ADVERTISEMENT

ಜಿ.ಪಂನಲ್ಲಿ ಹಗರಣಗಳ ಸರಮಾಲೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 10:45 IST
Last Updated 30 ಅಕ್ಟೋಬರ್ 2011, 10:45 IST

ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡದ ವೈದ್ಯರಿಗೆ ಗ್ರಾಮೀಣ ಭತ್ಯೆ ನೀಡಿದ ಆರೋಗ್ಯ ಇಲಾಖೆಯ ಕ್ರಮ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಡಾ.ಬಿ.ಎನ್.ರವಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಉಮೇಶ್, ರಾಷ್ಟ್ರೀಣ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆ ಕುರಿತು ಚರ್ಚೆ ಪ್ರಾರಂಭಿಸಿದರು.

ರಾಮಗೊಂಡನಹಳ್ಳಿಯಲ್ಲಿ ವೈದ್ಯರ ವಸತಿ ಗೃಹವಿಲ್ಲ. ಚಿಕ್ಕತೊಟ್ಲುಕೆರೆಯಲ್ಲಿ ವೈದ್ಯರ ವಾಸಕ್ಕೆ ಸೂಕ್ತವಾದ ಬಾಡಿಗೆ ಮನೆ ದೊರೆಯುತ್ತಿಲ್ಲ ಎಂದು ಗ್ರಾಮ ಪಂಚಾಯಿತಿಯಿಂದ ಪ್ರಮಾಣ ಪತ್ರ ಪಡೆದ ವೈದ್ಯ ಡಾ.ಅಮೀನಾ ಅಸ್ಮಾ ಅವರಿಗೆ ಗ್ರಾಮೀಣ ವಸತಿ ಭತ್ಯೆ, ತುರ್ತು ಸೇವೆ ಭತ್ಯೆ ನೀಡಿರುವುದಕ್ಕೆ ಸಭೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾಗವಲ್ಲಿ ಆರೋಗ್ಯ ಕೇಂದ್ರದಲ್ಲೂ ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಿಲ್ಲ. ಆದರೂ ಗ್ರಾಮೀಣ ವಸತಿ ಭತ್ಯೆ ಪಡೆಯುತ್ತಿದ್ದಾರೆ. ಈ ಅವ್ಯವಹಾರದಲ್ಲಿ ಬೆಂಗಳೂರಿನ ಹಿರಿಯ ಅಧಿಕಾರಿಗಳಿಂದ ಹಿಡಿದ ಜಿಲ್ಲಾ ಕೇಂದ್ರದಲ್ಲಿರುವ ಆರೋಗ್ಯ ಇಲಾಖೆ ಅಧಿಕಾರಿಗಳವರೆಗೆ ಎಲ್ಲರೂ ಭಾಗಿಯಾಗಿದ್ದಾರೆ ಎಂದು ಉಮೇಶ್ ಸಭೆಯ ಗಮನ ಸೆಳೆದರು. ಈ ಕುರಿತು ಸಮಗ್ರ ತನಿಖೆ ನಡೆಸಿ, 15 ದಿನದಲ್ಲಿ ವರದಿ ಸಲ್ಲಿಸುವಂತೆ ಅಧ್ಯಕ್ಷ ಬಿ.ಎನ್.ರವಿ ಆದೇಶಿಸಿದರು.

ವೇತನ ಅವ್ಯವಹಾರ:  ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿಯಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಕರುಣಾ ಟ್ರಸ್ಟ್ ತನ್ನ ಸಿಬ್ಬಂದಿಗೆ ನ್ಯಾಯಯುತ ವೇತನ ಪಾವತಿಸುತ್ತಿಲ್ಲ. ವೇತನಕ್ಕಾಗಿ ಸರ್ಕಾರದಿಂದ ಪಡೆಯುವ ಅನುದಾನಕ್ಕೂ- ಸಿಬ್ಬಂದಿಗೆ ವೇತನ ನೀಡುವ ಮೊತ್ತಕ್ಕೂ ಭಾರೀ ಅಂತರವಿದೆ. ಕಳೆದ ನಾಲ್ಕು ತಿಂಗಳಿನಿಂದ ಅಲ್ಲಿನ ಸಿಬ್ಬಂದಿ ವೇತನವಿಲ್ಲದೆ ಕಂಗಾಲಾಗಿದ್ದಾರೆ. ಸ್ವತಃ ವೈದ್ಯರಾಗಿರುವ ಅಧ್ಯಕ್ಷರು ಈ ಕುರಿತು ಗಮನ ಹರಿಸಬೇಕು ಎಂದು ಉಮೇಶ್ ಆಗ್ರಹಿಸಿದರು.

ಕರುಣಾ ಟ್ರಸ್ಟ್‌ನ ಮುಂದಿನ ಅನುದಾನ ತಡೆಹಿಡಿಯುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಯೋಗಿ ದ.ಕಳಸದ ಆದೇಶಿಸಿದರು.

