ADVERTISEMENT

ತೆರಿಗೆ ಪಾವತಿಸಿದರೂ ತಪ್ಪದ ಸಂಕಟ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:05 IST
Last Updated 7 ಜನವರಿ 2012, 10:05 IST

ತುಮಕೂರು: ಟಿಡಿಎಸ್ (ಆದಾಯ ಮೂಲದಲ್ಲಿ ತೆರಿಗೆ ಕಡಿತ) ಗಣಕೀಕರಣವಾದ ನಂತರ ಸಮಸ್ಯೆ ಕಾಣಿಸಿಕೊಂಡಿವೆ. ರಾಷ್ಟ್ರದ ಎಲ್ಲೆಡೆ ತೆರಿಗೆ ಪಾವತಿದಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬೆಂಗಳೂರು ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಗಣೇಶ್‌ರಾವ್ ಇಲ್ಲಿ ಗುರುವಾರ ಹೇಳಿದರು.

ಎಪಿಎಂಸಿ ಧಾನ್ಯ ವರ್ತಕರ ಸಂಘದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಟಿಡಿಎಸ್ ಬಗ್ಗೆ ತೆರಿಗೆದಾರರಿಂದ ನಿರಂತರ ದೂರುಗಳು ಕೇಳಿಬರುತ್ತಿವೆ. ಗಣಕೀಕರಣ ಆಗುತ್ತಿರುವ ಈ ಹಂತದಲ್ಲಿ ಸಮಸ್ಯೆಗಳು ಬರುತ್ತವೆ. ಆದರೆ ಆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ನಡೆದಿದೆ ಎಂದರು.

ವರ್ತಕರ ಸಂಘದ ಸದಸ್ಯರು, ಗುತ್ತಿಗೆದಾರರು ಸಂವಾದದಲ್ಲಿ ಪಾಲ್ಗೊಂಡರು. ಲೆಕ್ಕ ಪರಿಶೋಧಕರು ಮತ್ತು ಅಕೌಂಟೆಂಟ್‌ಗಳು ಸಹ ತಾವು ಎದುರಿಸಿದ ಸಮಸ್ಯೆಗಳನ್ನು ತೆರೆದಿಟ್ಟರು. ಸರಿಯಾಗಿ ಟಿಡಿಎಸ್ ಕಟ್ಟಿದ್ದರೂ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗುತ್ತಿದೆ. ಬ್ಯಾಂಕ್‌ಗಳ ಮೂಲಕ ಟಿಡಿಎಸ್ ಪಾವತಿಸಿದ ಸಂದರ್ಭದಲ್ಲೂ ಸಮಸ್ಯೆಗಳು ಕಂಡು ಬರುತ್ತಿವೆ. ಈ ಬಗ್ಗೆ ಲೆಕ್ಕ ಪರಿಶೋಧಕರಿಗಾಗಲಿ, ಬ್ಯಾಂಕ್ ಸಿಬ್ಬಂದಿಗಾಗಲಿ ಮಾಹಿತಿ ದೊರೆಯುತ್ತಿಲ್ಲ ಎಂದು ಹೇಳಿದರು.

ಯಾವ ಅಧಿಕಾರಿ ಭೇಟಿ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಇನ್ನು ಗುತ್ತಿಗೆ ಕೆಲಸ ಮಾಡಿದ ಹಣದಲ್ಲಿ ಟಿಡಿಎಸ್ ಮುರಿದುಕೊಂಡೇ ಬಿಲ್ ಪಾವತಿಸಲಾಗುತ್ತದೆ. ಆದರೆ ಈ ಬಗ್ಗೆ ತಾ.ಪಂ, ಜಿ.ಪಂ, ಸರ್ಕಾರಿ ಕಚೇರಿಗಳಲ್ಲೇ ತಿಳಿವಳಿಕೆ ಕಡಿಮೆ ಇದೆ. ಕಡೆಗೆ ಈ ಎಲ್ಲ ಕಾಣಗಳಿಂದ ನಷ್ಟ, ಮಾನಸಿಕ ಹಿಂಸೆ ಆಗುತ್ತಿರುವುದು ಗುತ್ತಿಗೆದಾರರಿಗೆ. ನಾವು ತೆರಿಗೆಯಿಂದ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲ.

