ಮಧುಗಿರಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವ್ಯರ್ಥವಾಗಿ ಸಮುದ್ರ ಪಾಲಾಗುತ್ತಿರುವ ನೇತ್ರಾವತಿ ನದಿಯ 180 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವ ಹಾಗೂ ಎತ್ತಿನಹೊಳೆ ಯೋಜನೆಯ ನೀರನ್ನು ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಬಳಿ ನೂತನವಾಗಿ ನಿರ್ಮಿಸುವ ಡ್ಯಾಂನಲ್ಲಿ ಶೇಖರಿಸಿ ಕೊರಟಗೆರೆ, ಮಧುಗಿರಿ ತಾಲ್ಲೂಕಿನ 45 ಕೆರೆಗಳಿಗೆ ಹರಿಸುವ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ತಾಲ್ಲೂಕಿನ ಬ್ಯಾಲ್ಯಾ, ಕೊಡಗದಾಲ, ಕೊಂಡವಾಡಿ, ಕೋಡ್ಲಾಪುರ, ಗೊಂದಿಹಳ್ಳಿ ಗ್ರಾಮಗಳಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ ನೀಡಿದ್ದ ರೂ.4500 ಕೋಟಿಯಲ್ಲಿ ರೂ.880 ಕೋಟಿ ಮಾತ್ರ ವೆಚ್ಚ ಮಾಡಿದೆ. ಜಿಲ್ಲೆಗೆ ಬಂದ ರೂ.49 ಕೋಟಿಯಲ್ಲಿ ಕೇವಲ ರೂ.3.5 ಕೋಟಿ ಬಳಕೆಯಾಗಿದೆ. ಎನ್‌ಆರ್‌ಇಜಿ ಯೋಜನೆಯಿಂದ ಗ್ರಾಮೀಣ ಜನರಿಗೆ ಕಡ್ಡಾಯವಾಗಿ 150 ದಿನ ಉದ್ಯೋಗ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ 8ಸಾವಿರ ಮನೆಗಳಲ್ಲಿ ಪುರವರ ಹೋಬಳಿಗೆ 650ಮನೆ ನೀಡಲಾಗಿದೆ. ವಜಾ ಮಾಡಲಾದ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆಯ ಅರ್ಜಿಗಳನ್ನು ಮರು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಅಧ್ಯಕ್ಷೆ ಪ್ರೇಮಾ ಮಹಾಲಿಂಗಯ್ಯ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಎಚ್.ಸಿ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಯಶೋಧಾ ರಾಜಣ್ಣ, ಉಪಾಧ್ಯಕ್ಷೆ ಸಿದ್ದಗಂಗಾಬಿಕೆ, ಸದಸ್ಯರಾದ ರಾಮಾಂಜಿನಮ್ಮ, ಮಹಾಲಕ್ಷ್ಮಮ್ಮ, ಮಲ್ಲಿಕಾರ್ಜುನ್ ಮಂಜುಳಾ, ಜಿ.ಪಂ. ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ಗ್ರಾ.ಪಂ ಅಧ್ಯಕ್ಷರಾದ ಸಿದ್ದಗಂಗಮ್ಮ, ಅಂಜಿನಪ್ಪ, ಲೋಕೇಶ್, ಗೋವರ್ಧನ್, ಕೊರಟಗೆರೆ ಬಿಸಿಸಿ ಅಧ್ಯಕ್ಷ ಮೈಲಾರಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.