ADVERTISEMENT

ನಡೆದಾಡುವ ದೈವ ಕಡ್ಲೆ ಗುರಿಯಣ್ಣ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 11:24 IST
Last Updated 16 ಏಪ್ರಿಲ್ 2018, 11:24 IST

ಚಿಕ್ಕನಾಯಕನಹಳ್ಳಿ: ರಾಟೆ ಸಂತ ಎಂದೇ ಹೆಸರಾಗಿದ್ದ ಕಡ್ಲೆ ಗುರಿಯಣ್ಣ (74) ಭಾನುವಾರ ನಿಧನರಾದರು. ಸಾವಿನ ಸುದ್ದಿ ಕೇಳಿದ ಭಕ್ತರು ತಂಡೋಪತಂಡವಾಗಿ ಚಿಕ್ಕನಾಯಕನಹಳ್ಳಿಗೆ ಆಗಮಿಸಿದರು.

ಪಾರ್ಥೀವ ಶರೀರವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಗೊರವಯ್ಯ, ಭಂಡಾರಿ, ದಾಸಪ್ಪಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪಟ್ಟಣದ ಹೊರವಲು ಗಾಂಧಿನಗರದ ದಕ್ಕಲಿಗ ಕೇರಿ ಬಳಿ ಅಂತ್ಯಸಂಸ್ಕಾರ ಮಾಡಲಾಯಿತು.

ತಮ್ಮದೇ ಶೈಲಿಯಲ್ಲಿ ಕಾಲಜ್ಞಾನ ಹೇಳುತ್ತಿದ್ದ ಗುರಿಯಣ್ಣ ಅವರು ನೇಯ್ಗೆಯನ್ನು ತಮ್ಮ ವೃತ್ತಿಯಾಗಿಸಿಕೊಂಡಿದ್ದರು. ಅಷ್ಟೇನೂ ವಿದ್ಯಾವಂತರಲ್ಲದ ಅವರು  ಜೀವನಾನುಭವಹೊಂದಿದ್ದರು.

ADVERTISEMENT

ಅವಿವಾಹಿತರಾಗಿದ್ದ ಇವರ ಬಳಿ ಜೀವಂತವಾಗಿದ್ದಾಗಲೇ ಅವಧೂತತ್ವ ತಲುಪಿದ್ದರು. ಸ್ಥಳೀಯರಲ್ಲದೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಇವರ ಬಳಿ ಬಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದರು.

ರಾಟೆ ಹೊಸೆದು ಜೀವನ ಸಾಗಿಸುತ್ತ ಬಸವಣ್ಣನ ಕಾಯಕ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು. ಕೆಲಸ ಮಾಡಿದ ದಿನ ಮಾತ್ರ ಊಟ ಮಾಡುತ್ತಿದ್ದರು. ದುಡಿಮೆ ಮಾಡದ ದಿನ ಉಪವಾಸ ಇರುತ್ತಿದ್ದರು. ಬೇರೆಯವರು ಏನಾದರೂ ತಿನ್ನಲು ಕೊಟ್ಟರೆ ಅವರ ಮನೆಯಲ್ಲಿ ಕೆಲಸ ಮಾಡಿ ಅನ್ನದ ಋಣ ತೀರಿಸುತ್ತಿದ್ದರು.

‘ಗುರಿಯಣ್ಣ ಅವರು ಯಾವುದೇ ಮಠಗಳಲ್ಲಿ, ದೇವಾಲಯದಲ್ಲಿ ಭಜನೆ ಮಾಡಿದವರಲ್ಲ. ತತ್ವ, ಧರ್ಮಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ರೀತಿಯಲ್ಲಿ ವಿಶ್ವಮಾನವ ತತ್ವ ಅಳವಡಿಸಿಕೊಂಡಿದ್ದರು’ ಎಂದು ಗಾಂಧಿವಾದಿ ಮಲ್ಲಿಕಾರ್ಜುನಯ್ಯ ಕಣ್ಣೀರಾದರು.

ಕುಟುಂಬ ಮನೆ ಮಠ ತೊರೆದ ಇವರು ಜಂಗಮರಂತೆ ಬದುಕಿದ್ದರು. ಬೇರೆಯವರ ಮನೆಯಲ್ಲಿ ರಾಟೆ ಹೊಸೆಯುತ್ತಿದ್ದರು. ದೇವಾಲಯದ ಜಗಲಿಗಳೇ ವಾಸದ ಮನೆಯಾಗಿತ್ತು.

