ADVERTISEMENT

ದೊಡ್ಡಬಳ್ಳಾಪುರ ಘಟಕಕ್ಕೆ ಕಸ ಸಾಗಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:40 IST
Last Updated 20 ಸೆಪ್ಟೆಂಬರ್ 2013, 8:40 IST

ತುಮಕೂರು: ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕ ಆರಂಭವಾಗುವವರೆಗೆ ದೊಡ್ಡಬಳ್ಳಾ­ಪುರದ ಕಸವಿಲೇವಾರಿ ಘಟಕಕ್ಕೆ ನಗರದ ಕಸ ಸಾಗಿಸಲು ನಗರಸಭೆ ವಿಶೇಷ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ನಗರಸಭೆ ಸಭಾಂಗಣದಲ್ಲಿ ಗುರುವಾರ ಗುಪ್ತವಾಗಿ ಕರೆದಿದ್ದ ವಿಶೇಷ ಸಭೆಯಲ್ಲಿ ನಗರದ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ನಗರದ ಕಸ ಹಾಕಲು ಸೂಕ್ತ ಜಾಗವಿಲ್ಲದೆ ತೀವ್ರ ಸಮಸ್ಯೆ ಆಗಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ಕಸ ಸಂಸ್ಕರಣೆ ಘಟಕದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಕಸ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಪ್ರತಿ ಟನ್‌ ಕಸ ಸಾಗಿಸಲು ರೂ. 175ಕ್ಕೆ ಗುತ್ತಿಗೆದಾರರನ್ನು ಒಪ್ಪಿಸಲಾಗಿದೆ ಎಂದು ಶಾಸಕ ಡಾ.ರಫಿಕ್‌ಅಹ್ಮದ್‌ ಹೇಳಿದರು.

ನಗರದಲ್ಲಿ ಪ್ರತಿ ನಿತ್ಯ 110 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಅಜ್ಜಗೊಂಡನಹಳ್ಳಿಯಲ್ಲಿ ಕಸ ಸಂಸ್ಕರಣೆ ಘಟಕ ಸ್ಥಾಪಿಸಲು 40 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ. ಆದರೆ ವಿವಿಧ ಕಾರಣಗಳಿಂದ ಅಲ್ಲಿ ಘಟಕ ಆರಂಭವಾಗಿಲ್ಲ. ಹಾಗಾಗಿ ಕಸವನ್ನು ಎಲ್ಲೆಂದರಲ್ಲಿ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ದೊಡ್ಡಬಳ್ಳಾಪುರಕ್ಕೆ ಕಸ ಸಾಗಿಸಲು ಒಪ್ಪಿಗೆ ನೀಡಬೇಕೆಂದು ಆಯುಕ್ತ ಅಶಾದ್‌ ಆರ್‌.ಷರೀಪ್‌ ಕೋರಿದರು.

ನಗರದ ಕಸವನ್ನು ಸಂಗ್ರಹಿಸಿ ರಿಂಗ್‌ರಸ್ತೆ­ಯಲ್ಲಿರುವ ನಗರಸಭೆ ಆವರಣದಲ್ಲಿ ಹಾಕುವುದು. ಅಲ್ಲಿಂದ ಗುತ್ತಿಗೆದಾರರು ಅದೇ ದಿನ ದೊಡ್ಡ­ಬಳ್ಳಾ­ಪುರಕ್ಕೆ ಸಾಗಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕಳೆದ ನಗರಸಭೆ ಅವಧಿಯಲ್ಲಿ ನಗರದ ಅಭಿವೃದ್ಧಿ ಸರಿಯಾಗಿ ನಡೆಲಿಲ್ಲ. ಸಭೆಗಳಲ್ಲಿ ನಗರದ ಅಭಿವೃದ್ಧಿ ಬಗ್ಗೆ ಸಮರ್ಪಕವಾಗಿ ಚರ್ಚೆ ನಡೆಯಲಿಲ್ಲ. ಈ ಬಾರಿಯಾದರೂ ಪಕ್ಷಾತೀತ­ವಾಗಿ ನಗರದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಎಂ.ಆರ್‌.­ಹುಲಿನಾಯ್ಕರ್‌ ಹೇಳಿದರು.

ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕಸ ಸಂಸ್ಕರಣೆ ಘಟಕ ಸ್ಥಾಪಿಸಲು 100 ಎಕರೆ ಭೂಮಿ ಕೋರಲಾಗಿದೆ. ಈ ಬಗ್ಗೆ ಪ್ರಯತ್ನ ನಡೆದರೆ ಅತ್ಯಾಧುನಿಕ ತಂತ್ರಜ್ಞಾನ ಕಸ ಸಂಸ್ಕರಣೆ ಘಟಕ ಸ್ಥಾಪಿಸಬಹುದು. ಸಮೀಪದ ಪಟ್ಟಣಗಳ ಕಸವನ್ನು ಸಹ ಅಲ್ಲಿಗೆ ಸಾಗಿಸಬಹುದು ಎಂದು ಅವರು ಹೇಳಿದರು.

ಕಳೆದ ಹಲವು ವರ್ಷಗಳಿಂದ ಟೆಂಡರ್‌ ಕರೆಯದೆ ಕಸ ವಿಲೇವಾರಿ ಮಾಡಿ ನಗರಸಭೆ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಇನ್ನು ಮುಂದೆ ಟೆಂಡರ್‌ ಮೂಲಕವೇ ಕಸ ವಿಲೇವಾರಿ ಮಾಡಬೇಕು ಎಂದು ಸದಸ್ಯ ಹನುಮಂತ­ರಾಯಪ್ಪ ಆಗ್ರಹಿಸಿದರು. ನಗರದ ಮಾಂಸ, ಮೀನು ಮಾರಾಟ ಅಂಗಡಿಗಳ ಮೇಲೆ ಕಸ ವಿಲೇವಾರಿ ತೆರಿಗೆ ವಿಧಿಸಬೇಕು ಎಂದು ಸದಸ್ಯ ನಯಾಜ್‌ ಅಹ್ಮದ್‌ ಆಗ್ರಹಿಸಿದರು.

ಸೆ. 23ರಂದು ಬೆಳಿಗ್ಗೆ 11ಕ್ಕೆ ಸದಸ್ಯರನ್ನು ದೊಡ್ಡಬಳ್ಳಾಪುರ ಕಸ ಸಂಸ್ಕರಣೆ ಘಟಕಕ್ಕೆ ಕರೆದೊಯ್ದು ಕಸ ವಿಲೇವಾರಿ ಘಟಕದ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು. ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಧನಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.