ADVERTISEMENT

ಪಿಡಬ್ಲ್ಯುಡಿ ಎಂಜಿನಿಯರ್‌ಗೆ ದಿಗ್ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 9:00 IST
Last Updated 13 ಜನವರಿ 2011, 9:00 IST

ತುಮಕೂರು: ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರನ್ನು ಕೊಠಡಿಯಲ್ಲಿ ಕೂಡಿ ಬೀಗ ಹಾಕಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಗುತ್ತಿಗೆದಾರ ವೇಣುಗೋಪಾಲ್ ಅವರು ಕಳೆದ ಮೂರು ವರ್ಷಗಳಿಂದ ನಡೆಸಿರುವ ಕಾಮಗಾರಿಗಳಿಗೆ ರೂ.19 ಕೋಟಿ ಬಾಕಿ ಬಿಲ್ ಕೇಳಲು ಹೋದಾಗ ಮಂಜುನಾಥ್ ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ. ಇದರಿಂದ ಕುಪಿತರಾದ ವೇಣುಗೋಪಾಲ್ ಮತ್ತು ಅವರ ಬೆಂಬಲಿಗ ಗುತ್ತಿಗೆದಾರರು ಕಾರ್ಯಪಾಲಕ ಎಂಜಿನಿಯರ್ ಕುಳಿತ್ತಿದ್ದ ಕೊಠಡಿಗೆ ಬೀಗ ಜಡಿದು ಘೋಷಣೆ ಕೂಗಿದರು. ಗುತ್ತಿಗೆದಾರರ ಇನ್ನೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬೀಗ ತೆಗೆಸಿತು. ಇದರಿಂದ ಗುತ್ತಿಗೆದಾರರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೈಮೀರಲಿದ್ದ ಪರಿಸ್ಥಿತಿ ತಿಳಿಗೊಳಿಸಿದರು.

17ರಂದು ಕೊಳೆಗೇರಿ  ನಿವಾಸಿಗಳ ಪ್ರತಿಭಟನೆ
ಕೊಳಗೇರಿ ನಿವಾಸಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ. 17ರಂದು ನಗರದ ಟೌನ್‌ಹಾಲ್ ವೃತ್ತದ ಸಮೀಪ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ-ಜನಾಂದೋಲನ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.

ಕೊಳೆಗೇರಿ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು, ಕೊಳೆಗೇರಿ ನಿವಾಸಿಗಳಿಗೆ ಭೂ ಹಕ್ಕು ಖಾತ್ರಿಪಡಿಸುವುದು, ಪಡಿತರ ವಿತರಣೆಯಲ್ಲಿ ಯೂನಿಟ್ ಪದ್ದತಿ ರದ್ದುಗೊಳಿಸಬೇಕು ಎಂದು ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ    ಆಗ್ರಹಿಸಿದರು.

ಕೊಳೆಗೇರಿ ನಿವಾಸಿಗಳ ಹಿತಕಾಯಲು ಅಸ್ತಿತ್ವಕ್ಕೆ ಬಂದ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿದೆ. ಕೊಳಚೆ ನಿರ್ಮೂಲನಾ ಅಧಿನಿಯಮ 1973ರ ಕಾಯ್ದೆಯನ್ನು ಬದಲಾಯಿಸದೆ ಮಂಡಳಿ ಹೆಸರು ಬದಲಾಯಿಸಬಾರದು. ರಾಜ್ಯದ ಕೊಳೆಗೇರಿ ಜನಸಂಖ್ಯೆಗೆ ಅನುಗುಣವಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ತರಬೇಕು. ಕೊಳಚೆ ಪ್ರದೇಶಗಳಿಗೆ ಸ್ವಾಧೀನ ಪತ್ರದ ಬದಲಾಗಿ ಗುರುತಿನ ಚೀಟಿ ನೀಡಬೇಜು. ಕೊಳೆಗೇರಿ ನಿವಾಸಿಗಳಿಗೆ ಭೂ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.

ಅದೇ ರೀತಿ ತುಮಕೂರಿನಲ್ಲಿ ನೆನೆಗುದಿಗೆ ಬಿದ್ದಿರುವ ಆಶ್ರಯ ನಿವೇಶನಗಳನ್ನು ಪ್ರಥಮ ಆದ್ಯತೆಯಡಿ ಅರ್ಹ ಕುಟುಂಬಗಳಿಗೆ ವಿತರಿಸಬೇಕೆಂದು ಹೇಳಿದರು.
ಸಮಿತಿ ಜಿಲ್ಲಾ ಅಧ್ಯಕ್ಷ ಸೈಯದ್ ಅಲ್ತಾಫ್, ದಲಿತ ಕ್ರೈಸ್ತ ಒಕ್ಕೂಟದ ಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀರಮ್ಮ, ಕಾಶಿರಾಜ ಗೋಷ್ಠಿಯಲ್ಲಿ ಹಾಜರಿದ್ದರು.

27ರಂದು ಸತ್ಯಾಗ್ರಹ
ತುಮಕೂರು- ಮಧುಗಿರಿ ರಸ್ತೆ ಹದಗೆಟ್ಟು ಹಲವು ದಿನಗಳು ಕಳೆದಿವೆ. ಈ ನಿಟ್ಟಿನಲ್ಲಿ ರಸ್ತೆ ಸುಧಾರಿಸುವಂತೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಜ. 27ರಂದು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.

ರಾಜ್ಯದಲ್ಲಿ ನೀರಾವರಿ, ವಿದ್ಯುತ್, ರೈಲ್ವೆ ಯೋಜನೆಗಳು ಕುಂಟುತ್ತಾ ಸಾಗಿವೆ. ಇನ್ನು ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ರಾಜ್ಯದಲ್ಲಿ ಮೀಟರ್‌ಗೇಜ್‌ನಿಂದ ಬ್ರಾಡ್‌ಗೇಜ್ ಪರಿವರ್ತನಾ ಕಾರ್ಯವು ಆಮೆಗತಿಯಲ್ಲಿ ಸಾಗಿದೆ. ಇನ್ನು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪನ್ಮೂಲವನ್ನು ಲೂಟಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿ ಕರ್ನಾಟಕ ಜನತಾ ಪಕ್ಷದ ಸಂಘಟನೆ ಬಲಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕಳೆದ 60 ವರ್ಷಗಳಲ್ಲಿ ರಾಜ್ಯದ ಬೆರಳೆಣಿಕೆಯಷ್ಟು ರೈಲ್ವೆ ಮಾರ್ಗಗಳು ಪ್ರಗತಿ ಕಂಡಿವೆ. ಕಳೆದ ಹಲವು ದಶಕಗಳಿಂದ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಮೋಹನ್‌ಕುಮಾರ್, ಜಿಲ್ಲಾ ಸಂಚಾಲಕ ನಟರಾಜೇಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಲ್ಲೇಶ್, ಜಿಲ್ಲಾ ಕಾರ್ಯದರ್ಶಿ ನಾಗೇಂದ್ರಪ್ಪ ಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.