ADVERTISEMENT

ನಕಲಿ ಕಾರ್ಡ್ ಪತ್ತೆಗೆ ವಿಶೇಷ ಕಾರ್ಯತಂತ್ರ

ಪ್ರಜಾವಾಣಿ ವಿಶೇಷ
Published 6 ಜೂನ್ 2011, 8:45 IST
Last Updated 6 ಜೂನ್ 2011, 8:45 IST

ಮಧುಗಿರಿ: ಮನೆ ಕಂದಾಯ ಕಟ್ಟದಿದ್ದವರಿಗೆ ರೇಷನ್ ವಿತರಣೆ ಇಲ್ಲ ! ಇದು ಸರ್ಕಾರ ರೂಪಿಸಿರುವ ಹೊಸ ನೀತಿ ಅಲ್ಲ. ಆದರೆ ತಾಲ್ಲೂಕಿನಲ್ಲಿ ಈ ನೀತಿ ಜಾರಿಯಲ್ಲಿದೆ.

ಆಹಾರ ಇಲಾಖೆ ನಕಲಿ ರೇಷನ್ ಕಾರ್ಡ್ ಪತ್ತೆ ಹಚ್ಚಲು ಉಪಾಯ ಕಂಡುಕೊಂಡಿದೆ. ಅದೇನೆಂದರೆ ರೇಷನ್ ಕಾರ್ಡ್‌ನಲ್ಲಿ ಮನೆ ಖಾತೆ ನಂಬರ್ ನಮೂ ದಿಸುವುದು. ಗ್ರಾಮ ಪಂಚಾಯಿತಿ ಆಡಳಿತ ರೇಷನ್ ಕಾರ್ಡ್‌ಗೆ ಮನೆ ಖಾತೆ ನಂಬರ್ ನಮೂದಿಸುವುದು. ಈ ಕಾರ್ಡ್ ತಂದವರಿಗೆ ಮಾತ್ರ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್. ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆ ನಿರ್ದೇಶಕರ ಆದೇಶದಂತೆ ಇದು ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿದೆ.

ತಹಶೀಲ್ದಾರ್ ಮೌಖಿಕ ಆದೇಶ ನೀಡುತ್ತಿದ್ದಂತೆ ಗ್ರಾ.ಪಂ.ಆಡಳಿತ ಚುರುಕುಗೊಂಡಿದೆ. ಕಂದಾಯ ಕಟ್ಟಿದರೆ ಮಾತ್ರ ಖಾತೆ ನಂಬರ್ ನಮೂದಿಸಿ ಕೊಡುವುದಾಗಿ ಹೇಳಿದ್ದಾರೆ ಎಂಬ ಆರೋಪ ಬಡವರದ್ದು.
ಕೂಲಿ ಕಾರ್ಮಿಕರು, ಬಡವರ ಜೀವನ ನಿರ್ವಹಣೆಗೆ ನ್ಯಾಯಬೆಲೆ ಅಂಗಡಿಗಳ ರೇಷನ್ನೇ ಗತಿ.

 ಮನೆ ಕಂದಾಯ ಕಟ್ಟಿ, ಕಾರ್ಡ್‌ಗೆ ನಂಬರ್ ನಮೂದಿಸಿಕೊಳ್ಳಿ ಎಂದರೇ ಎಲ್ಲಿಂದ ಹಣ ತರುವುದು ಎಂಬ ಪ್ರಶ್ನೆ ಇವರ ನೋವಿನ ಪ್ರಶ್ನೆ.

ಸಾವಿರಾರು ರೂಪಾಯಿ ಕಂದಾಯ ಬಾಕಿ ಇದ್ದಾಗ ಇಷ್ಟೊಂದು ಹಣ ಕಟ್ಟಲು ಸಾಧ್ಯವಾಗದೆ ತಮ್ಮ ಹಕ್ಕಿನ ರೇಷನ್ ಪಡೆಯದೆ ವಂಚಿತರಾಗಿದ್ದಾರೆ ಎಂದು ಪುರವರ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜು ಆರೋಪಿಸಿದ್ದಾರೆ.

ಎಲ್ಲರಿಂದಲೂ ಕಂದಾಯ ವಸೂಲಿ ಮಾಡಬೇಕು ಎಂದು ಸರ್ಕಾರದ ಕಟ್ಟುನಿಟ್ಟಿನ ಆದೇಶ ಇದೆ ಎನ್ನುವ ಪಂಚಾಯಿತಿ ಅಧಿಕಾರಿಗಳು, ಕಟ್ಟದಿರುವವರ ಪಡಿತರ ಚೀಟಿ ವಜಾ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ ಎಂದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿ ವಸೂಲಿಗೆ ಮುಂದಾಗಿದ್ದಾರೆ ಎನ್ನುವುದು ಗ್ರಾಮೀಣರ ಆರೋಪ.

ಎಷ್ಟೋ ಮಂದಿ ಮನೆಯಲ್ಲಿದ್ದ ಅಲ್ಪ ಸ್ವಲ್ಪ ಆಭರಣ ಒತ್ತೆ ಇಟ್ಟರೆ, ಇನ್ನೂ ಕೆಲವರು ಕುರಿ, ಮೇಕೆ ಇತರ ಜಾನುವಾರು ಮಾರಿ ಹಣ ಸಂಗ್ರಹಿಸಿ ಕಂದಾಯ ಕಟ್ಟುತ್ತಿದ್ದಾರೆ ಎಂದು ವಡ್ಡರಹಳ್ಳಿ ರಂಗನಾಥ್ `ಪ್ರಜಾವಾಣಿ~ಗೆ ತಿಳಿಸಿದರು.

ತಹಶೀಲ್ದಾರ್ ಸ್ಪಷ್ಟನೆ: ನಕಲಿ ರೇಷನ್ ಕಾರ್ಡ್ ಪತ್ತೆ ಹಚ್ಚಲು ಪಂಚಾಯಿತಿಯಿಂದ ಮನೆ ಖಾತೆ ನಂಬರ್ ನಮೂದಿಸಿಕೊಂಡು ಬರುವಂತೆ ನಿರ್ದೇಶನ ನೀಡಿರುವುದು ನಿಜ. 

 ಆದರೆ ಕಂದಾಯ ಕಡ್ಡಾಯವಾಗಿ ಪಾವತಿಸಿಕೊಂಡು ನೀಡುವಂತೆ ಯಾವುದೇ ವಿಧವಾದ ಸೂಚನೆ ನೀಡಿಲ್ಲ ಎನ್ನುತ್ತಾರೆ ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ.

ಬಡವರಿಗೆ ಕಿರುಕುಳ ನೀಡದೆ ಮನ ಒಲಿಸಿ ಕಂದಾಯ ವಸೂಲಿ ಮಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡುವಂತೆ ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.   
 ಸಿ.ಎಸ್.ಗುರುರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.