ADVERTISEMENT

ನೀರು ಪೋಲು: ಸದಸ್ಯರ ದೂರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 9:45 IST
Last Updated 1 ಜುಲೈ 2012, 9:45 IST

ಕುಣಿಗಲ್: ಪಟ್ಟಣದ ದೊಡ್ಡಕೆರೆ ರಾಮಬಾಣ ಹಂತದ ಕಾಲುವೆಯಲ್ಲಿ ಎಂಟು ತಿಂಗಳಿಂದಲೂ ನೀರು ಪೋಲಾಗಿ ಹರಿದು ಹೋಗುತ್ತಿದ್ದರೂ; ಹೇಮಾವತಿ ನಾಲಾ ವಲಯದ ಎಂಜಿನಿಯರ್‌ಗಳು ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಆರೋಪಿಸಿದ್ದಾರೆ.

ದೊಡ್ಡಕೆರೆಗೆ ಲಕ್ಷ್ಮಿದೇವಿ ಹಂತ ಮತ್ತು ರಾಮಬಾಣ ಹಂತ ಕಾಲುವೆಗಳಿದ್ದು, ಈ ಹಿಂದೆ ಇವುಗಳಿಂದ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶದ ಸುಮಾರು ಎರಡು ಸಾವಿರ ಎಕರೆ ಪ್ರದೇಶಗಳಿಗೆ ಕೃಷಿ ಚಟುವಟಿಕೆಗಾಗಿ ನೀರನ್ನು ಬಿಡಲಾಗುತಿತ್ತು. ನಂತರ ಹೇಮಾವತಿ ನೀರನ್ನು ದೊಡ್ಡಕೆರೆಗೆ ಹರಿಸಿ ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ರಾಮಬಾಣ ಹಂತದ ಕಾಲುವೆಗೆ ಸಂಬಂಧಿಸಿದ ತೂಬು ಎಂಟು ತಿಂಗಳ ಹಿಂದೆ ಹಾನಿಗೊಳಗಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳದೆ ನಿರಂತರವಾಗಿ ನೀರು ಹರಿದು ನಾಗಿನಿ ನದಿ ಸೇರುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯರಾದ ಕೆ.ಎಲ್.ಹರೀಶ್, ಆರ್.ರಮೇಶ್ ಆರೋಪಿಸಿದ್ದಾರೆ.

ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ನಂತರ ತಾತ್ಕಾಲಿಕವಾಗಿ ನೀರಿನ ತೂಬು ಬಂದ್ ಮಾಡಲಾಗಿದೆಯೆ ಹೊರತು, ಹರಿಯುತ್ತಿರುವ ನೀರನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕೆರೆಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಶೀಘ್ರ ದುರಸ್ತಿ ಪಡಿಸಿ ನೀರಿನ ಹರಿವು ತಡೆಗಟ್ಟಬೇಕು, ಜಾಕ್‌ವೆಲ್ ಬಳಿ ಸಂಗ್ರಹವಾಗಿರುವ ಹೂಳು ತೆರವುಗೊಳಿಸಿ ಸುಗಮ ನೀರಿನ ಸಂಗ್ರಹಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕುವೆಂಪು ವೇದಿಕೆಗೆ ಆಯ್ಕೆ
ಅಖಿಲ ಕರ್ನಾಟಕ ಕುವೆಂಪು ವೇದಿಕೆ ಅಮೃತೂರು ಹೋಬಳಿ ಮಟ್ಟದ ಅಧ್ಯಕ್ಷರಾಗಿ ಎಸ್.ಎನ್.ನಾಗರಾಜು, ಉಪಾಧ್ಯಕ್ಷ- ಎಸ್.ವಿ.ಲೋಕೇಶ್, ಕಾರ್ಯದರ್ಶಿ- ಕೆ.ಎಚ್.ರಾಮೇಗೌಡ, ಖಜಾಂಚಿ- ಎಸ್.ಆರ್.ಲೋಕೇಶ್, ಸಂಘಟನಾ ಕಾರ್ಯದರ್ಶಿ- ಅಶೋಕ್‌ಕುಮಾರ್ ಆಯ್ಕೆಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.