ತನಿಖೆ: ಕೋರ ಗ್ರಾ.ಪಂ. ಕಾರ್ಯದರ್ಶಿ ಬಿ.ಎಸ್.ಘಾಡ್ಕೆ ಈ ಹಿಂದೆ ಕೆಲಸ ಮಾಡುತ್ತಿದ್ದ ಕುಣಿಗಲ್ ತಾಲ್ಲೂಕು ಬಾಗೇನಹಳ್ಳಿ ಗ್ರಾ.ಪಂ.ನಲ್ಲಿ ರೂ. 14 ಲಕ್ಷ ಅಕ್ರಮ ನಡೆಸಿದ್ದಾರೆ. ಕಳೆದ ಎರಡು- ಮೂರು ಸಭೆಗಳಲ್ಲಿ ಈ ಕುರಿತು ಚರ್ಚೆಯಾದರೂ ಏನೂ ಪ್ರಯೋಜನವಾಗಿಲ್ಲ ಎಂದು ಸದಸ್ಯ ಹುಚ್ಚಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬೇಕಾದ ದಾಖಲೆಗಳೇ ನಾಪತ್ತೆಯಾಗಿವೆ. ಹಿಂದೆ ಕೆಲಸ ಮಾಡಿದ ಎಲ್ಲ ಗ್ರಾ.ಪಂ.ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ಲಪಟಾಯಿಸಿದ ನೌಕರನ ವಿರುದ್ಧ ತೆಗೆದುಕೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.

ಕಾರ್ಯದರ್ಶಿ ವಿರುದ್ಧ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಹಣ ದುರುಪಯೋಗ ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಹಗರಣಗಳು: ಹಿಂದಿನ ಸಭೆಯಲ್ಲಿ ಚರ್ಚೆಯಾದ ಬಯೋಮೆಟ್ರಿಕ್ ಯಂತ್ರ ಖರೀದಿ, ಸಂಪೂರ್ಣ ಸ್ವಚ್ಛತಾ ಆಂದೋಲನ ಕುರಿತು ಸದಸ್ಯರಾದ ಶಕುಂತಲಾ ರಾಜಣ್ಣ, ಸುಧಾಕರ್‌ಲಾಲ್, ಎಸ್.ಸಿ.ಬಡ್ಡೀರಣ್ಣ, ಎನ್.ಸಿ.ಕಲಾ ಮತ್ತಿತರರು ಸುದೀರ್ಘವಾಗಿ ಚರ್ಚಿಸಿದರು. ಚರ್ಚೆಯಲ್ಲಿ ಪಾಲ್ಗೊಳ್ಳದ ಸದಸ್ಯರು ಒಂದು ಹಂತದಲ್ಲಿ ಸಹನೆ ಕಳೆದುಕೊಂಡು, `ಬರೀ ಇವ್ರ ಹೇಳಿದ್ದನ್ನೇ ಕೇಳಿಕೊಂಡು, ನಮ್ಗೆಲ್ಲಾ ಇಷ್ಟೇ ಮಾತಾಡಿ, ಊಟ ಹಾಕಿ ಕಳಿಸ್ತೀರೋ, ನಮ್ಗೂ ಮಾತಾಡೋಕೆ ಅವಕಾಶ ಕೊಡ್ತೀರೋ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರ: ಜಿಲ್ಲೆ ಎದುರಿಸುತ್ತಿರುವ ಬರ ಪರಿಸ್ಥಿತಿ ಕುರಿತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಚ.ಕಳಸದ ಚರ್ಚೆ ಪ್ರಾರಂಭಿಸಿದರು.

ಬರಗಾಲದ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವಿವರವಾದ ಪತ್ರ ಬರೆಯಲಾಗಿದೆ. ಕುಡಿಯುವ ನೀರಿಗಾಗಿ ತಾಲ್ಲೂಕು ಮಟ್ಟದಲ್ಲಿ ರೂ. 20 ಲಕ್ಷ ಮೊತ್ತದ ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸಿ, ತಹಶೀಲ್ದಾರ್ ಮೂಲಕ ಹಣ ಬಿಡುಗಡೆ ಮಾಡಲಾಗುವುದು. ಜಿ.ಪಂ. ಕ್ಷೇತ್ರಗಳಲ್ಲಿ ಕುಡಿಯುವ ನೀರು ವ್ಯವಸ್ಥೆಯ ಸುಧಾರಣೆಗೆ ರೂ. 40 ಲಕ್ಷ ಮೀಸಲಿಡಲಾಗಿದೆ. ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾ.ಪಂ.ಗಳಿಗೆ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದರು.

ಸೂರಿಲ್ಲದ ಶಾಲೆ: ಮಧುಗಿರಿ ತಾಲ್ಲೂಕಿನ ಬ್ಯಾಲ್ಯಾ, ಕೋಡುಗದಾಲ, ಕಾಳೇಹಳ್ಳಿ ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಗೊಂಡಿರುವ ಕುರಿತು ಪುರವರ ಕ್ಷೇತ್ರದ ಸದಸ್ಯೆ ಸಿ.ಆರ್.ಮಂಜುಳ ಅವರು ಸಭೆಯ ಗಮನ ಸೆಳೆದರು. ಕಾಳೇಹಳ್ಳಿಯಲ್ಲಿ ಶಾಲೆ ಸೂರು ಕುಸಿದಿದೆ. ಮರದ ಕೆಳಗೆ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ ಎಂದು ದೂರಿದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಈ ಶಾಲೆಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದರು.

ಜಿ.ಪಂ. ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಉಪ ಕಾರ್ಯದರ್ಶಿಗಳಾದ ಯಾಲಕ್ಕಿಗೌಡ, ಪ್ರಕಾಶ್, ಯೋಜನಾಧಿಕಾರಿ ಆಂಜನಪ್ಪ, ಸಿಪಿಓ ರಾಜಮ್ಮ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.