ADVERTISEMENT

ಪಿಯು ಪರೀಕ್ಷಾ ಪ್ರವೇಶ ಪತ್ರದಲ್ಲಿ ಜಾತಿ ನಮೂದು: ಟೀಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 7:45 IST
Last Updated 6 ಮಾರ್ಚ್ 2012, 7:45 IST

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಗಳ ಜಾತಿ ನಮೂದು ಮಾಡಿರುವ ಪರೀಕ್ಷಾ ಮಂಡಳಿ ಕ್ರಮವನ್ನು ಪಿಯು ಮಂಡಳಿ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಖಂಡಿಸಿದ್ದಾರೆ.

ಇದೇ ಮೊದಲ ಸಲ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಜಾತಿ ನಮೂದಿಸಲಾಗಿದೆ. ಇದು ಕೆಟ್ಟ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿ ಗುರುತಿಸಲು ಪ್ರವೇಶ ಪತ್ರದೊಂದಿಗೆ ವಿದ್ಯಾರ್ಥಿಯ ಫೋಟೊ ಇರುತ್ತದೆ. ಜತೆಗೆ ಸಹಿ ಕೂಡ ಇರುತ್ತದೆ. ಆದರೆ ಜಾತಿ ನಮೂದು ಮಾಡುವುದರಿಂದ ಪರೀಕ್ಷಾ ವ್ಯವಸ್ಥೆ ಭ್ರಷ್ಟಗೊಳ್ಳುವ ಅಪಾಯವಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.|

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಅವರನ್ನು ಜಾತಿ ಕಣ್ಣಿನಿಂದ ಗುರುತಿಸುವ ಅಪಾಯವಿದೆ. ಅಗಾಧ ಸಂಖ್ಯೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಂಭವ ಹೆಚ್ಚಾಗುತ್ತದೆ. ಅಲ್ಲದೆ ಜಾತಿ ಎಂಬುದು ಪ್ರೀತಿ ಮತ್ತು ಈರ್ಷ್ಯೆ ಎರಡಕ್ಕೂ ಕಾರಣವಾಗುತ್ತದೆ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತದೆ ಎಂದಿದ್ದಾರೆ.

ಜಾಗೃತ ದಳ ಉಪನ್ಯಾಸಕರು ಪರೀಕ್ಷಾ ತಪಾಸಣೆಗೆ ಬಂದಾಗ ವಿದ್ಯಾರ್ಥಿ ಜಾತಿ ಗಮನಿಸಿ ಆತನ ತಪಾಸಣೆಗೊಳಪಡಿಸುವ, ನೋಡುವ ವಿಧಾನವೇ ಬದಲಾಗುವ ಸಂಭವವಿದೆ. ಸರ್ಕಾರ ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.


ಎಚ್‌ಎಂಎಸ್‌ನಲ್ಲಿ ಉದ್ಯೋಗ ಮೇಳ ನಾಳೆ
ತುಮಕೂರು: ಮಂಚಕಲ್ ಕುಪ್ಪೆಯಲ್ಲಿರುವ  ಎಚ್‌ಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ಉತ್ತೀರ್ಣರಾದ (2010-11) ವಿದ್ಯಾರ್ಥಿಗಳಿಗೆ ಮಾರ್ಚ್ 7ರಂದು ಬೆಳಿಗ್ಗೆ 9 ಗಂಟೆಗೆ ಉದ್ಯೋಗ ಮೇಳ ಏರ್ಪಡಿಸಿದೆ.

ಐಬಿಎಂ ಕಂಪೆನಿ ಸಂದರ್ಶನ ನಡೆಸಲಿದೆ. ಬಿಎ, ಬಿಕಾಂ, ಬಿಬಿಎಂ, ಬಿಎಸ್‌ಸಿ, ಬಿಇ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿವರಕ್ಕೆ ಉದ್ಯೋಗಾಧಿಕಾರಿ ಟಿ.ಎಸ್.ರಮೇಶ್ ಮೊ 9900570991 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.