ADVERTISEMENT

ನಾಳೆಯಿಂದ ನಾಲ್ಕು ದಿನ ಜಿಲ್ಲಾ ಉತ್ಸವ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 8:40 IST
Last Updated 9 ಫೆಬ್ರುವರಿ 2011, 8:40 IST

ತುಮಕೂರು: ಜಿಲ್ಲಾ ಸಂಸ್ಕೃತಿ ಸಂಭ್ರಮ ಉತ್ಸವ ಫೆ. 10ರಿಂದ 13ರ ವರೆಗೆ  ನಗರದಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಬಹುಭಾಷಾ ನಟಿ ಹೇಮಾಮಾಲಿನಿ, ಇಶಾ ಡಿಯೋಲ್ ಮತ್ತು ಅಹನಾ ಡಿಯೋಲ್ ಅವರ ನೃತ್ಯರೂಪಕ ಉತ್ಸವದ ಸಮಾರೋಪಕ್ಕೆ ಮೆರುಗು ನೀಡಲಿದೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಉತ್ಸವ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ತೀನಂಶ್ರೀ ವೇದಿಕೆ ಮತ್ತು ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ಪದ್ಮಶ್ರೀ ಶಿವಮೂರ್ತಿ ಶಾಸ್ತ್ರಿ ವೇದಿಕೆ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

10ರಂದು ಸಂಜೆ 4ಕ್ಕೆ ಉತ್ಸವದ ಮೆರವಣಿಗೆ ಆರಂಭವಾಗಲಿದ್ದು, ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಸಂಜೆ 6 ಗಂಟೆಗೆ ತೀನಂಶ್ರೀ ವೇದಿಕೆಯಲ್ಲಿ ಜಿಲ್ಲಾ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ, ಶಾಸಕ ಸೊಗಡು ಶಿವಣ್ಣ ಅಧ್ಯಕ್ಷತೆ ವಹಿಸುವರು. ರಾಜ್ಯಸಭೆ ಸದಸ್ಯೆ ಬಿ.ಜಯಶ್ರೀ ‘ಸಂಸ್ಕೃತಿ’ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ ದಿನ ಬೆಳಿಗ್ಗೆ ವಿಚಾರಗೋಷ್ಠಿ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿ.ದೊಡ್ಡಪ್ಪ, ಉಪವಿಭಾಗಾಧಿಕಾರಿ ಕುಮಾರ್, ಟುಡಾ ಆಯುಕ್ತ ಆದರ್ಶಕುಮಾರ್ ಇದ್ದರು.

ಉತ್ಸವದ ವಿಶೇಷ:
ಪ್ರಶಸ್ತಿ ಪುರಸ್ಕೃತ ಚಲನ ಚಿತ್ರೋತ್ಸವ, ಜಾನಪದ ನೃತ್ಯ, ಕನ್ನಡ ಸುಗಮ ಸಂಗೀತ ಗೋಷ್ಠಿ ಮತ್ತು ಗಾಯನ, ಗೀತ ನೃತ್ಯ, ಭರತನಾಟ್ಯ,  ರಂಗಗೀತೆಗಳು, ಕನ್ನಡ ಗೋಷ್ಠಿಗಳು,     ಕವಿ ಗೋಷ್ಠಿ, ಶಾಸ್ತ್ರೀಯ, ಹಿಂದೂಸ್ತಾನಿ ಸಂಗೀತ ನೃತ್ಯ ಸಂಭ್ರಮ, ನೃತ್ಯಗಳು, ಗಾಯನ ಹಾಗೂ     ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು ಈ ಬಾರಿಯ ಜಿಲ್ಲಾ ಉತ್ಸವ ವಿಶೇಷಗಳು.

