ಕುಣಿಗಲ್:ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಪುರಸಭೆ ಬಸ್ ನಿಲ್ದಾಣದ ಜತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಮದ್ದೂರು ರಸ್ತೆ, ಪಿಎಲ್‌ಡಿ ಬ್ಯಾಂಕ್ ಎದುರು, ಕೆನರಾಬ್ಯಾಂಕ್ ಎದುರು, ಹಕೀಂಷಾವಲಿ ಕಾಂಪ್ಲೆಕ್ಸ್ ಬಳಿ ಮತ್ತು ಕುದುರೆಫಾರಂ ಮುಂಭಾಗ ತಾತ್ಕಾಲಿಕ ಬಸ್‌ನಿಲ್ದಾಣ ಸೃಷ್ಟಿಗೊಂಡಿವೆ. ಸಾರಿಗೆ ಸಂಸ್ಥೆ ನಿಲ್ದಾಣ ಹೊರತುಪಡಿಸಿದರೆ ಉಳಿದ ಎಲ್ಲೆಡೆ ಕನಿಷ್ಠ ಮೂಲ ಸೌಕರ್ಯವು ಇಲ್ಲ.
ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಎಲ್ಲ ಸೌಕರ್ಯವಿದ್ದು, ಆರಂಭದಲ್ಲಿ ಎಲ್ಲ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದವು. ಆದರೆ ಬೈಪಾಸ್ ನಿರ್ಮಾಣದ ಕುಣಿಗಲ್, ತುರುವೇಕೆರೆ ವಿಭಾಗದ ಬಸ್‌ಗಳು ಮಾತ್ರವೇ ಬರುತ್ತಿವೆ. ಕೆಲವೊಮ್ಮೆ ಬರುವ ಬಸ್‌ಗಳು ಸಿಬ್ಬಂದಿ ನಿರ್ಲಕ್ಷ್ಯದಿಂದ ಹಾಗೆ ಹೋಗುತ್ತವೆ. ಎಲ್ಲವೂ ಇದ್ದು ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣಗೊಂಡಿದೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಇದರಿಂದ ನಿತ್ಯವೂ ಪ್ರಯಾಣಿಕರ ಪರದಾಟ ದೇವರಿಗೆ ಮೆಚ್ಚುಗೆ. ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇರುವ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಎರಡು ತಂಗುದಾಣ ಶಿಥಿಲವಾಗಿದ್ದು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ.
ಎಂಟು ವರ್ಷಗಳ ಹಿಂದೆ ಒತ್ತುವರಿ ತೆರವಿನ ನೆಪದಲ್ಲಿ ಬಸ್ ನಿಲ್ದಾಣದಲ್ಲಿದ್ದ ಅಂಗಡಿ ಮಳಿಗೆಗಳನ್ನು ಕೆಡವಿ ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸುವ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕನಿಷ್ಠ ಸೌಲಭ್ಯವೂ ಸಿಗದಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಬಳಸದೆ, ಆ ಹೊತ್ತಿನ ಅನುಕೂಲಕ್ಕಾಗಿ ಸೃಷ್ಟಿಗೊಂಡಿರುವ ನಿಲ್ದಾಣವನ್ನು ಸಾಕಷ್ಟು ಮಂದಿ ಬಳಸುತ್ತಿರುವುದು ಸಮಸ್ಯೆಯ ಮೂಲ. ಈ ಪ್ರದೇಶಗಳಲ್ಲಿ ಸಂಚಾರಿ ವ್ಯವಸ್ಥೆ ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಿನ ಕೆಲಸವಾಗಿದೆ.
ಪುರಸಭೆಯಲ್ಲಿ ಐಡಿಎಸ್‌ಎಂಟಿ ಯೋಜನೆ ಮತ್ತು ಎಸ್‌ಎಫ್‌ವೈ ಯೋಜನೆಯಡಿ ಸಾಕಷ್ಟು ಅನುದಾನವಿದ್ದರೂ; ಶಾಶ್ವತ ಬಸ್ ನಿಲ್ದಾಣ, ತಂಗುದಾಣ ನಿರ್ಮಿಸಲು ಸದಸ್ಯರು ಇನ್ನಾದರೂ ಗಮನಹರಿಸಬೇಕಿದೆ ಎಂದು ಕೆ.ಬಿ.ರಾಮ ಕೃಷ್ಣಪ್ಪ, ವಕೀಲ ಸತೀಶ್, ಸ್ನೇಹಜೀವಿ ರಮೇಶ್, ಪುರಸಭೆ ಮಾಜಿ ಸದಸ್ಯ ಶಂಕರ್, ಶಶಿಕುಮಾರ್, ರಂಗನಾಥ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.