ADVERTISEMENT

ಜೀವನಾನುಭವ ಹೇಳುವ ಕಾದಂಬರಿಗಳು

ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಎಂ.ಕೆ.ಇಂದಿರಾ ಶತಮಾನದ ನೆನಪು ಕಾರ್ಯಕ್ರಮದಲ್ಲಿ ವಿಜಯಶಂಕರ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 11:45 IST
Last Updated 12 ಅಕ್ಟೋಬರ್ 2017, 11:45 IST

ತುಮಕೂರು: ಎಂ.ಕೆ.ಇಂದಿರಾ ಅವರು ಕಾದಂಬರಿಗಳಲ್ಲಿ ತಮ್ಮ ವೈಚಾರಿಕತೆಯನ್ನು ಹೇರುವ ಬದಲು ಜೀವನಾನುಭವವನ್ನು ತುಂಬುತ್ತಿದ್ದರು ಎಂದು ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌ ಹೇಳಿದರು.

ನಗರದಲ್ಲಿ ಮಹಿಳಾ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಕಾದಂಬರಿಗಾರ್ತಿ ಎಂ.ಕೆ.ಇಂದಿರಾ– ಶತಮಾನದ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಅಕ್ಷರದ ಮೇಲೆ ಪ್ರೀತಿ ಹುಟ್ಟಿಸುವ ಕೆಲಸವನ್ನು ಅನೇಕ ಲೇಖಕಿಯರು ಮಾಡಿದ್ದಾರೆ. ಅದರಲ್ಲಿ ಎಂ.ಕೆ.ಇಂದಿರಾ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅವರ ಸಾಹಿತ್ಯಗಳಲ್ಲಿ ಉದಾರ ಮಾನವತಾವಾದವು ಬಿಂಬಿತವಾಗಿದೆ ಎಂದರು.

ADVERTISEMENT

ಕಾಣುವುದರಿಂದ ಕಾಣದೇ ಇರುವುದನ್ನು ಮತ್ತು ಕಾಣದೇ ಇರುವುದರಿಂದ ಕಾಣುವುದನ್ನು ಹುಡುಕುವುದೇ ಸಾಹಿತ್ಯದ ಕೆಲಸವಾಗಿದೆ. ಇಂದಿರಾ ಅವರ ಕೃತಿಗಳಲ್ಲಿ ಇದು ಬಹಳ ಸ್ಪಷ್ಟವಾಗಿ ಘೋಚರಿಸುತ್ತದೆ. ಅವರು ಸಂಸಾರದ ಕತೆಗಳಿಂದ ಕಾಣದೇ ಇರುವ ಜೀವನ ಮೌಲ್ಯಗಳನ್ನು ತಮ್ಮ ಕಾದಂಬರಿಗಳಲ್ಲಿ ಹುಡುಕಿ ತೋರಿಸಿದ್ದಾರೆ ಎಂದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗೀತಾ ವಸಂತ್‌ ಮಾತನಾಡಿ, ‘ಕ್ರಾಂತಿ ಎನ್ನುವುದು ದಿಡೀರ್‌ ಆಗುವ ಕ್ರಿಯೆ ಅಲ್ಲ. ಅದು ನಿಧಾನಗತಿಯ ಪ್ರಕ್ರಿಯೆ ಆಗಿದೆ. ಇಂದಿರಾ ಅವರ ಕಾದಂಬರಿಗಳು ಕೂಡ ನಿಧಾನಗತಿಯ ಕ್ರಾಂತಿಯನ್ನು ಹುಟ್ಟುಹಾಕುತ್ತವೆ’ ಎಂದರು.

ಅವರು ತಮ್ಮ ಕಾದಂಬರಿಗಳಲ್ಲಿ ಸರಿ, ತಪ್ಪುಗಳ ಬಗ್ಗೆ ವಿಶ್ಲೇಷಣೆ ಮಾಡದೇ, ಅನುಭವಗಳನ್ನು ಮಾತ್ರ ಹೇಳಿದ್ದಾರೆ. ಯಾವುದೇ ರಾಜಕೀಯ ಸಿದ್ಧಾಂತಗಳನ್ನು ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿಲ್ಲ. ಸ್ತ್ರೀಯ ಮೇಲೆ ಆಗುತ್ತಿರುವ ಶೋಷಣೆಗಳನ್ನು ಪ್ರತಿಭಟಿಸದೇ, ಕುಟುಂಬದ ಒಳಗೇ ನಿಂತು ಯಾವ ರೀತಿಯಾಗಿ ಅದನ್ನು ಪರಿಹರಿಸಿಕೊಳ್ಳುತ್ತಾಳೆ ಎನ್ನುವುದನ್ನು ಅವರು ಕಾದಂಬರಿಗಳಲ್ಲಿ ಹೇಳಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾದಂಬರಿಗಾರ್ತಿ ಸಾಯಿಸುತೆ ಅವರನ್ನು ಸನ್ಮಾನಿಸಲಾಯಿತು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಪಿ.ಚಂದ್ರಿಕಾ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಅಣ್ಣಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.