ADVERTISEMENT

ಡಿ.ವಿ.ಹಳ್ಳಿ ಗ್ರಾಮಸ್ಥರ `ಹೊರಬೀಡು'

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 9:29 IST
Last Updated 1 ಜುಲೈ 2013, 9:29 IST

ಮಧುಗಿರಿ: ಊರಿನ ಒಳಿತಿಗಾಗಿ ಪೂರ್ವಿಕರು ಆಚರಿಸಿಕೊಂಡು ಬಂದಿದ್ದ `ಹೊರಬೀಡು' ವಿಶಿಷ್ಟ ಆಚರಣೆಯನ್ನು ಭಾನುವಾರ ಪಟ್ಟಣಕ್ಕೆ ಸನಿಹದ ದೊಡ್ಡವೀರಗೊಂಡನಹಳ್ಳಿ ಗ್ರಾಮಸ್ಥರು ಆಚರಿಸಿದರು.

ಪಟ್ಟಣದಿಂದ ಮಧುಗಿರಿ-ಶಿರಾ ಮುಖ್ಯರಸ್ತೆಯಲ್ಲಿ ಐದು ಕಿಲೋ ಮೀಟರ್ ದೂರವಿರುವ ದೊಡ್ಡವೀರಗೊಂಡನಹಳ್ಳಿ, ರಂಗನಾಯಕನರೊಪ್ಪದ ಮುನ್ನೂರು ಮನೆಗಳ ಎರಡು ಸಾವಿರ ಜನರು ಈ ವಿಶಿಷ್ಟ ಸಂಪ್ರದಾಯ ಪಾಲಿಸಿದರು.

ಐದು ವರ್ಷಕ್ಕೊಮ್ಮೆ ನಡೆಯುವ ಹೊರಬೀಡು ಆಚರಣೆಗಾಗಿ ಭಾನುವಾರ ಮುಂಜಾನೆ ಐದು ಗಂಟೆಗೆ ದನ-ಕರು, ಕುರಿಗಳೊಂದಿಗೆ ಇಡೀ ಕುಟುಂಬ ಮನೆಗೆ ಬೀಗ ಹಾಕಿ ಊರಾಚೆಯ ಜಮೀನುಗಳಲ್ಲಿ ಬೀಡು ಬಿಟ್ಟಿತು. ಮರಗಳ ಆಶ್ರಯದ ಮೊರೆ ಹೊಕ್ಕ ಗ್ರಾಮಸ್ಥರು ಸೂರ್ಯಾಸ್ತದ ತನಕ ಗ್ರಾಮದತ್ತ ಬರಲಿಲ್ಲ. ಈ ಆಚರಣೆಗೆ ನೆಂಟರು-ಮಿತ್ರರು ಭಾಗವಹಿಸಿದ್ದು ವಿಶೇಷ.

ಡಿ.ವಿ.ಹಳ್ಳಿ ಗ್ರಾಮದ ಶೌಕತ್, ಇಸ್‌ಮತ್ ಎಂಬುವರ ಕುಟುಂಬ ರಸ್ತೆ ಬದಿಯ ಜಮೀನಿನಲ್ಲಿ ತನ್ನ ಸ್ವಂತ ಆಟೊದೊಂದಿಗೆ ಬಿಡಾರ ಹೂಡಿತ್ತು. ಜಾತಿ-ಭೇದವಿಲ್ಲದೆ ಹಿರಿಯರ ಹಾದಿಯಂತೆ ನಾವೂ ಕೂಡ ಈ ಸಂಪ್ರದಾಯ ಅನುಸರಿಸಿಕೊಂಡು ಬರುತ್ತಿದ್ದು, ಹೊರಬೀಡು ಆಚರಣೆಯಿಂದ ಸಂತೋಷ, ಬೇಜಾರು ಕಳೆಯುತ್ತೆ. ಹೊಸತನದ ಅನುಭವ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಡೇರಿ ಕಾರ್ಯದರ್ಶಿ ಚೆಡ್ಡಿ ತಿಮ್ಮಣ್ಣ ತನ್ನ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾಗ; ಐದು ವರ್ಷಕ್ಕೊಮ್ಮೆ ಹೊರಬೀಡು ಬರುತ್ತೇವೆ. ನನಗೆ 58 ವರ್ಷಗಳಾಗಿದ್ದು, ನನಗೆ ತಿಳಿದಿರುವಂತೆ 10 ಬಾರಿ ಹೊರಬೀಡಿಗೆ ಬಂದ ಅನುಭವವಿದೆ ಎಂದು ವಿವರಿಸಿದರು. ಇದರಿಂದ ಒಗ್ಗಟ್ಟು, ಐಕ್ಯತಾ ಮನೋಭಾವ ಬೆಳೆದು ಗ್ರಾಮಕ್ಕೆ ಒಳ್ಳೆಯದಾಗುತ್ತಿದೆ. ಆದ್ದರಿಂದ ನಂಬಿಕೆಯಿಂದ ಮುಂದುವರೆಸುತ್ತಿದ್ದೇವೆ ಎಂದರು.

