ADVERTISEMENT

ದುಡಿಮೆಗೆ ಅವಧಿ ಮಿತಿ: ಸಿಐಟಿಯು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 6:45 IST
Last Updated 7 ಅಕ್ಟೋಬರ್ 2011, 6:45 IST

ಮಧುಗಿರಿ: ಕಾರ್ಮಿಕರ ದುಡಿಮೆಯ ಅವಧಿಯನ್ನು ಕಡಿಮೆಗೊಳಿಸುವುದರಿಂದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಅವಕಾಶ ಸಿಗುತ್ತದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಹೇಳಿದರು.

ಪಟ್ಟಣದ ಬಸ್‌ನಿಲ್ದಾಣದಲ್ಲಿ ಸೆಂಟರ್ ಫಾರ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಜಾಗತಿಕ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಸ್ಥಾಪನಾ ದಿನದ ಅಂಗವಾಗಿ ಇತ್ತೀಚೆಗೆ ನಡೆದ ಸಮಾರಂಭ ಅವರು ಮಾತನಾಡಿದರು.

ಈ ಹಿಂದೆ ರಷ್ಯ ಕಾರ್ಮಿಕ ಚಿಂತನೆಯ ಪ್ರಭಾವದಿಂದ ಚಲನಚಿತ್ರಗಳಲ್ಲಿ ಶ್ರಮ ಸಂಸ್ಕೃತಿಯ ಮಾನವೀಯ ಚಿಂತನೆಗಳು ಅದ್ಭುತವಾಗಿ ಮೂಡಿ ಬರುತ್ತಿದ್ದವು. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನಪರ ಸಮಾಜ ಕಟ್ಟಲು ಕಾರ್ಮಿಕರಿಗೂ ಅವಕಾಶ ಸಿಗುತ್ತಿತ್ತು ಎಂದು ತಿಳಿಸಿದರು.

ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕರಣದ ಪರಿಣಾಮವಾಗಿ ಎಲ್ಲವನ್ನೂ ವ್ಯಾಪಾರಿ ಸಂಸ್ಕೃತಿ ಆವರಿಸಿದೆ. ಮಾನವೀಯ ಅಂಶಗಳು ಕಣ್ಮರೆಯಾಗಿವೆ. ಕೊಳ್ಳುಬಾಕ ಸಂಸ್ಕೃತಿಯ ಪ್ರೇರಣೆಯಿಂದಾಗುವ ಅಪರಾಧ ಚಟುವಟಿಕೆಗಳನ್ನೇ ಚಲನಚಿತ್ರಗಳು ವೈಭವೀಕರಿಸುತ್ತಿವೆ. ಯುವಕರು ದಿಕ್ಕು ತಪ್ಪುತ್ತಿದ್ದಾರೆ. ಕುಟುಂಬ ವ್ಯವಸ್ಥೆ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಸಂಘ ಕಟ್ಟಲು, ಸಭೆ ನಡೆಸಲು ಅವಕಾಶ ನೀಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಸೂಕ್ತ ವೇತನ, ಪ್ರತಿದಿನ 7 ಗಂಟೆಯಂತೆ ವಾರಕ್ಕೆ 35 ಗಂಟೆ ದುಡಿಮೆಯ ಅವಧಿಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಬೆಟ್ಟಪ್ಪ, ಲಕ್ಷ್ಮೀನಾರಾಯಣ, ವೀರಣ್ಣ, ಬಸವರಾಜು, ಅಂಗನವಾಡಿ ಕಾರ್ಮಿಕ ಸಂಘಟನೆಯ ಕಮಲ, ಮಲ್ಲಮ್ಮ, ಪಾರ್ವತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.