ಇಷ್ಟು ಪ್ರಾಮಾಣಿಕವಾಗಿ ಟಿಡಿಎಸ್ ಪಾವತಿಸಿದ ನಂತರವೂ ನಮಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ತಮ್ಮ ಸಂಕಷ್ಟ ತೋಡಿಕೊಂಡರು. ನಿಯಮದಂತೆ ನಡೆದುಕೊಳ್ಳುತ್ತೇವೆ. ಸಮಸ್ಯೆಗಳನ್ನು ದಾಖಲೆ ಸಹಿತ ನೀಡಿದರೆ ಪರಿಹರಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿ ಶ್ರೀನಿವಾಸ್ ಖನ್ನಾ ಉತ್ತರಿಸಿದರು.

ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿ ಆದಾಯ ತೆರಿಗೆ ಇಲಾಖೆಯ ತಳಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ನಿಯೋಗದಲ್ಲಿ ತೆರಳಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತು-ಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುವ ಅಭಿಪ್ರಾಯ ವ್ಯಕ್ತವಾಯಿತು.

ಸಂವಾದದ ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಲೋಕೇಶ್, ಟಿಡಿಎಸ್ ಸ್ವೀಕರಿಸುವ ಅಧಿಕಾರಿ ಅರ್ಜಿ ಸರಿಯಾಗಿದೆಯೊ ಇಲ್ಲವೊ ಎಂಬುದನ್ನು ಪರೀಕ್ಷಿಸಿದರೆ ಸಮಸ್ಯೆ ಬಹುಪಾಲು ನಿವಾರಣೆ ಆಗುತ್ತದೆ. ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟುತ್ತಿರಬಹುದು, ಆದರೆ ಗುತ್ತಿಗೆದಾರರ ಲಾಭ ಕೂಡಾ ಅಷ್ಟಕ್ಕಷ್ಟೆ ಎಂದರು.

ಸಂವಾದದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಗೋವಿಂದರಾಜು, ಕೆ.ಎ. ಅಚ್ಯುತಾನಂದ ಮೂರ್ತಿ, ರಾಮಕೃಷ್ಣ, ಎಸ್.ಗಾಯತ್ರಿ, ಸುರೇಂದ್ರ ಶಾ ಮತ್ತಿತರರು ಪಾಲ್ಗೊಂಡಿದ್ದರು.

ಶಿವಶಂಕರ್ ಆರೋಪ ಅರ್ಥಹೀನ: ಶಿವಯೋಗಿಸ್ವಾಮಿ

ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 614 ಮಂದಿ ಅನರ್ಹರಿದ್ದಾರೆ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್.ಶಿವಶಂಕರ್ ಸಲ್ಲಿಸಿರುವ ಆಕ್ಷೇಪದಲ್ಲಿ ಯಾವುದೇ ಹುರಳಿಲ್ಲ ಎಂದು ಸರ್ಕಾರಿ ಮುಖ್ಯ ಸಚೇತ ಡಾ.ಎ.ಎಚ್.ಶಿವಯೋಗಿಸ್ವಾಮಿ ಇಲ್ಲಿ ಗುರುವಾರ ಸ್ಪಷ್ಟಪಡಿಸಿದರು.

ಅನುದಾನ ರಹಿತ ಶಾಲಾ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಿದ್ದಾರೆ. ಅಲ್ಲದೆ ಸಲ್ಲಿಕೆಯಾಗಿರುವ ಆಕ್ಷೇಪ ನಮೂನೆ 7ರಲ್ಲಿ ಸಲ್ಲಿಸಿಲ್ಲ. ಆದ್ದರಿಂದ ಆಕ್ಷೇಪಣೆ ಅಸಿಂಧುವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವೈ.ಎ.ನಾರಾಯಣಸ್ವಾಮಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮತ ದಾರರ ನೋಂದಣಿ ಪ್ರಕ್ರಿಯೆಯ ಕರುಡು ಈಗಾಗಲೇ ಸಿದ್ದಗೊಂಡಿದ್ದು, ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರು ನೋಂಣಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.