವು
ಐಶ್ವರ್ಯಾ, ಸಿದ್ಧಗಂಗಾ ಬಡಾವಣೆ

ನಮ್ಮ ಹಿತ ಕಾಪಾಡುವ ನಾಯಕನ ಆಯ್ಕೆ ಮಾಡುವ ಕರ್ತವ್ಯ ನಮ್ಮದು. ನಾಳೆ ಎಂಜಿನಿಯರಿಂಗ್‌ ಅಂತಿಮ ವರ್ಷದ ಪರೀಕ್ಷೆ ಇದ್ದರೂ ಮೊದಲ ಬಾರಿ ಮತ ಹಾಕಿ ಬಂದಿದ್ದೇನೆ. ನನ್ನ ಹಕ್ಕು ನಾನು ಚಲಾಯಿಸಿದ್ದೇನೆ. ವಿವಿ ಪ್ಯಾಟ್‌ ಮೂಲಕ ಹಾಕಿದ ಮತವನ್ನೂ ಖಾತ್ರಿ ಪಡಿಸಿಕೊಂಡು ಬಂದೆ
– ವರ್ಧಿನಿ, ಸಿದ್ದಗಂಗಾ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.