10ರಂದು ಸಂಜೆ 7.30ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಶ್ರೀಧರ್ ಮತ್ತು ಅನುರಾಧಾ ದಂಪತಿಯಿಂದ ಭರತ ನಾಟ್ಯ, ರಾತ್ರಿ 8.30ಕ್ಕೆ ಶುಭಾ ಮಾಲ್ಗುಡಿ ಮತ್ತು ತಂಡದಿಂದ ಸಂಗೀತ ಸಂಜೆ, ಸಂಗೀತ ನಿರ್ದೇಶಕ ಕಲ್ಯಾಣ್, ನಟ ಕೋಮಲ್‌ಗೆ ಸನ್ಮಾನ ನಡೆಯಲಿದೆ.ಪ್ರಶಸ್ತಿ ಪುರಸ್ಕೃತ ಚಲನ ಚಿತ್ರೋತ್ಸವದ ಅಂಗವಾಗಿ ಫೆ. 11ರಂದು ಬೆಳಿಗ್ಗೆ 8.30ಕ್ಕೆ ಬೇರು (ಗಾಯತ್ರಿ ಚಿತ್ರಮಂದಿರ), ಮೌನಿ (ಪ್ರಶಾಂತ ಚಿತ್ರಮಂದಿರ) ಹಾಗೂ ಶಬರಿ (ಕೃಷ್ಣ ಚಿತ್ರಮಂದಿರ) ಚಲನ ಚಿತ್ರಗಳ ಪ್ರದರ್ಶನ ನಡೆಯಲಿದೆ. ಸಂಜೆ 7.45ಕ್ಕೆ ಚಿತ್ರನಟಿ ಡೈಸಿ ಬೋಪಣ್ಣ ತಂಡದಿಂದ ನೃತ್ಯ ಸೌರಭ, 8.30ಕ್ಕೆ ಕವಿತಾ ಕೃಷ್ಣಮೂರ್ತಿ ಅವರಿಂದ ಗಾಯನ ಮಾಧುರ್ಯ ಮತ್ತು ತಂಡದಿಂದ ನೃತ್ಯ ಪ್ರದರ್ಶನವಿದೆ. ಚಿತ್ರ ನಟರಾದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ,ರಂಗಾಯಣ ರಘು, ದೊಡ್ಡಣ್ಣ ಅವರನ್ನು   ಸನ್ಮಾನಿಸಲಾಗುವುದು.

12ರಂದು ಮಧ್ಯಾಹ್ನ 12.30ಕ್ಕೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದೆ. ಸ್ಥಳೀಯ ಕಲಾವಿದರಿಂದ ಜಾನಪದ ನೃತ್ಯ ಮತ್ತು ಜಿಲ್ಲೆಯ ಜಾನಪದ ಕಲಾವಿದರಿಗೆ ಅಭಿನಂದನೆ ಇದೆ. ಸಂಜೆ 5.30ಕ್ಕೆ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಂದ ಹಿಂದೂಸ್ತಾನಿ ಗಾಯನ, 6.30ಕ್ಕೆ ಅಂತರರಾಷ್ಟ್ರೀಯ ಕಲಾವಿದ ಅಶೋಕ್‌ಕುಮಾರ್ ತಂಡದಿಂದ ನಾಟ್ಯಾಂಜಲಿ, 7.15ಕ್ಕೆ ನಾಟ್ಯ ಶಾರದೆ ಶೋಭನಾ ತಂಡದಿಂದ ನಾಟ್ಯ ಸಂಜೆ, 8.45ಕ್ಕೆ ರಘು ದೀಕ್ಷಿತ್ ತಂಡದಿಂದ ಪಾಪ್ ಸಂಯೋಜಿತ ವಿಭಿನ್ನ ಶೈಲಿಯ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿವೆ. ಖ್ಯಾತ ನಟಿ ಲೀಲಾವತಿ, ನಟರಾದ ವಿನೋದ್‌ರಾಜ್, ವಿಜಯ ರಾಘವೇಂದ್ರ ಅವರನ್ನು ಇದೇ ಸಂದರ್ಭದಲ್ಲಿ     ಸನ್ಮಾನಿಸಲಾಗುತ್ತಿದೆ.

13ರಂದು ಸಂಜೆ 6.30ಕ್ಕೆ ತೀನಂಶ್ರೀ ವೇದಿಕೆಯಲ್ಲಿ ಗಾಯಕರಾದ ಬದರಿನಾಥ್, ಹೇಮಂತ್, ನಂದಿತಾ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ. ರಾತ್ರಿ 8 ಗಂಟೆಗೆ ನಡೆಯುವ ಸಮಾರೋಪದಲ್ಲಿ ಬಹುಭಾಷಾ ತಾರೆ ಹೇಮಾಮಾಲಿನಿ ಮತ್ತು ಅವರ ಪುತ್ರಿಯರಾದ ಇಶಾ ಡಿಯೋಲ್, ಡಿಯೋಲ್ ಅವರಿಂದ ನೃತ್ಯ ರೂಪಕ ಇದೆ. ರಾತ್ರಿ 11 ಗಂಟೆಗೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಕೂಡ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.