ರಂಗನಾಯಕನರೊಪ್ಪದ ಹನುಮಂತರಾಯಪ್ಪ (80) ಗ್ರಾಮಕ್ಕೆ ತಗುಲಿರುವ ದೋಷ ಪರಿಹಾರವಾಗಲಿ ಎಂಬ ಮೂಢನಂಬಿಕೆಯಿಂದ ಹೊರಬೀಡು ಆಚರಣೆಯಲ್ಲಿದೆ ಎಂದು ತಿಳಿಸಿದರೆ, ಡಿ.ವಿ.ಹಳ್ಳಿಯ ಮಂಜುನಾಥ, ವೆಂಕಟೇಶಮೂರ್ತಿ ವಿವರಿಸಿದ್ದು ಹೀಗೆ... ಗಂಟು-ಮೂಟೆಯೊಂದಿಗೆ ಸೂರ್ಯ ಹುಟ್ಟುವ ಮುನ್ನ ಊರಾಚೆ ಬಂದರೆ ಸೂರ್ಯ ಮುಳುಗಿದ ನಂತರವೇ ಗ್ರಾಮ ಸೇರುತ್ತೇವೆ. ಗ್ರಾಮ ಪ್ರವೇಶ ಮಾಡುವಾಗ ಗ್ರಾಮದ ಬಳಿಯಿರುವ ಶನಿದೇವರ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಮಾಡಿ ಬಲಿ ಅನ್ನ ಹಾಕಿ, ಪೊರಕೆ, ಮರ, ಚಾಪೆ ಇತ್ಯಾದಿಗಳನ್ನು ಬಿಸಾಡಿ ದೋಷ ಮುಕ್ತರಾಗಿ ಪ್ರವೇಶ ಮಾಡುತ್ತೇವೆ ಎಂದು ತಿಳಿಸಿದರು.

ಜಾತ್ರೆ ರೀತಿಯಲ್ಲಿ ಹೊರಬೀಡು ಆಚರಣೆ ಹಲ ದಶಕಗಳಿಂದ ನಡೆಯುತ್ತಿದೆ. ಮಹಿಳೆಯರು ರುಚಿಯಾದ ಬಾಡೂಟ ತಯಾರಿಕೆಯಲ್ಲಿ ತೊಡಗಿದ್ದರೆ, ಯುವಕರು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಕಾಲ ಕಳೆದರು. ಹಿರಿಯರು ಹೊಂಗೆ, ಹುಣಸೆ ಮರಗಳ ಬಳಿ ಕಾಲ ಕಳೆಯಲು ಇಸ್ಪೀಟು ಮೊರೆ ಹೋದರು. ಯುವತಿಯರು ಮಾತ್ರ ದೂರದ ಬೋರ್‌ವೆಲ್‌ಗಳಿಂದ ನೀರು ತರುತ್ತಿದ್ದುದು ಕಂಡು ಬಂತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.