‘ಚಿಕ್ಕನಾಯಕನಹಳ್ಳಿ ಸೇರಿದಂತೆ ಮೈಸೂರು, ಶಿವಮೊಗ್ಗ, ಹಾಸನ, ಚಿಂತಾಮಣಿ, ಕೋಲಾರ, ಜಗಳೂರು ದಾವಣಗೆರೆ ಹುಬ್ಬಳ್ಳಿ ಇನ್ನೂ ಹಲವಾರು ನಗರ ಪ್ರದೇಶಗಳಿಂದ ಇವರ ದರ್ಶನಕ್ಕಾಗಿ ಬಂದು ಭಕ್ತರು ದಿನಗಟ್ಟಲೆ ಕಾಯುತ್ತಿದ್ದರು. ಅವರ ಬೈಗುಳವನ್ನೇ ಆಶೀರ್ವಾದವೆಂದು ಭಾವಿಸಿ ಭಕ್ತರು ಪುನೀತರಾಗುತ್ತಿದ್ದರು.ಅಲೆಮಾರಿ,ಪಿಂಜಾರ ಸಮುದಾಯದ ಬಗ್ಗೆ ಅತಿಯಾದ ಅಕ್ಕರೆ ಹೊಂದಿದ್ದರು’ ಎಂದು ಬಾಲ್ಯದ ಗೆಳೆಯ ಗುರುಸಿದ್ದಪ್ಪ ನೆನೆಪಿಸಿಕೊಂಡರು.

ಭಕ್ತ ಗಂಗಾಧರ್ ಮಗ್ಗದಮನೆ ಮಾತನಾಡಿ, ’ತಾಲ್ಲೂಕು ಪವಾಡ ಪುರುಷರು, ಸಿದ್ಧರಿಗೆ ಹೆಸರಾದಂತಹ ಊರು. ಅದೇ ರೀತಿ ಕಾರೇಹಳ್ಳಿಗುರಿಯಣ್ಣ ಖ್ಯಾತಿಯ ಗುರುಲಿಂಗಯ್ಯ ಎಂಬ ಸಿದ್ಧಪರುಷರು ಹಲವಾರು ಮಂದಿಗೆ ಸಹಾಯ ಮಾಡಿರುವುದನ್ನು ನಾನು ಕಂಡಿದ್ದೇನೆ. ರಾಜ್ಯದ ನಾನಾ ಕಡೆಯಲ್ಲಿ ಇವರ ಭಕ್ತರ ದಂಡು ಇದೆ. ಸ್ಥಳೀಯವಾಗಿ ಅಷ್ಟು ಪರಿಚಿತರಲ್ಲದ ಅವರು ಬೇರೆ ಕಡೆ ಚಿರಪರಿಚಿತರು, ಪಟ್ಟಣದ ಹೊರವಲಯದ ಚಿಕ್ಕೇನಹಳ್ಳಿ ಮಠದ ಬಳಿ ಹೆಚ್ಚು ತಂಗುತ್ತಿದ್ದರು’ ಎಂದರು.

'ಗುರಿಯಣ್ಣ ತಾತ ಅಪ್ಪಟ ಭೈರಾಗಿ. ಒಂದು ಬಟ್ಟೆಗಂಟು ಬಿಟ್ಟರೆ ಅವರದಾಗಿ ಏನೂ ಇಲ್ಲ. ನಾಲ್ಕು ದಿನದ ಹಿಂದೆ ನನ್ನನ್ನು ಕರೆದು ನಿನ್ನ ಜಮೀನಿನಲ್ಲಿ ನನಗೆ ಜಾಗ ಕೊಡು ನಾನು ಹೋಗುವ ಕಾಲ ಬಂದಿದೆ ಎಂದು ಹೇಳಿದ್ದರು. ಅವರ ಆಸೆಯಂತೆ ನನ್ನ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆದಿದೆ. ತಾತನ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಲು ಭಕ್ತರು ಮುಂದೆ ಬಂದರೆ ಭಕ್ತಿಯಿಂದ ಜಮೀನು ಬಿಟ್ಟುಕೊಡುತ್ತೇನೆ' – ದೇವೀಕರಿಯಪ್ಪ,ಅಂತ್ಯ ಸಂಸ್ಕಾರಕ್ಕೆ ಜಮೀನು ನೀಡಿರುವ ತಾತನ ಭಕ್ತ.

'ಹಿರಿಯೂರು ಬಳಿ ಕಸ್ತೂರಿ ರಂಗಪ್ಪನಪಾಳ್ಯದಲ್ಲಿರುವ ಮಾತಾಜಿ ಆಶ್ರಮದ ಜತೆ ಗುರಿಯಣ್ಣ ತಾತ ನಿಕಟ ಸಂಪರ್ಕ ಹೊಂದಿದ್ದರು. ಕರೀಂ ಪೀರ್ ಸ್ವಾಮೀಜಿ ಜತೆ ಆಗಾಗ ಚಿಕ್ಕನಾಯಕನಹಳ್ಳಿಗೆ ಬಂದು ಭೇಟಿಯಾಗುತ್ತಿದ್ದೆವು.ಗುರುಗಳ ಸಾವಿನ ಸುದ್ದಿ ತಿಳಿದು ಆಶ್ರಮದ 10 ಜನ ಬಂದಿದ್ದೇವೆ' – ರೂಪಾ,ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.