ADVERTISEMENT

ಜ್ಞಾನದ ಬೆಳಕು ಬೆಳಗಿದ ಆಶ್ರಮ

ಸಾಧು–ಭಕ್ತ ಸಮಾಗಮದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 4:44 IST
Last Updated 5 ಮಾರ್ಚ್ 2018, 4:44 IST

ತುಮಕೂರು: ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮವು ನಾಡಿನಲ್ಲಿ ಜ್ಞಾನದ ಬೆಳಕು ಕಲ್ಪಿಸುವ ಶ್ರೇಷ್ಠ ಕಾರ್ಯವನ್ನು ಮಾಡಿಕೊಂಡು ಬಂದಿದೆ ಎಂದು ಆದಿ ಚುಂಚನಗಿರಿಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ರಜತಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾಧು–ಭಕ್ತ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಸಂದೇಶಗಳನ್ನು ವಿಶ್ವಕ್ಕೆ ಸಾರುವ ದಿಸೆಯಲ್ಲಿ ಮಠದ ಕಾರ್ಯ ಗಮನಾರ್ಹವಾದುದು. ಇಂತಹ ಆಶ್ರಮಗಳು ಹೆಚ್ಚಾಗಲಿ ಎಂದು ಹೇಳಿದರು.

ADVERTISEMENT

ಉದ್ಘಾಟನೆ ಮಾಡಿದ ಚೆನ್ನೈ ಮೈಲಾಪುರದ ರಾಮಕೃಷ್ಣ ಮಠದ ಸ್ವಾಮಿ ಗೌತಮಾನಂದಜೀ ಮಹಾರಾಜ್, ‘ರಾಮಕೃಷ್ಣ ಪರಮಹಂಸರು, ತುಳಸಿದಾಸರು, ಸಂತರು, ಶರಣರು ತೋರಿದ ಮಾರ್ಗದಲ್ಲಿ ನಡೆಯಬೇಕು. ಸನಾತನ ಧರ್ಮ ಅನುಸರಿಸಿ ನೆಮ್ಮದಿಯ ಜೀವನ ನಡೆಸಬೇಕು ಎಂದು ನುಡಿದರು.

ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,‘ ಈ ದೇಶದ ದೊಡ್ಡ ಶಕ್ತಿಯೇ ಆಧ್ಯಾತ್ಮ. ಅದು ಪಸರಿಸಬೇಕಾದರೆ ಸಾಧು ಭಕ್ತ ಸಮಾಗಮ ಅವಶ್ಯವಾದುದು ಎಂದು ನುಡಿದರು.

ಭಕ್ತರಲ್ಲಿನ ದೋಷ ನಿವಾರಣೆ ಮಾಡಿ ಅವರಲ್ಲಿ ಹೃದಯ ಶ್ರೀಮಂತಿಕೆ ಬೆಳೆಸುವಲ್ಲಿ ಸಾಧು, ಸಂತರ ಬಹುದೊಡ್ಡ ಜವಾಬ್ದಾರಿಯಾಗಿದೆ. ಆದರೆ, ಈಚೆಗೆ ಕೊಲೆ, ಸುಲಿಗೆ, ವಂಚನೆ, ಅನೈತಿಕತೆ ವಿಚಾರಗಳನ್ನು ಕೇಳಿದಾಗ ಸಾಧು ಸಂತರು ಮಾಡುವ ಕಾರ್ಯದಲ್ಲಿ ಲೋಪವಾಗಿದೆಯೊ ಅಥವಾ ಭಕ್ತರ ತಪ್ಪಿದೆಯೊ ಎಂಬ ಅನುಮಾನಗಳು ಕಾಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

ಭಕ್ತರಲ್ಲಿ ಹಣದ ಶ್ರೀಮಂತಿಕೆ ಸಾಕಷ್ಟಿದೆ. ಆದರೆ, ಹೃದಯ ಶ್ರೀಮಂತಿಕೆ ಬೆಳೆಸುವ ಕಾರ್ಯ ಇನ್ನಷ್ಟು ನಡೆಯಬೇಕು ಎಂದು ಅಶಯ ವ್ಯಕ್ತಪಡಿಸಿದರು.

ದಾವಣಗೆರೆ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ನಿತ್ಯ ಸ್ಥಾನಂದಜೀ ಮಹಾರಾಜ್, ಗದಗ–ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸ್ವಾಮೀಜಿ ಮಂಗಳೂರಿನ ರಾಮಕೃಷ್ಣ ಮಿಷನ್‌ನ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.